ಶಿವಮೊಗ್ಗ

ಲೋಕಸಭೆ ಚುನಾವಣಾ ಪ್ರಣಾಳಿಕೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.13
ಬಿಜೆಪಿ ಸರ್ಕಾರದ ಮಂಡಿಸಿದ್ದ ಬಜೆಟ್ ಪಕ್ಕಕ್ಕೆ ಸರಿಸಿ ಸಿದ್ದರಾಮಯ್ಯ ಹೊಸದಾಗಿ ಮಂಡಿಸಿರುವ ಬಜೆಟ್‌ನಲ್ಲಿ ಆರ್ಥಿಕ ಬದಲಾವಣೆ ಅಥವಾ ದೂರಾಲೋಚನೆ ಇಲ್ಲ. ಇದೊಂದು ಲೋಕಸಭೆ ಚುನಾವಣೆ ಪ್ರಣಾಳಿಕೆ ಆಗಿದೆ ಎಂದು ಬಿಜೆಪಿ ಟೀಕಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ, ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್, ಬಜೆಟ್ ಭಾಷಣದಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯೇ ಸರ್ಕಾರಕ್ಕೆ ಮಾರ್ಗದರ್ಶಿ ಎಂದು ನಮೂದಿಸಲಾಗಿದ್ದು, ಇದು ಕಾಂಗ್ರೆಸ್‌ನ ಪ್ರಣಾಳಿಕೆ ಎಂಬುದಕ್ಕೆ ಸಾಕ್ಷಿ ಎಂದು ವ್ಯಂಗ್ಯವಾಡಿದರು.
ವಿದ್ಯುತ್ ಉತ್ಪಾದನೆ ಹೆಚ್ಚಳ, ಉದ್ಯೋಗ ಸೃಷ್ಟಿ, ರೋಗಗ್ರಸ್ತ ಸಣ್ಣ ಕೈಗಾರಿಕೆಗಳ ಪುನಶ್ಚೇತನ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಪ್ರಮುಖ ಕ್ಷೇತ್ರಗಳ ಹಿತವನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದರು.
ಅಡಕೆ ಬೆಳೆಗಾರರ ಕಡೆಗಣನೆ: ಸುಪ್ರೀಂ ಆದೇಶ ಕೈ ಸೇರುವ ಮೊದಲೇ ತರಾತುರಿಯಲ್ಲಿ ಗುಟ್ಕಾ ನಿಷೇಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿರುವ ಅಡಕೆ ಬೆಳೆಗಾರರ ಹಿತರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಅಡಕೆ ಕೊಳೆ ರೋಗ ನಿಯಂತ್ರಣ, ಅಡಕೆ ಪರ್ಯಾಯ ಬಳಕೆಗಾಗಿ ಅಡಕೆ ಸಂಶೋಧನಾ ಕೇಂದ್ರಗಳಿಗೆ ಪ್ರೋತ್ಸಾಹದ ಪ್ರಸ್ತಾಪ ಮಾಡದೆ ಅಡಕೆ ಬೆಳೆಗಾರರನ್ನು ರಾಜ್ಯ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದರು.
ರಾಜ್ಯದ 1.40 ಕೋಟಿಯಷ್ಟು ಕಾರ್ಮಿಕರು ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಹಿತ ರಕ್ಷಣೆಯ ಬಗ್ಗೆ ಬಜೆಟ್‌ನಲ್ಲಿ ಸಣ್ಣ ದನಿಯೂ ಇಲ್ಲ. ಈ ಮೂಲಕ ಸರಕಾರ ತನ್ನ ಕಾರ್ಮಿಕ ವಿರೋಧಿ ಮನೋಭಾವ ಪ್ರಕಟಿಸಿದೆ ಎಂದು ಟೀಕಿಸಿದ ಅವರು, ವಿದ್ಯುತ್ ಸೇರಿದಂತೆ ರೈತರ ಅನುಕೂಲಕ್ಕಾಗಿ ಯಾವುದೇ ನಿಖರವಾದ ಯೋಜನೆ ಪ್ರಸ್ತಾಪವಾಗಿಲ್ಲ ಎಂದರು.
