ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ವಿಟಮಿನ್ ಮಾತ್ರೆ
ಶಿವಮೊಗ್ಗ: ರಕ್ತಹೀನತೆಯನ್ನು ನಿವಾರಿಸಲು ಮುಂದಿನ ತಿಂಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಫಾಲಿಕ್ ಆಸಿಡ್ ಒಳಗೊಂಡ ಕಬ್ಬಿಣದ ಅಂಶವಿರುವ ಮಾತ್ರೆಯನ್ನು ವಾರಕ್ಕೊಮ್ಮೆ ನೀಡಲಾಗುವುದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಇದೇ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ಇಲಾಖೆಯ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಪೋಲಿಯೋ ನಿರ್ಮೂಲನೆ ಮಾಡಿದಂತೆ ಮುಂದಿನ 10 ವರ್ಷದಲ್ಲಿ ರಕ್ತಹೀನತೆ ಕಾಯಿಲೆಯನ್ನು ನಿವಾರಣೆ ಮಾಡಲಾಗುವುದು ಎಂದರು.
ನಗರದಲ್ಲಿ ಸೋಮವಾರ ಸಂಜೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆ ಇಂದು ಬಹಳಷ್ಟು ಜನರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿರಂತರ ಸಕ್ಕರೆ ಪ್ರಮಾಣ, ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಆದ್ದರಿಂದ ವಾಹನ ಚಾಲನೆ ಪರವಾನಗಿ ಪತ್ರ, ಶಾಲೆ ಪ್ರವೇಶ ಪತ್ರ ಇತ್ಯಾದಿ ದಾಖಲೆಗಳಲ್ಲಿ ಸಕ್ಕರೆ ಪ್ರಮಾಣ ಹಾಗೂ ರಕ್ತದೊತ್ತಡ ಮಾಹಿತಿಯನ್ನೂ ಸಹ ನಮೂದಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಕ್ಯಾನ್ಸರ್ ತಪಾಸಣೆಗೆ ಎಲ್ಲೆಡೆ ಸೌಲಭ್ಯಗಳಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಸಹ ಕ್ಯಾನ್ಸರ್ ಪತ್ತೆ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ನಮ್ಮ ಮುಖ್ಯ ಗುರಿ ಆಸ್ಪತ್ರೆಗಳನ್ನು ಹೆಚ್ಚಿಸುವುದಲ್ಲ. ಜನರ ಆರೋಗ್ಯ ಪರಿಸ್ಥಿತಿಯನ್ನು ಹೆಚ್ಚಿಸಿ ಆಸ್ಪತ್ರೆಗಳನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ ಎಂದರು.
ನಕಲಿ ವೈದ್ಯರ ಮೇಲೆ ದಾಳಿ: ನಕಲಿ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇಂತಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಲಿದ್ದರೆ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸಚಿವ ಖಾದರ್ ಎಚ್ಚರಿಕೆ ನೀಡಿದರು.
ಈ ನಡುವೆ ನಾಟಿ ವೈದ್ಯರು, ಸಾಂಪ್ರದಾಯಿಕ ಪರಂಪರೆಯ ವೈದ್ಯರೂ ಇದ್ದಾರೆ. ಆಯುರ್ವೇದ ವೈದ್ಯರು ಅಲೋಪತಿ ಔಷಧಿ ಬಳಸುವುದಕ್ಕೆ ಅನುಮತಿ ಕೇಳುತ್ತಿದ್ದಾರೆ. ಹೀಗಾಗಬಾರದು. ಜನರ ಆರೋಗ್ಯದ ಜತೆ ಚಲ್ಲಾಟವಾಡುವುದು ಸರಿ ಅಲ್ಲ. ಯಾವುದೇ ತರಬೇತಿ ಇಲ್ಲದೇ ವೈದ್ಯವೃತ್ತಿ ಮಾಡುವವರೂ ಇದ್ದಾರೆ. ಅಂತವರ ಮೇಲೆ ಖಂಡಿತಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾನೂನನ್ನು ಸುಲಭವಾಗಿ ಮುರಿಯಬಹುದು, ಸಂಪ್ರದಾಯವನ್ನು ಮುರಿಯಬಾರದು ಎಂಬಂತಹ ಪರಿಸ್ಥಿತಿ ನಮ್ಮಲ್ಲಿ ಇದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ಅಡುಗೆ ಭಟ್ಟರ ಆರೋಗ್ಯ ತಪಾಸಣೆ
ನಾವು ಹೋಟೆಲ್ಗೆ ಹೋಗಿ ಊಟ-ತಿಂಡಿ ಮಾಡಿ ಬರುತ್ತೇವೆ. ಆದರೆ ನಮಗೆ ಅಡುಗೆ ಮಾಡುವವರು ಯಾರು, ಅವರ ಆರೋಗ್ಯ ಪರಿಸ್ಥಿತಿ ಹೇಗಿದೆ, ಯಾವುದಾದರೂ ಖಾಯಿಲೆ ಇದೆಯೇ ಎಂದು ಗೊತ್ತೇ ಇರುವುದಿಲ್ಲ. ಹಾಗಾಗಿ ಹೋಟೆಲ್ಗಳಲ್ಲಿ ಅಡುಗೆ ಮಾಡುವವರ ಆರೋಗ್ಯವನ್ನು ಆಗಾಗ್ಗೆ ತಪಾಸಣೆ ಮಾಡುವ ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಹೋಟೆಲ್ನಲ್ಲಿ ಅಡುಗೆ ಮಾಡುವವರು ತಮ್ಮ ಆರೋಗ್ಯ ಪರಿಸ್ಥಿತಿಯ ಬಗ್ಗೆ ಕಾರ್ಡನ್ನು ಹೊಂದಿದ್ದು, ತಪ್ಪಿದಲ್ಲಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ಯೋಜನೆ ಜಾರಿ ಮಾಡುವ ಚಿಂತನೆ ಇದೆ. ಕಾರ್ಡ್ ವಿತರಣೆ ಹೇಗೆ ಮಾಡಬೇಕೆಂದು ಚರ್ಚೆ ನಡೆಯುತ್ತಿದೆ ಎಂದರು.
ದಂತ ಆರೋಗ್ಯ ನೀತಿ ಬೇಕು...
ನಮ್ಮಲ್ಲಿ ಆರೋಗ್ಯ ನೀತಿ ಇದೆ. ಆದರೆ ದಂತ ಆರೋಗ್ಯ ನೀತಿ ಇಲ್ಲ. ಈ ಹಿನ್ನಲೆಯಲ್ಲಿ ದಂತ ಆರೋಗ್ಯ ನೀತಿ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಚಿವ ಖಾದರ್ ಹೇಳಿದರು. ಎಷ್ಟೋ ಕಾಯಿಲೆಗಳು ದಂತದಿಂದಲೇ ಶುರುವಾಗುತ್ತವೆ. ಬಹಳಷ್ಟು ಜನ ಈ ಬಗ್ಗೆ ಎಚ್ಚರಿಕೆ ವಹಿಸುವುದಿಲ್ಲ. ಆದ್ದರಿಂದ ನಮ್ಮ ಹಲ್ಲುಗಳ ಬಗ್ಗೆ ಕಾಳಜಿ ಹೊಂದಬೇಕಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

