ರಾಜಕೀಯ ಶಕ್ತಿಕೇಂದ್ರದತ್ತ ಕಾಂಗ್ರೆಸ್ ಕುಡಿನೋಟ...!
ಶಿವಮೊಗ್ಗ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಬಿಸಿ ಏರುತ್ತಿದೆ. ಇಡೀ ರಾಜ್ಯದಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವ ಶಿವಮೊಗ್ಗ ಜಿಲ್ಲೆಯತ್ತ ಕಾಂಗ್ರೆಸ್ ನಾಯಕರು ಕುಡಿನೋಟ ಬೀರುತ್ತಿದ್ದಾರೆ. ಬಿಸಿ ಇದ್ದಾಗಲೇ ಕಬ್ಬಿಣವನ್ನು ಬಡಿದು ಬಗ್ಗಿಸಬೇಕೆಂಬ ಮಂತ್ರದೊಂದಿಗೆ ನಗರದಲ್ಲಿ ಬುಧವಾರ ಕಾಂಗ್ರೆಸ್ ಸಮಾವೇಶ ಆಯೋಜಿಸಲಾಗಿದೆ.
ಕೇಂದ್ರದಲ್ಲಿ ರಾಹುಲ್ ಗಾಂಧಿ ನಂ.2 ನಾಯಕನಾಗಿ ಹೊರಹೊಮ್ಮಿರುವುದರಿಂದ ಯುವಕರಿಗೆ ಹೆಚ್ಚು ಆದ್ಯತೆ ಸಿಗಬಹುದೆಂದ ಆಸೆ ಕೆಲವರಲ್ಲಿದ್ದರೆ, ನಮ್ಮ ಜಾಗಕ್ಕೆಲ್ಲಿ ಸಂಚಕಾರ ಬರುತ್ತದೆಯೇ ಎಂಬ ಆತಂಕದಲ್ಲಿ ಹಿರಿಯರಿದ್ದಾರೆ. ಇಂತಹ ಜಿಜ್ಞಾಸೆ ನಡುವೆ ಸಮಾವೇಶ ನಡೆಯುತ್ತಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯೇ ವಿಚಿತ್ರ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ, ಸುಮ್ಮನೆ ಇದ್ದ ಕೆಲವರು ಸ್ವಲ್ಪವಾದರೂ ಪ್ರಯತ್ನ ಮಾಡಿದ್ದರೆ ಗೆಲ್ಲಬಹುದಾಗಿದ್ದ ಲೋಕಸಭೆ ಚುನಾವಣೆ (ಎಸ್. ಬಂಗಾರಪ್ಪ), ವಿಧಾನಪರಿಷತ್ ಚುನಾವಣೆ (ಮಹಿಮಾ ಪಟೇಲ್, ಎಸ್.ಪಿ. ದಿನೇಶ್) ಗಳಲ್ಲಿ ಸೋತಿದೆ. ಒಂದಲ್ಲಾ ಒಂದು ದಿನ ಪವಾಡ ನಡೆಯುವುದು ಗ್ಯಾರೆಂಟಿ ಎಂದು ಕಾಯುತ್ತಾ ಕುಳಿತಿರುತ್ತದೆ.
ಇಂತಹ ಕಾಂಗ್ರೆಸ್ನಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದ್ದು, ಚುನಾವಣೆ ಇನ್ನೂ ತಿಂಗಳುಗಳಿರುವಂತೆ ಪಕ್ಷದ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಲು ರಾಜ್ಯ ನಾಯಕರು ಹಾಗೂ ಕೇಂದ್ರ ಸಚಿವರು ಆಗಮಿಸುತ್ತಿದ್ದಾರೆ. ಒಗ್ಗಟ್ಟು ಸದ್ಯದ ಅವರ ಮೂಲಮಂತ್ರ.
ಮೇಲೆದ್ದ ಆಕಾಂಕ್ಷಿಗಳು: ಪಕ್ಷದ ಚುನಾವಣಾ ಸ್ಪರ್ಧಾಕಾಂಕ್ಷಿಗಳು ಮೈಕೊಡವಿ ಎದ್ದುನಿಲ್ಲುವಂತೆ ಮಾಡಿರುವುದು ಈ ಸಮಾವೇಶದ ವಿಶೇಷ. ಎಲ್ಲಾ ಕ್ಷೇತ್ರದಲ್ಲೂ ಟಿಕೆಟ್ ಆಕಾಂಕ್ಷಿಗಳು ಎರಡಂಕಿಯಲ್ಲಿದ್ದಾರೆ. ನಮಗೇ ಟಿಕೆಟ್ ಗ್ಯಾರೆಂಟಿ ಎಂದು ಓಡಾಡುತ್ತಿದ್ದಾರೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದರೆ, ಸಾಗರದಿಂದ ಏಕೈಕ ನಾಯಕ ಕಾಗೋಡು ತಿಮ್ಮಪ್ಪ ಇದ್ದಾರೆ. ಇನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಕರಿಯಣ್ಣ, ರವಿಕುಮಾರ್, ಸೊರಬದಿಂದ ಕುಮಾರ್ ಬಂಗಾರಪ್ಪ ಎಂದಿನಂತೆ ಎದ್ದು ನಿಂತಿದ್ದಾರೆ. ಶಿಕಾರಿಪುರದಲ್ಲಿ ಎಚ್.ಎಸ್. ಶಾಂತವೀರಪ್ಪ ಗೌಡ ಉಳಿದಿದ್ದಾರೆ. ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್ ಅವರು ಸಿ.ಎಂ. ಇಬ್ರಾಹಿಂ ಆಗಮನದ ಆತಂಕದಲ್ಲಿದ್ದಾರೆ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರಿಗೆ ಯಾವುದೇ ಸಮಸ್ಯೆ ಇಲ್ಲ.
ಜನರ ಸಮಸ್ಯೆ ನೋಡಲಿ: ನಾಯಕರು ಬಂದು ಸುಮ್ಮನೆ ಭಾಷಣ ಮಾಡಿ ಹೋದರೆ ಉಪಯೋಗವಿಲ್ಲ. ಜಿಲ್ಲೆಯ ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕು. ಈ ಬಗ್ಗೆ ಕಾಂಗ್ರೆಸ್ ನಿರಂತರವಾಗಿ ಹೋರಾಟ ರೂಪಿಸುವಂತೆ ಮಾಡಬೇಕು. ಜನರ ಬಳಿ ಹೋಗುವಂತೆ ಮುಖಂಡರಿಗೆ ಹೇಳಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಹಿಂದೆ ಆದ ಗತಿಯೇ ಆಗುತ್ತದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.
ಮುಖಂಡರನ್ನು, ಕಾರ್ಯಕರ್ತರನ್ನು ಹುರಿದುಂಬಿಸಲು ಸಮಾವೇಶಗಳು ಬೇಕು. ಆದರೆ, ಇದಿಷ್ಟರಿಂದ ಮತಗಳು ಬರುವುದಿಲ್ಲ. ಜನರ ಸಂಪರ್ಕವನ್ನೇ ಬಿಟ್ಟ ಎಷ್ಟೋ ನಾಯಕರು ಟಿಕೆಟ್ ಕೇಳುತ್ತಿದ್ದಾರೆ. ಇದನ್ನು ನಾಯಕರು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಅವರು ಆಶಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

