ಶಿವಮೊಗ್ಗ

ತಾಳಗುಪ್ಪ- ಕೊಂಕಣ ರೈಲ್ವೆ: ಹೋರಾಟಕ್ಕೆ ಸಿದ್ಧತೆ

Published On :

ಕ.ಪ್ರ.ವಾರ್ತೆ, ಸಾಗರ, ಜು.19
ತಾಳಗುಪ್ಪದಿಂದ ಕೊಂಕಣ ರೈಲ್ವೆಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಶಿವಮೊಗ್ಗ- ತಾಳಗುಪ್ಪ ರೈಲ್ವೆ ಬ್ರಾಡ್‌ಗೇಜ್ ಹೋರಾಟ ಸಮಿತಿ ಗೌರವಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ.ನಾ. ಡಿಸೋಜ ಹೇಳಿದರು.
ತಾಳಗುಪ್ಪದಿಂದ ಕೊಂಕಣ ರೈಲ್ವೆಗೆ ಸಂಪರ್ಕ ಮಾರ್ಗ ಮಂಜೂರಾತಿಗಾಗಿ ಹೋರಾಟ ರೂಪಿಸುವ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ, ಒಂದು ಸಂದರ್ಭದಲ್ಲಿ ನಿಂತೇ ಹೋಗಿದ್ದ ರೈಲ್ವೆ ಸಂಚಾರವನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಸಮಿತಿ ಹಮ್ಮಿಕೊಂಡ ಹೋರಾಟಕ್ಕೆ ಸಾಗರ ತಾಲೂಕಿನ ಜನರು ಬೆನ್ನೆಲುಬಾಗಿ ನಿಂತು, ಯಶಸ್ಸಿಗೆ ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದರು.
ಮತ್ತೊಂದು ಸುತ್ತಿನ ಹೋರಾಟ: ಕರಪತ್ರದ ಮೂಲಕ ಆರಂಭವಾದ ಹೋರಾಟ, ಸಾಗರ ಬಂದ್‌ವರೆಗೂ ಅತ್ಯಂತ ಶಾಂತಿಯುತವಾಗಿ ಯಶಸ್ಸು ಕಂಡಿದೆ. ಈಗ ಹೋರಾಟ ಸಮಿತಿ ಸಾರ್ವಜನಿಕರ ಒತ್ತಾಸೆಯ ಮೇರೆಗೆ ತಾಳಗುಪ್ಪ- ಕೊಂಕಣ ರೈಲ್ವೆ ಮಾರ್ಗ ನಿರ್ಮಾಣ ಹಾಗೂ ರೈಲುಸಂಚಾರಕ್ಕೆ ಒತ್ತಾಯಿಸಿ ಮತ್ತೊಂದು ಸುತ್ತಿನ ಹೋರಾಟ ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿದರು.
2600 ಕೋಟಿ ವೆಚ್ಚ: ಹಿಂದೆ ಕೆಂಗಲ್ ಹನುಮಂತಯ್ಯನವರ ಅವಧಿಯಲ್ಲಿ ಸಾಗರ-ತಾಳಗುಪ್ಪ-ಹೊನ್ನಾವರ-ಕೊಂಕಣ ರೈಲ್ವೆ ಯೋಜನೆಗೆ ಡಿಸೋಜ ಎಂಬ ಎಂಜಿನಿಯರ್ ಮೊದಲ ಬಾರಿಗೆ ಸರ್ವೆ ಕಾರ್ಯವನ್ನು ಮಾಡಿರುವ ದಾಖಲೆ ಇದೆ. ಆದರೆ ಅದು ಅನುಷ್ಠಾನಕ್ಕೆ ಬರಲಿಲ್ಲ.
ಅಂಕಿಅಂಶಗಳ ಪ್ರಕಾರ ತಾಳಗುಪ್ಪ-ಕೊಂಕಣ ರೈಲ್ವೆ ಮಾರ್ಗ ನಿರ್ಮಾಣಕ್ಕೆ 26 ಸುರಂಗಮಾರ್ಗಗಳನ್ನು ನಿರ್ಮಿಸುವ ಅಗತ್ಯವಿದ್ದು ಇದಕ್ಕೆ 2600 ಕೋಟಿ ವೆಚ್ಚ ತಗಲುತ್ತದೆ ಎನ್ನಲಾಗಿದೆ.
ಜೊತೆಗೆ ಹೆಚ್ಚಿನ ಪರಿಸರಹಾನಿಯಾಗುವ ಉಲ್ಲೇಖವಿದೆ. ಪರಿಸರಕ್ಕೆ ಹಾನಿಯಾಗದಂತೆ ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆದಿದೆ. ಕೇಂದ್ರ ರೈಲ್ವೆ ಇಲಾಖೆಯ ಸುರೇಶ್ ಎಂಬ ಸರ್ವೆ ಎಂಜಿನಿಯರ್ ಅವರಿಗೆ ಮಾರ್ಗದ ಸರ್ವೆ ನಡೆಸಲು ಮೌಖಿಕ ಆದೇಶ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಪತ್ರವ್ಯವಹಾರ ನಡೆಸಲಾಗುವುದು ಎಂದು ತಿಳಿಸಿದರು.
ಬೆಂಬಲ ನೀಡಲಾಗುವುದು: ಇದೇ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೋರಾಟ ಕೈಗೆತ್ತಿಕೊಳ್ಳುವಂತೆ ರೈಲ್ವೆ ಹೋರಾಟ ಸಮಿತಿಗೆ ಮನವಿ ಸಲ್ಲಿಸಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ರೈಲ್ವೆ ಸಚಿವರಾಗಿರುವುದರಿಂದ ಹಾಗೂ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿರುವುದರಿಂದ ತಾಳಗುಪ್ಪ-ಕೊಂಕಣ ಹೊಸ ರೈಲ್ವೆ ಮಾರ್ಗಕ್ಕೆ ಮಂಜೂರಾತಿ ಪಡೆಯಲು ಇದು ಸಕಾಲ. ಈ ಹೋರಾಟದ ನೇತೃತ್ವವನ್ನು ಬ್ರಾಡ್‌ಗೇಜ್ ಹೋರಾಟ ಸಮಿತಿ ವಹಿಸಿಕೊಂಡರೆ ಎಲ್ಲರೂ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು.
ಸಮಿತಿಯ ಕಾರ್ಯಾಧ್ಯಕ್ಷ ಯು.ಜೆ. ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ವಿಲಿಯಂ, ಸಿ. ಗೋಪಾಲಕೃಷ್ಣರಾವ್, ಕುಮಾರ್, ಸುಳಗೋಡು ಗಣಪತಿ, ವಿ. ಮಹೇಶ್, ಕೆ.ಆರ್. ಗಣೇಶಪ್ರಸಾದ್, ರಾಧಾಕೃಷ್ಣ ಬೇಂಗ್ರೆ, ಪ್ರಕಾಶ ಕುಂಠೆ, ಪ್ರತಾಪ್, ಸತೀಶ್ ಮೊಗವೀರ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.