ಶಿವಮೊಗ್ಗ

ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ಸಾವಿರ ಕೋಟಿ

Published On :

ಹೊಸದುರ್ಗ: ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ಬಂದರೆ ಸಾವಿರಾರು ಕೋಟಿ ಮೊತ್ತವನ್ನು ಮಠಗಳ ಅಭಿವೃದ್ಧಿಗೆ ಅನುದಾನ ನೀಡುವೆ ಎಂದು ಮಾಜಿ ಮುಖ್ಯಮಂತ್ರಿ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.  
ಶನಿವಾರ ತಾಲೂಕಿನ ಕಸಬಾ ಹೋಬಳಿ ಜಮ್ಮಾಪುರ ಗ್ರಾಮದಲ್ಲಿ ಸೋಮಲಿಂಗೇಶ್ವರ ಸ್ವಾಮಿ, ಚೌಡೇಶ್ವರಿ ದೇವಿ ಹಾಗೂ ಆಂಜನೇಯ ಸ್ವಾಮಿ ನೂತನ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
     ಮಠಗಳು ಮಾಡುತ್ತಿರುವ ಕ್ರಿಯಾಶೀಲ ಸಾಮಾಜಿಕ ಕಾರ್ಯಗಳಿಗೆ ಹಣ ನೀಡುವುದು ತಪ್ಪಲ್ಲ.  ಭಕ್ತರ ಸೌಲಭ್ಯಕ್ಕೆ ಮಠಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ನೆರವಾಗುವುದು ಸರಿಯಾದ ಕ್ರಮ. ರಾಜ್ಯದಲ್ಲಿ  ಮಠಗಳ ಅಭಿವೃದ್ಧಿಗೆ ಹಣ ನೀಡುವುದಕ್ಕೆ ಚಾಲನೆ ನೀಡಿ, ನನ್ನ ಅಧಿಕಾರಾವಧಿಯಲ್ಲಿ ಸುಮಾರು ರು. 700 ಕೋಟಿ ಅನುದಾನ ನೀಡಿದೆ ಎಂದರು.
   ಅನೇಕ ಸ್ವಾಮಿಗಳು ಧಾರ್ಮಿಕತೆಯ ಬದಲಾವಣೆಯ ಹರಿಕಾರರಾಗಿದ್ದಾರೆ. ರಾಷ್ಟ್ರಪ್ರಜ್ಞೆ, ಸಾಮಾಜಿಕಪ್ರಜ್ಞೆ, ಧರ್ಮ ಪ್ರಜ್ಞೆ ಬೀಸುತ್ತಿದ್ದಾರೆ. ಧರ್ಮದಿಂದ ಮಾತ್ರ ಜಗತ್ತಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು.
ಚಿಂತನೆ ಅಗತ್ಯ: ಧರ್ಮಗಳೇ ವಿಶ್ವಕ್ಕೆ ತಾರಕ ಮಂತ್ರವಾಗಿದೆ. ಈ ಬಗ್ಗೆ ಚಿಂತನೆಗಳು ಅಗತ್ಯ. ಧರ್ಮ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜಾತೀಯತೆ, ಅನಿಷ್ಟ ಪ್ರವೃತ್ತಿಗಳು ಪರಿಹಾರಗೊಂಡು ಪ್ರೀತಿಯ ಪ್ರಣತಿ ಹಚ್ಚಬಹುದಾಗಿದೆ ಎಂದರು.  
ಬಹಳ ಜನರಲ್ಲಿ ಪಟ್ಟಣದ ಗೀಳು ಹೆಚ್ಚುತ್ತಿರುವುದು ಅವಮಾನಕರ ಸಂಗತಿ. ಪ್ರತಿ ಹೊಲಗಳಿಗೆ ನೀರು ಕೊಡುವ ಗುರಿ ಹೊಂದಿರುವೆ.
  ಅಪ್ಪರ್ ಭದ್ರಾ ಹರಿಸಲು ರು. 14 ಸಾವಿರ ಕೋಟಿ ಮಂಜೂರು ಮಾಡಿದೆ. ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಂಡು ಕೆರೆ ಕಟ್ಟೆಗಳು ತುಂಬಬೇಕೆಂಬುದು ನಮ್ಮ ಪಕ್ಷದ ಗುರಿ ಎಂದರು.
    ರಾಜ್ಯ ಗುಡಿಸಲು ರಹಿತ ರಾಜ್ಯವಾಗಬೇಕು. ಎಲ್ಲರಿಗೂ ಶಿಕ್ಷಣ ದೊರೆಯಬೇಕು. ರೈತರ ಬೆಳೆಗೆ ಹೆಚ್ಚಿನ ಬೆಲೆ ದೊರೆಯಬೇಕೆಂದು ಸಂಕಲ್ಪ ಮಾಡಿರುವೆ. ರಾಜ್ಯದ ಎಲ್ಲ ವರ್ಗದ ಸಮಾಜಕ್ಕೂ ಸಮಾನ ನೆರವು ನೀಡಿರುವೆ. ಕನಕ, ವಾಲ್ಮೀಕಿ ಜಯಂತಿ ಘೋಷಿಸಿದೆ. ಭಾಗ್ಯಲಕ್ಷ್ಮಿ ಯೋಜನೆ ಮಹಿಳೆಯರಿಗೆ ನೆರವಾಗಿದೆ. ಹೈನುಗಾರಿಕೆಗೆ ಒತ್ತು ನೀಡುತ್ತೇನೆ ಎಂದರು.
ನಂಬಿದವರು ಕೈಕೊಟ್ಟರು: ನಾನು ಯಾವುದೇ ಅಪರಾಧ ಮಾಡದಿದ್ದರೂ ನಿರಪರಾಧಿಯನ್ನು 24 ದಿನ ಜೈಲಿಗೆ ಕಳುಹಿಸಿದರು. ನಂಬಿದವರೆಲ್ಲ ಕೈ ಕೊಟ್ಟರು. ನಮ್ಮವರೇ ನನ್ನ ಬೆನ್ನಿಗೆ ಚಾಕು ಹಾಕಿದರು.
   ರಾಜಕೀಯವಾಗಿ ನನ್ನನ್ನು ಮುಗಿಸಲು ನಮ್ಮವರೇ ಸೇರಿ ಸಂಚಿನ ಬಲೆ ಹೆಣೆದರು ಎಂದು ಟೀಕಿಸಿದರು. ಕರ್ನಾಟಕವನ್ನು ಗುಜರಾತಿನ ಮಾದರಿ ರಾಜ್ಯವನ್ನಾಗಿಸಲು ನಮ್ಮ ಪಕ್ಷ ಬೆಂಬಲಿಸಿ ಎಂದರು.   
  ಬಾಳೆಹೊನ್ನೂರು ರಂಭಾಪುರಿ ವೀರಸಿಂಹಾಸನಧೀಶ್ವರ ಜಗದ್ಗುರು  ವೀರ ಸೋಮೆಶ್ವರ ರಾಜದೇಶಿಕೇಂದ್ರ  ಸ್ವಾಮೀಜಿ, ಹಣ್ಣೆ ಮಠದ ಶಿವಾನಂದ ಸ್ವಾಮೀಜಿ, ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು.  
ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಕೆಜೆಪಿ ಮುಖಂಡರಾದ ಲಿಂಗಮೂರ್ತಿ, ಆಲಘಟ್ಟದ ಪರಮೇಶ್ವರಪ್ಪ,   ಮಾಜಿ ಶಾಸಕರಾದ ಚಂದ್ರಪ್ಪ, ಪಿ. ರಮೇಶ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ರೇವಣಪ್ಪ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.