ಶಿವಮೊಗ್ಗ

ಸರ್ಕಾರದ ಅಂತರ್ಜಾಲದಲ್ಲಿ ಕನ್ನಡ ಕಡ್ಡಾಯ

Published On :

ಶಿವಮೊಗ್ಗ: ಕಳೆದ ಒಂದು ದಶಕದಲ್ಲಿ ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳು ವೆಬ್‌ಸೈಟ್ ಹೊಂದಿದವು. ತಾವೂ ಮಾಹಿತಿ ತಂತ್ರಜ್ಞಾನ ಅಕ್ಷರಸ್ಥರು ಎಂದು ತೋರಿಸಿಕೊಂಡವು. ಆದರೆ, ಬರು ಬರುತ್ತಾ ತನ್ನ ಸ್ವಂತ ವೆಬ್‌ಸೈಟ್‌ಗಳನ್ನೇ ಮರೆತು ಬಿಟ್ಟವು. ಇದರ ಜೊತೆ ಜೊತೆಗೆ ವೆಬ್‌ಸೈಟ್‌ಗಳಲ್ಲಿ ಇಂಗ್ಲಿಷ್‌ಗೆ ಪ್ರಾಧಾನ್ಯತೆ ದೊರೆಯುತ್ತಾ ಹೋಯಿತು.
ಇದೀಗ ಈ ರೀತಿ ವೆಬ್‌ಸೈಟ್ ಮರೆತ ಹಾಗೂ ಕನ್ನಡದ ಬಗ್ಗೆ ಉದಾಸೀನ ತೋರಿದ ಇಲಾಖೆಗಳ ವಿರುದ್ಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಟ್ಟಾಜ್ಞೆ ಅಸಮಾಧಾನ ಸೂಚಿಸಿದ್ದು, ಈ ಕೂಡಲೇ ಜಾಗೃತಿ ಹೊಂದುವಂತೆ ಸೂಚನೆ ನೀಡಿದೆ.
ಆಗಿದ್ದೇನು?: 2006, ಜನವರಿ 17ರಂದು ಸರ್ಕಾರ ಹೊರಡಿಸಿದ ಸುತ್ತೋಲೆಯನ್ವಯ ಕನ್ನಡ ಆಡಳಿತ ಭಾರೆಯಾಗಿರುವುದರಿಂದ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಎಲ್ಲಾ ಇಲಾಖೆಗಳು ತಮ್ಮ ಅಂತರ್ಜಾಲ ತಾಣದಲ್ಲಿ ಒದಗಿಸಿರುವ ಮಾಹಿತಿಯನ್ನು ಕಡ್ಡಾಯವಾಗಿ ಕನ್ನಡದಲ್ಲೂ ಸಹ ಒದಗಿಸಬೇಕೆಂದು ತಿಳಿಸಲಾಗಿತ್ತು. ಆದರೂ ಸಹ ಹಲವಾರು ಇಲಾಖೆಗಳು ಆಯಾಯ ಇಲಾಖೆಯ ಅಂತರ್ಜಾಲತಾಣದಲ್ಲಿ ಮಾಹಿತಿಯನ್ನು ಕನ್ನಡದಲ್ಲಿ ಒದಗಿಸದೇ ಇರುವುದನ್ನು ಸರ್ಕಾರ ಗಮನಿಸಿ ಮತ್ತೊಂದು ಸುತ್ತೋಲೆ ಹೊರಡಿಸಿದೆ. ಈ ಹಿನ್ನಲೆಯಲ್ಲಿ, ಸಂಬಂಧಪಟ್ಟ ಇಲಾಖೆಗಳು ಈ ಕೂಡಲೇ ತಮ್ಮ ಇಲಾಖೆಯ ವೆಬ್‌ಸೈಟ್‌ನ ಮಾಹಿತಿಯು ಕನ್ನಡ ಭಾಷೆಯಲ್ಲಿ ಕಡ್ಡಾಯವಾಗಿ ಲಭ್ಯವಾಗುವಂತೆ ಕ್ರಮ ಕೈಗೊಂಡು, ಅಂತರ್ಜಾಲತಾಣವನ್ನು ಆಗಿಂದಾಗೇ ಇಂದೀಕರಿಸಲು(ಅಪ್‌ಡೇಟ್) ಸೂಚಿಸಿದೆ. ಇದಲ್ಲದೇ, ಆಯಾಯ ಇಲಾಖೆಯ ಅಂತರ್ಜಾಲತಾಣದ ಎಲ್ಲಾ ಲಿಂಕ್‌ಗಳನ್ನು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮುಂದೆ ದೂರುಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಕೋರಿದೆ.
ಕಅಪ್ರಾ ಕಾರಣ: ಸರ್ಕಾರ ವೆಬ್‌ಸೈಟ್ ವಿಚಾರದಲ್ಲಿ ಏಕಾಏಕಿ ಈ ನಿಲುವಿಗೆ ಬರಲು ಪ್ರಮುಖ ಕಾರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರ. ವೆಬ್‌ಸೈಟ್‌ಗಳಲ್ಲಿ ಕನ್ನಡ ಕಡೆಗಣನೆ ಮತ್ತು ಮೇಲ್ದರ್ಜೆಗೇರದೇ ಇರುವುದರ ಕುರಿತು ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿಯವರಿಗೆ ವಿವರವಾದ ಪತ್ರ ಬರೆದಿದ್ದರು.
ಪ್ರಾಧಿಕಾರ ಅವಲೋಕಿಸಿರುವಂತೆ ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಶಾಸ್ತ್ರೀಯ ಭಾಷೆಯ ಸ್ಥಾನ- ಮಾನ ದೊರೆತಿರುವ ಹಿನ್ನೆಲೆಯಲ್ಲಿ ಕನ್ನಡವನ್ನು ಆಡಳಿತದ ಎಲ್ಲಾ ಹಂತದಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯುಳ್ಳ ಅಧಿಕಾರಿಗಳು ಹೊಣೆಗಾರಿಕೆಯಿಂದ ವಿಮುಖರಾಗುತ್ತಿದ್ದು, ಇಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯ. ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವಲ್ಲಿ ಹಾಗೂ ಅಂತರ್ಜಾಲ ತಾಣದಲ್ಲಿ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಒದಗಿಸಲು ವಿಮುಖನೀತಿ ಅನುಸರಿಸುತ್ತಿರುವ ಅಧಿಕಾರಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರದ ಅಂತರ್ಜಾಲ ತಾಣದಲ್ಲಿ ಎಲ್ಲ ಮಾಹಿತಿಯು ಕನ್ನಡದಲ್ಲಿ ಸುಲಭವಾಗಿ ದೊರೆಯುವಂತೆ ಅಂತರ್ಜಾಲತಾಣವನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕಾಗಿ ಕೋರುತ್ತೇನೆ ಎಂಬ ಒಕ್ಕಣೆಯ ಖಾರವಾದ ಪತ್ರವನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ, ಸರ್ಕಾರದ ಎಲ್ಲಾ ಇಲಾಖೆಗಳು ಈ ಕೂಡಲೇ ಅಂತರ್ಜಾಲ ತಾಣದಲ್ಲಿ ಆಯಾಯ ಇಲಾಖೆಗೆ ಸಂಬಂಧಿಸಿದ ಮಾಹಿತಿಯು ಕಡ್ಡಾಯ ಹಾಗೂ ಸುಲಭವಾಗಿ ಕನ್ನಡದಲ್ಲಿ ದೊರೆಯುವಂತೆ ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು ಇಂದೀಕರಿಸಲು ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.