ಶಿವಮೊಗ್ಗ

ನ್ಯಾಯಬೆಲೆ ಅಂಗಡಿಯಲ್ಲೇ ಅನ್ಯಾಯ..!

Published On :

ಶಿವಮೊಗ್ಗ: ನಾ ನಿಗದಿ ಮಾಡಿದ್ದೇ ದರ.. ನಾ ಕೊಟ್ಟಷ್ಟೇ ಪಡಿತರ.. ಇದು ಆಯನೂರು ಕೋಹಳ್ಳಿಯ ನ್ಯಾಯಬೆಲೆ ಅಂಗಡಿಯ ವರಸೆ.
 ಈ ನ್ಯಾಯಬೆಲೆ ಅಂಗಡಿ ಅವ್ಯವಸ್ಥೆಯ ಆಗರವಾಗಿದ್ದು, ಸರ್ಕಾರ ನೀಡುವ ಪಡಿತರವನ್ನು ನಿಗದಿ ಮಾಡಿದ ಬೆಲೆಗಿಂತ ಅಧಿಕ ಬೆಲೆಗೆ ವಿತರಣೆ ಮಾಡಲಾಗುತ್ತಿದೆ, ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ವಿತರಿಸಲಾಗುತ್ತಿದೆ ಎಂದು ಫಲಾನುಭವಿಗಳು ಆರೋಪಿಸಿದ್ದು, ಹಿಡಿಹಿಡಿ ಶಾಪ ಹಾಕುತ್ತಿದ್ದಾರೆ.
ಇಷ್ಟ ಬಂದಾಗ ವಿತರಣೆ: ಸರ್ಕಾರ ನೀಡುವ ಪಡಿತರವನ್ನು ತಿಂಗಳ ಎಲ್ಲಾ ದಿನಗಳು ವಿತರಣೆ ಮಾಡಬೇಕೆಂಬ ನಿಯಮಿವಿದೆ. ಆದರೆ, ಈ ನ್ಯಾಯಬೆಲೆ ಅಂಗಡಿ ಇದಕ್ಕೆ ಹೊರತಾಗಿದ್ದು, ತಿಂಗಳ ಮೊದಲ ವಾರ ಅಥವಾ ತಿಂಗಳ ಕೊನೆಯ ವಾರಗಳಲ್ಲಿ ಮಾತ್ರ ವಿತರಣೆ ಮಾಡುತ್ತದೆ. ಅಲ್ಲದೇ ಪಡಿತರ ಚೀಟಿದಾರ ನ್ಯಾಯಬೆಲೆ ಅಂಗಡಿ ತೆರೆದಾಗ ಮಾತ್ರ ಪಡಿತರ ಪಡೆಯಬೇಕು ಬೇರೆ ದಿನಗಳ ಪಡಿತರ ವಿತರಿಸುವಂತೆ ಮನವಿ ಮಾಡಿದರೆ, ಕೇಳಿದವನಿಗೆ ಅವಾಚ್ಯ ಶಬ್ಧಗಳ ಜತೆಗೆ ಏನು ಮಾಡಿಕೊಳ್ಳುತ್ತಿರೊ ಮಾಡಿಕೊಳ್ಳಿ ಎಂಬ ಅಹಂಕರಾದ ಉತ್ತರ ಬರುತ್ತದೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ.
 ಇನ್ನು ಸಕ್ಕರೆ ಮತ್ತು ಗೋದಿ ದಾಸ್ತಾನಾದ ಮೊದಲ ದಿನ ಮಾತ್ರ ವಿತರಣೆ. ಎರಡನೇ ಈ ಪಡಿತರ ಕೇಳಿದರೆ ನೋ ಸ್ಟಾಕ್ ಎಂಬ ಸಿದ್ಧ ಉತ್ತರ ಬರುತ್ತದೆ. ಈ ಬಗ್ಗೆ ಫಲಾನುಭವಿ ಪ್ರಶ್ನಿಸಿದರೆ, ಗತ್ತಿನಲ್ಲಿ ಮುಂದಿನ ಬಾರಿ ಪಡೆದುಕೊಳ್ಳಿ ಎಂಬ ಖಡಕ್ ಮಾತು. ಅಷ್ಟೇ ಅಲ್ಲದೇ ಪಡಿತರ ಮಾರಾಟ ಮಾಡುವುದಕ್ಕೆ ಯಾವುದೇ ರಶೀದಿ ನೀಡುವುದಿಲ್ಲ. ಇದನ್ನು ಕೇಳಿದರು ಯಾವುದೇ ಸ್ಪಂದನೆ ಬರುವುದಿಲ್ಲ.
