ಶಿವಮೊಗ್ಗ

ಅರಣ್ಯ ಹಕ್ಕು ಸಮಿತಿ ಪುನಾರಚನೆಗೆ ಕಾನೂನು ಅಡ್ಡಿ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಜು.9 ಗ್ರಾಮ ಅರಣ್ಯ ಹಕ್ಕು ಸಮಿತಿಗಳನ್ನು ನೂತನವಾಗಿ ರಚಿಸಲು ಅವಕಾಶವಿಲ್ಲವೇ
ಅರಣ್ಯ ಹಕ್ಕು ಕಾಯ್ದೆ ಅಡಿ ಭೂಮಿ ಹಕ್ಕು ನೀಡುವ ದಿಸೆಯಲ್ಲಿ ಈಗಿರುವ ಗ್ರಾಮ ಅರಣ್ಯ ಹಕ್ಕು ಸಮಿತಿ  ವಿಸರ್ಜಿಸಿ ಹೊಸದಾಗಿ ಸಮಿತಿಗಳನ್ನು ಆಯ್ಕೆ ಮಾಡಿ, ಹೊಸದಾಗಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸುವಂತೆ ಕೆಲವೇ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಈ ವಿಷಯ ಜಿಪಂ ಸಭಾಂಗಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮತ್ತೆ ಚರ್ಚೆಗೆ ಬಂತು.
ಕಾನೂನು ಅವಕಾಶ: ಈ ಹಿಂದೆ ನಡೆದ ಉಸ್ತುವಾರಿ ಸಮಿತಿ ಸಭೆಯ ಚರ್ಚೆಯಂತೆ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲಿಸುವಂತೆ ಸೂಚಿಸಲಾಗಿತ್ತು. ಅನುಪಾಲನಾ ವರದಿ ಚರ್ಚೆ ಸಂದರ್ಭದಲ್ಲಿ ಈ ವಿಷಯ ಬಂದಾಗ ಸಮಿತಿ ಸದಸ್ಯ ಗುರುಮೂರ್ತಿ, ಹೊಸ ಸಮಿತಿ ರಚನೆಗೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನಿಸಿದರು.
ಸಿಇಒ ಸಸಿಕಾಂತ್ ಸೆಂಥಿಲ್ ಅವರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಚರ್ಚೆಯನ್ನು ಪ್ರಸ್ತಾಪಿಸಿ, ಸದ್ಯ ಕಾನೂನಿನಲ್ಲಿ ಹೊಸ ಸಮಿತಿ ರಚನೆಗೆ ಅವಕಾಶ ಇಲ್ಲ. ಸರ್ಕಾರದಿಂದ ಹೊಸ ಮಾರ್ಗಸೂಚಿಗೆ ಕಾಯಬೇಕಿದೆ ಎಂದರು.
ಆಗ ಸಂಸದ ಬಿ.ವೈ. ರಾಘವೇಂದ್ರ, ಚುನಾವಣೆ ಮುಗಿದ ಮೇಲೆ ಈ ವಿಷಯ -ಕೂಲ್- ಆಗಿದೆ ಬಿಡಿ ಎಂದು ಹೇಳಿ ಚರ್ಚೆಗೆ ಮುಕ್ತಾಯ ಹೇಳಿದರು.
ನಿರ್ಮಲ ಭಾರತ: ಜಿಲ್ಲೆಯಲ್ಲಿ ಇನ್ನೂ 93 ಸಾವಿರ ಶೌಚಾಲಯಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವರ್ಷಕ್ಕೆ ತಲಾ 30 ಸಾವಿರದಂತೆ ಮೂರು ವರ್ಷದಲ್ಲಿ ಈ ಶೌಚಾಲಯಗಳನ್ನು ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಗತ್ಯವಿರುವ ಕಡೆ ಸಮುದಾಯ ಶೌಚಾಲಯ ಸಂಕೀರ್ಣ ನಿರ್ಮಿಸುವುದಕ್ಕೂ ಯೋಜನೆ ರೂಪಿಸಿರುವ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಉಪಾಧ್ಯಕ್ಷೆ ಹೇಮಾ ಪಾವನಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಎಲ್ಲಾ ಸದಸ್ಯರು, ಜಿಪಂ ವಿವಿಧ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.

