ಸಹ್ಯಾದ್ರಿ ಕಾಲೇಜಿನ 6ನೇ ಸೆಮಿಸ್ಟರ್ ಫಲಿತಾಂಶ ಅವ್ಯವಸ್ಥೆ: ಪ್ರತಿಭಟನೆ
ಕ.ಪ್ರ.ವಾರ್ತೆ ಶಿವಮೊಗ್ಗ ಜು.3
ಸಹ್ಯಾದ್ರಿ ಕಾಲೇಜು 2013ನೇ ಸಾಲಿನ ಅಂತಿಮ ಬಿಎಸ್ಸಿ 6ನೇ ಸೆಮಿಸ್ಟರ್ ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಪ್ರಕಟಗೊಳಿಸಿದ್ದು, ಈ ಫಲಿತಾಂಶ ಅವ್ಯವಸ್ಥೆಯಿಂದ ಕೂಡಿದೆ ಎಂದು ಎನ್ಎಸ್ಯುಐ ಸಂಘಟನೆ ಖಂಡಿಸಿ, ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದೆ.
ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿ ಬಿಎಸ್ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಮನಬಂದಂತೆ ಪ್ರಕಟಿಸಿದೆ. ಬಿಎಸ್ಸಿ ಅಂಕ ಪಟ್ಟಿಯಲ್ಲಿ ಬಿ.ಕಾಂಗೆ ಸೇರಿದ ವಿಷಯಗಳನ್ನು ನಮೂದಿಸಿದೆ. ಇನ್ನು ಅಂಕಗಳು ಕೇವಲ ಮೂರಂಕಿಯಲ್ಲಿರಬೇಕು. ಆದರೆ, ಕಾಲೇಜು ಪ್ರಕಟಿಸಿರುವ ಅಂಕಗಳ ಐದಂಕಿಯವಾಗಿವೆ. ಇನ್ನು ರಿಮಾರ್ಕ್ಸ್ ಕಾಲಂನಲ್ಲಿ ಪಾಸ್ ಅಥವಾ ಫೇಲ್ ಎಂದು ನಮೂದಿಸುವ ಬದಲು ಕೆಲವೊಂದು ಅರ್ಥವಾಗದ ಪದಗಳನ್ನು ಹಾಕಲಾಗಿದೆ ಎಂದು ಸಂಘಟನೆ ದೂರಿದೆ.
ಹಣ ಮಾಡುವ ಉದ್ದೇಶ: ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟಿಸಿ ಮೂರು ದಿನಗಳಾದ ಮೇಲೆ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಸೋಮವಾರ ಫಲಿತಾಂಶವನ್ನು ಹಿಂದಕ್ಕೆ ಪಡೆದಿದೆ. ಹಾಗೆಯೇ ಉತ್ತರ ಪತ್ರಿಕೆಯ ನಕಲು ಪಡೆಯಲು ವಿದ್ಯಾರ್ಥಿಗಳಿಂದ ಪ್ರತಿ ಪತ್ರಿಕೆಗೆ 460 ರುಪಾಯಿಗಳನ್ನು ಪಡೆಯುತ್ತಿದೆ. ಕಾಲೇಜಿನಲ್ಲೇ ಉತ್ತರ ಪತ್ರಿಕೆಗಳು ಲಭ್ಯವಿದ್ದರೂ ಕೇವಲ ಹಣ ಮಾಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಹೊರೆಯಾಗುವ ಶುಲ್ಕ ವಸೂಲು ಮಾಡಲಾಗುತ್ತಿದೆ.
ಕಾಲೇಜಿನಲ್ಲಿ 280 ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ ಪರೀಕ್ಷೆಗೆ ಕುಳಿತಿದ್ದು, ಅದರಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು, ಇಂತಹ ಫಲಿತಾಂಶಕ್ಕೆ ಕಾರಣ ಏನೆಂಬುದನ್ನು ಬಹಿರಂಗಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ವಿದ್ಯಾರ್ಥಿಗಳಲ್ಲಿ ಆತಂಕ: ಈಗಾಗಲೇ ರಾಜ್ಯದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಎಂಎಸ್ಸಿ ಸೇರಿದಂತೆ ಬೇರೆ ಬೇರೆ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಮುಗಿದಿದೆ. ಮೈಸೂರು ವಿವಿಯಲ್ಲಿ ಜುಲೈ 6ರಂದು ಅಂತಿಮ ದಿನಾಂಕವಾಗಿದೆ. ಆದರೆ, ಕಾಲೇಜು ಪ್ರಕಟಿಸಿರುವ ಫಲಿತಾಂಶದಲ್ಲಿ ಗೊಂದಲಗಳಿರುವುದರಿಂದ ವಿದ್ಯಾರ್ಥಿಗಳು ಪೋಷಕರು ಆತಂಕಕ್ಕೀಡಾಗಿದ್ದಾರೆ.
ಆದ್ದರಿಂದ ಕಾಲೇಜು ಆಡಳಿತಮಂಡಳಿ ಇನ್ನೆರಡು ದಿನದಲ್ಲಿ ಸಮರ್ಪಕ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಮರುಮೌಲ್ಯಮಾಪನ, ಮರು ಎಣಿಕೆ ಮುಂತಾದ ಕಾರ್ಯಗಳನ್ನು ಇನ್ನೆರಡು ದಿನದಲ್ಲಿ ಮುಗಿಸಿ ಫಲಿತಾಂಶ ಪ್ರಕಟಿಸಬೇಕು. ಉತ್ತರ ಪತ್ರಿಕೆ ನಕಲು ಪಡೆಯಲು ಪಡೆಯುತ್ತಿರುವ ಶುಲ್ಕ ಕಡಿಮೆ ಮಾಡಬೇಕು. ಫಲಿತಾಂಶದಲ್ಲಿ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣರಾದ ಕಾಲೇಜಿನ ಪರೀಕ್ಷಾಂಗ ನಿಯಂತ್ರಣಾಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಎನ್ಎಸ್ಯುಐ ಸಂಘಟನೆ ಒತ್ತಾಯಿಸಿದೆ. ಇಲ್ಲವಾದಲ್ಲಿ ಸಂಘಟನೆಯಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಸಂಘಟನೆ ಎಚ್ಚರಿಸಿದೆ.
ಈ ವೇಳೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸೂದನ್, ಜಿಲ್ಲಾಧ್ಯಕ್ಷ ಕೆ. ಚೇತನ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

