ಶಿವಮೊಗ್ಗ

ಗೋಪುರ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

Published On :

ಕ.ಪ್ರ.ವಾರ್ತೆ, ಸಾಗರ,  ಜು.15
ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಚಂದ್ರಶಾಲೆ ಹಾಗೂ ಮುಖಮಂಟಪ ಗೋಪುರವನ್ನು ತಕ್ಷಣ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸೋಮವಾರ ಭಕ್ತಾದಿಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕೆಲವು ದಿನಗಳ ಹಿಂದೆ ದೇವಸ್ಥಾನದ ಮುಖಮಂಟಪವು ಕುಸಿದು ಬಿದ್ದಿದ್ದು ಸಾರ್ವಜನಿಕರು ಆತಂಕ ಪಡುವಂತೆ ಆಗಿದೆ. ದೇವಸ್ಥಾನದ ಚಂದ್ರಶಾಲೆ ಹಾಗೂ ಮುಖಮಂಟಪ ಗೋಪುರದ ಪುನರರ್ನಿರ್ಮಾಣದ ಕಾರ್ಯವನ್ನು ಶಾಸ್ತ್ರಬದ್ಧವಾಗಿ, ವಿಷಯದಲ್ಲಿ ಪರಿಣತಿ ಹೊಂದಿದವರ ಸಲಹೆ ಮಾರ್ಗದರ್ಶನದಲ್ಲಿ ನಡೆಯಬೇಕು.
ಪುನರ್ ನಿರ್ಮಾಣದ ಸಂದರ್ಭದಲ್ಲಿ ವಾಸ್ತು ಪರಿಣಿತರ ಸಲಹೆ ಪಡೆದು ನಕ್ಷೆ ಸಿದ್ದಪಡಿಸಬೇಕು. ಕ್ಷೇತ್ರದ ಭಕ್ತವೃಂದದ ಸಲಹೆ ಪಡೆದು ನಕ್ಷೆಯ ಬಗ್ಗೆ ಸಹಮತ ಪಡೆಯಬೇಕು. ಜೀರ್ಣೋದ್ಧಾರಕ್ಕೆ ಸರ್ಕಾರಿ ಅನುದಾನದೊಂದಿಗೆ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಬಗ್ಗೆ ಯೋಜನೆ ರೂಪಿಸಬೇಕು.
ಪ್ರತ್ಯೇಕ ಸಭೆ ನಡೆಸಿ: ಈ ಹಿಂದೆ ದೇವಾಲಯಕ್ಕೆ ಬೇರೆಬೇರೆ ಸಂದರ್ಭದಲ್ಲಿ ದೇಣಿಗೆ ನೀಡಿ ಸಹಕರಿಸಿದ, ಮುಂದಿನ ನಿರ್ಮಾಣಕ್ಕೆ ಈಗಾಗಲೆ ದೇಣಿಗೆ ವಾಗ್ದಾನ ಮಾಡಿರುವವರ ಪ್ರತ್ಯೇಕ ಸಭೆ ನಡೆಸಿ, ಸಮಯಬದ್ಧ ಗುರಿಯೊಂದಿಗೆ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಜರಾಯಿ ಅಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕರ, ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಜೀರ್ಣೋದ್ಧಾರ ಸಮಿತಿ ರಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
50 ಲಕ್ಷ ಬಿಡುಗಡೆ: ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ಈಗಾಗಲೇ ಗಣಪತಿ ದೇವಸ್ಥಾನ ಅಭಿವೃದ್ಧಿ ಕುರಿತು ಚಿಂತನೆ ನಡೆಸಲಾಗಿದೆ. ದೇವಸ್ಥಾನದ ಹಿಂಭಾಗದಲ್ಲಿರುವ ಪಾಕಶಾಲೆ ಪುನರ್ ನಿರ್ಮಾಣಕ್ಕೆ ಈಗಾಗಲೇ 50 ಲಕ್ಷ ಬಿಡುಗಡೆ ಆಗಿದ್ದು, ಸದ್ಯದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು.  
ಇದರ ಜೊತೆಗೆ ಮುಖಮಂಟಪ ಗೋಪುರ ಪುನರ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 50 ಲಕ್ಷ ವೆಚ್ಚದ ನೀಲನಕ್ಷೆ ತಯಾರಿಸಲಾಗಿದೆ. ಕಾರ್ಕಳದ ಶಿಲ್ಪಿಗಳು ಹಾಗೂ ಆಗಮ ಪಂಡಿತರಿಂದ ವಾಸ್ತುಪ್ರಕಾರ ಮುಖಮಂಟಪ ನಿರ್ಮಾಣ ಕುರಿತು ಸಲಹೆ ಪಡೆಯಲಾಗಿದೆ. ಶೀಘ್ರದಲ್ಲಿಯೆ ವಿಧಾನಸಭಾಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರಾಗಿರುವ ಕಾಗೋಡು ತಿಮ್ಮಪ್ಪ ಅವರೊಂದಿಗೆ ಚರ್ಚಿಸಿ ಪುನರರ್ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಸುಮಾರು 1.50 ಕೋಟಿ ವೆಚ್ಚದ ಕಾಮಗಾರಿ ಮುಗಿಯಲು 8 ತಿಂಗಳು ಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.