ಅನ್ನಭಾಗ್ಯ ಯೋಜನೆ:
ಸರ್ಕಾರ ರಾಜ್ಯದಲ್ಲಿನ ಜನರ ಹಸಿವನ್ನು ನಿಗಿಸುವ ಉದ್ದೇಶದಿಂದ 1 ರುಪಾಯಿಗೆ 1 ಕೆಜಿ ಅಕ್ಕಿ ವಿತರಣೆ ಮಾಡಲೆಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದರೆ, ಆಯನೂರಿನ ಕೋಹಳ್ಳಿ ನ್ಯಾಯಬೆಲೆ ಇದಕ್ಕೆ ಹೊರತಾಗಿದೆ. ಸರ್ಕಾರ 30 ಕೆಜಿಗೆ 30 ರುಪಾಯಿ ನಿಗದಿ ಮಾಡಿದೆ. ಈ ನ್ಯಾಯಬೆಲೆ ಅಂಗಡಿಯಲ್ಲಿ 30 ಕೆಜಿ ಅಕ್ಕಿ ಪಡೆದರೆ 40 ರುಪಾಯಿ, ಅಂತ್ಯೋದಯ ಕಾರ್ಡ್‌ಗೆ 25 ಕೆಜಿ ಅಕ್ಕಿ- 50 ರುಪಾಯಿ ನಿಗದಿ, 1 ಉಪ್ಪು ಪ್ಯಾಕೆಟ್‌ಗೆ 10 ರುಪಾಯಿಯಂತೆ ನೀಡಲಾಗುತ್ತದೆ.
ಜೊತೆಗೆ ಉಪ್ಪು, ಊದಿನ ಕಡ್ಡಿ ಮತ್ತಿತರ ಸಾಮಗ್ರಿ ಪಡೆಯುವಂತೆ ಗ್ರಾಹಕನ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ಸ್ಥಳೀಯರು ಗಂಭೀರವಾಗಿ ಆಪಾದಿಸಿದ್ದಾರೆ.
ಈ ನ್ಯಾಯಬೆಲೆ ಅಂಗಡಿಗೆ ಎಷ್ಟು ಕಾರ್ಡುದಾರರಿಗೆ ವಿತರಿಸಲು ಪಡಿತರ ಬರುತ್ತದೆ, ಎಷ್ಟು ವಿತರಣೆಯಾಗುತ್ತದೆ, ಉಳಿಕೆಯಾಗುವುದೆಷ್ಟು ಎಂಬ ಮಾಹಿತಿಯನ್ನು ಯಾರಾದರೂ ವಿಚಾರಿಸಿದರೆ ಅವರಿಗೆ ಗ್ರಾಹಚಾರ ಕಾದಿದೆ ಎಂದೇ ಅರ್ಥ. ಅಂಗಡಿಯನ್ನು ನಿರ್ವಹಿಸುವವರು ಏಕಾಏಕಿ ಮುಗಿಬೀಳುತ್ತಾರೆ, ಮನಸ್ಸಿಗೆ ತೋಚಿದಂತೆ ಬೈಯ್ಗುಳ ಅವರ ಬಾಯಿಯಿಂದ ಬರುತ್ತದೆ.
ಅಧಿಕಾರಿಗಳೇ ಇತ್ತ ಗಮನಿಸಿ:
ಜಿಲ್ಲಾಧಿಕಾರಿ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಅಧಿಕಾರಿಗಳು ನಮ್ಮೂರಿನ ನ್ಯಾಯಬೆಲೆ ಅಂಗಡಿಯ ಬಾನಗಡಿಯನ್ನು ಬೇಧಿಸಬೇಕು, ನಮಗೆ ನ್ಯಾಯಯುತ ಬೆಲೆಯಲ್ಲಿ, ನ್ಯಾಯಯುತವಾಗಿ ಪಡಿತರ ಸಿಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.