ಜಿಪಂ ಬಿಜೆಪಿ ಸದಸ್ಯರಿಗೆ ವಿವರಣೆ ಕೇಳಿದ ಚು. ಆಯೋಗ
ಶಿವಮೊಗ್ಗ: ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷವನ್ನು ಪರೋಕ್ಷವಾಗಿ ಬೆಂಬಲಿಸಲು ಮುಂದಾಗಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ 12 ಮಂದಿ ಬಿಜೆಪಿ ಸದಸ್ಯರಿಗೆ ನಡೆಗೆ ತಿರುವು ಸಿಕ್ಕಿದ್ದು, ಪ್ರತ್ಯೇಕ ಆಸನ ಕೇಳಿದ ಬಗ್ಗೆ ಚುನಾವಣಾ ಆಯೋಗವು ವಿವರಣೆ ಕೇಳಿದೆ.
ದೂರು ಸಲ್ಲಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಅವರಿಗೂ ಸಹ ತಮ್ಮ ದೂರಿಗೆ ಪೂರಕವಾದ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ದೂರುದಾರರು ಹಾಗೂ 12 ಜಿ.ಪಂ. ಸದಸ್ಯರು ಫೆ.16ರಂದು ಬೆಂಗಳೂರಿನಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಹೋಗಿ ತಮ್ಮ ಪರವಾಗಿ ವಾದ ಮಂಡಿಸಬೇಕಾಗಿದೆ.
ಪ್ರತ್ಯೇಕ ಗುಂಪು: ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿಯು ಬಹುಮತ ಹೊಂದಿದ್ದು, 16 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಇವರಲ್ಲಿ ಹಾಲಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಹೇಮಾಪಾವನಿ ಶ್ರೀನಿವಾಸ್ ಸೇರಿದಂತೆ 12 ಮಂದಿ ಸದಸ್ಯರು ಜಿಲ್ಲಾ ಗ್ರಾಮೀಣಾಭಿವೃದ್ಧಿ ವೇದಿಕೆ ಎಂಬ ಪ್ರತ್ಯೇಕ ಗುಂಪು ರೂಪಿಸಿಕೊಂಡು ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಕೋರಿದ್ದರು. ಜತೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಪತ್ರ ಬರೆದಿದ್ದರು.
ಜಿ.ಪಂ. ಸಿಇಓ ಸಂಜಯ್ ಬಿಜ್ಜೂರ್ ಅವರು ಈ ಪತ್ರವನ್ನು ಚುನಾವಣಾ ಆಯೋಗಕ್ಕೆ ರವಾನಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಅವರೂ ಸಹ, ಬಿಜೆಪಿ ಚಿಹ್ನೆಯಿಂದ ಆಯ್ಕೆಯಾದ ಈ 12 ಸದಸ್ಯರು ಪ್ರತ್ಯೇಕ ಆಸನ ಕೇಳುವ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯ ಅಂಶಗಳನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಇವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಇಬ್ಬರಿಂದಲೂ ವಿವರಣೆ ಕೇಳಿದೆ.
ಮೂರನೇ ಎರಡರಷ್ಟು ಸದಸ್ಯರು ಪಕ್ಷ ತೊರೆದಿದ್ದರಿಂದ ತಮಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುವುದಿಲ್ಲ ಎಂಬುದು ಪ್ರತ್ಯೇಕವಾಗಿರುವ ಸದಸ್ಯರ ವಾದ. ಬಿಜೆಪಿ ಚಿಹ್ನೆಯಿಂದ ಆಯ್ಕೆಯಾದ ಮೇಲೆ ಪ್ರತ್ಯೇಕವಾಗಿ ಗುರುತಿಸಿಕೊಂಡರೆ ಅದು ಪಕ್ಷಾಂತರವೇ ಎಂಬುಬು ಬಿಜೆಪಿ ವಾದ. ಈ ಹಿನ್ನೆಲೆಯಲ್ಲಿ ಎರಡೂ ಬಣಗಳ ನಡುವೆ ತೀವ್ರ ವಾದವಿವಾದ ನಡೆಯುತ್ತಿತ್ತು. ಈಗ ಚೆಂಡು ಚುನಾವಣಾ ಆಯೋಗದ ಅಂಗಳದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