ಹೊಸದಾಗಿ ಪ್ರಸ್ತಾಪಿಸಲಾಗಿರುವ ಕೃಷಿ ಬೆಲೆ ಆಯೋಗ ಬೆಳೆ ಬೆಳೆಯುವ ಮುನ್ನ ತನ್ನ ವರದಿ ನೀಡದರೆ ಮಾತ್ರ ರೈತರಿಗೆ ಯಾವ ಬೆಳೆ ಬೆಳೆದರೆ ಸೂಕ್ತ ಎಂಬ ಮಾಹಿತಿ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮೈ ಮರೆತಂತಿದೆ: ರಾಜ್ಯದ ಮೂವರು ಕೇಂದ್ರ ಸಚಿವರಾಗಿದ್ದರೂ ಅವರ ಮೂಲಕ ರಾಜ್ಯಕ್ಕೆ ಹೆಚ್ಚಿನ ನೆರವು ಪಡೆದುಕೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಮುಖ್ಯಮಂತ್ರಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದಕ್ಕೆ ಪೂರಕವಾಗಿ ಜಿಲ್ಲೆಯ ಕಾಂಗ್ರೆಸ್ ಶಾಸಕರೂ ಸಹ ಮೈ ಮರೆತಿದ್ದು ಜಿಲ್ಲೆಯ ಹಿತ ಕಾಪಾಡುವಲ್ಲಿ ವಿಫಲವಾಗಿದ್ದಾರೆ ಎಂದ ಆಯನೂರು ಮಂಜುನಾಥ್, ಮೇಕೆ ಸತ್ತರೆ ಪರಿಹಾರ ನೀಡುವ ಸರಕಾರ ರೈತರಿಗೆ ಆರ್ಥಿಕ ಲಾಭ ತರುವ ಜಾನುವಾರು ಸತ್ತರೆ ಏಕೆ ಪರಿಹಾರ ಕೊಡುವುದಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲೆಗೆ ನಿರಾಸೆ: ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ನಿರಾಸೆಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದ ಜಿಲ್ಲೆ ಈಗ ಮತ್ತೆ ಹಿನ್ನಡೆ ಅನುಭವಿಸುವಂತಾಗಿದೆ. ರೋಗಗ್ರಸ್ಥವಾಗಿರುವ ಭದ್ರಾವತಿಯ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಪುನಶ್ಚೇತನದ ಪ್ರಸ್ತಾಪ, ತುಮರಿ ಸೇತುವೆ ಹಾಗೂ ಕಾಲುಸಂಕಗಳ ನಿರ್ಮಾಣ, ಪಶ್ಚಿಮಘಟ್ಟದ ಅರಣ್ಯ ರಕ್ಷಣೆ, ಚಕ್ರಾದಲ್ಲಿ ಅರಣ್ಯ ಸಂಶೋಧನಾ ಕೇಂದ್ರ ಸ್ಥಾಪನೆ, ಕೆ ಶಿಪ್ ಯೋಜನೆಯಡಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ, ಇಂಡೀಕರಣ, ಗಂಧದ ಬೆಳೆ ಮತ್ತು ಕರಕುಶಲ ಕಲೆ, ರೈಲ್ವೆ ಯೋಜನೆ, ಮೂಲ ಸೌಕರ್ಯ, ಸಾಲ ಮನ್ನಾ ಹೀಗೆ ಬಹಳಷ್ಟು ವಿಷಯಗಳನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದ್ದು, ಬೆಂಗಳೂರನ್ನು ಕೇಂದ್ರೀಕರಿಸಲಾಗಿದೆ ಎಂದು ಆಪಾದಿಸಿದರು.
ವಿಫಲರಾದ ನಾಯಕರು: ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಜೆಟ್‌ನಲ್ಲಿ ಅಡಕೆ ಬೆಳೆಗಾರರಿಗೆ ಹೆಚ್ಚಿನ ನೆರವು ನಿರೀಕ್ಷಿಸಲಾಗಿತ್ತು. ಆದರೆ ಅಡಕೆ ಬೆಳೆಯ ಮಾರಾಟ ತೆರಿಗೆ ಕಡಿಮೆ ಆಗಿಲ್ಲ. ಗೋರಕ್‌ಸಿಂಗ್ ವರದಿ ಅನುಷ್ಠಾನದ ಪ್ರಸ್ತಾಪವಿಲ್ಲ. ಆಗುಂಬೆ ರಸ್ತೆ ಅಭಿವೃದ್ಧಿ, ಮಾಲತಿ ನದಿ ಸೇತುವೆ, ಮಹಿಷಿ ಮತ್ತಿತರ ಸ್ಥಳಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪವಿಲ್ಲ ಎಂದರು.
ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಸರ್ಕಾರದ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದ್ದಾರೆ, ಜಿಲ್ಲೆಗೆ ಅನುಕೂಲವಾಗುವಂತಹ ಕೊಡುಗೆಗಳನ್ನು ತರಲು ಈ ನಾಯಕರು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ವಿಪ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ನಗರಾಧ್ಯಕ್ಷ ಎಸ್. ಜ್ಞಾನೇಶ್ವರ್, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಪ್ರಮುಖರಾದ ಗಿರೀಶ್ ಪಟೇಲ್, ಡಿ.ಎಸ್. ಅರುಣ್, ಕೆ.ವಿ. ಅಣ್ಣಪ್ಪ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.