ದಾಂಗುಡಿ ಇಟ್ಟ ಜಿ.ಪಂ. ಸದಸ್ಯರು
ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆ ಮುಗಿಯುತ್ತಿದ್ದಂತೆ ಸಂಸದರ ಅಧ್ಯಕ್ಷತೆಯಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಆರಂಭವಾದಾಗ ಬಹುತೇಕ ಜಿಪಂ ಸದಸ್ಯರು ಭಾಗವಹಿಸಿ ಅಚ್ಚರಿ ಮೂಡಿಸಿದರು.
ಈ ಯೋಜನೆ ಪರಿಶೀಲನೆ ಸಭೆಗೆ ಜಿಪಂ ಸದಸ್ಯರನ್ನು ಆಹ್ವಾನಿಸಬೇಕೆಂದು ಇದ್ದರೂ ಅವರಿಗೆ ಕಾಟಾಚಾರದ ಆಹ್ವಾನ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಭೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪರಸ್ಪರ ಮಾತನಾಡಿಕೊಂಡು  ಭಾಗವಹಿಸಲೇಬೇಕೆಂದು ಅವರು ಬಂದಿದ್ದರು.
ಈಸೂರು ಬಸವರಾಜ್, ಅಶೋಕ್ ನಾಯ್ಕ್, ಸುಮಂಗಲ, ಯಲ್ಲಪ್ಪ, ದಾನೇರ ರುದ್ರಪ್ಪ, ರೇಣುಕಮ್ಮ, ಲಲಿತ ನಾರಾಯಣ್, ಬಂಗಾರಿನಾಯ್ಕ, ಪ್ರೇಮಾ ಸುಧಾಕರ್ ಸೇರಿದಂತೆ ಹಲವರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
 ನಂತರ ಅಕ್ಷರ ದಾಸೋಹ ಬಗ್ಗೆ ನಡೆದ ಚರ್ಚೆಯಲ್ಲಿಯೂ ಅವರು ಭಾಗವಹಿಸಿದ್ದರು. ಈ ಎರಡೂ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ದೊರೆಯುವುದರಿಂದ ಸಂಸದರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಬೇಕು.  ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯುವ ಸಂದರ್ಭದಲ್ಲಿ ಕಾಟಾಚಾರಕ್ಕೆ ನಡೆಯುತ್ತಿದ್ದ ಪರಿಶೀಲನೆ ಜಿ.ಪಂ. ಸದಸ್ಯರ ಉಪಸ್ಥಿತಿಯಿಂದ ಮೆರಗು ಪಡೆದಿತ್ತು.

ಮುಖ್ಯಾಂಶಗಳು
 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ತುರ್ತಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಲು, ಬಾಡಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಂಸದರ ಸೂಚನೆ.
 ಉದ್ಯೋಗ ಖಾತ್ರಿ ಯೋಜನೆ ಅಡಿ ಪ್ರಸಕ್ತ ಸಾಲಿನಲ್ಲಿ ರು. 82 ಕೋಟಿ ಗುರಿ. ಕುಟುಂಬಕ್ಕೊಂದರ ಬದಲು ಪ್ರತಿ ಫಲಾನುಭವಿ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿದ ಮೊದಲ ಜಿಲ್ಲೆ ನಮ್ಮದು ಎಂದು ಸಿಇಒ ಅವರಿಂದ ಮಾಹಿತಿ.
 ವಸತಿ ಯೋಜನೆ ಕುಂಠಿತವಾಗುತ್ತಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ. ಸರ್ಕಾರಿ ಭೂಮಿಯಲ್ಲಿ 15 ವರ್ಷಕ್ಕಿಂತ  ಹೆಚ್ಚಿನ ಅವಧಿಯಿಂದ ವಾಸಿಸುತ್ತಿರುವ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಂದ ದೃಢೀಕರಣ ಪಡೆದು ಸಲ್ಲಿಸಿದಲ್ಲಿ ಅಂತಹವುಗಳನ್ನು ಮತ್ತೆ ಪರಿಗಣಿಸಲಾಗುವುದಾಗಿ ಸಿಇಒ ಹೇಳಿಕೆ.
 ಪಡಿತರ ಚೀಟಿ ಆನ್‌ಲೈನ್ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಇನ್ನಷ್ಟು ಸೇವಾಕೇಂದ್ರ ಸ್ಥಾಪಿಸಲು ಸಂಸದ ರಾಘವೇಂದ್ರ ಸೂಚನೆ.
 ಪಡಿತರ ಚೀಟಿಗಾಗಿ ಅಗತ್ಯಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ನಿಯಂತ್ರಿಸಲು ಉಪವಿಭಾಗಾಧಿಕಾರಿಗಳಿಗೆ ಹಾಗೂ ಆಯಾ ತಾಲೂಕಿನ ತಹಸೀಲ್ದಾರರಿಗೆ ಸೂಚನೆ ನೀಡಿದ ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.