ಪತ್ರಿಕಾ ಉಪ ಪ್ರತಿನಿಧಿಗಳಿಗೆ ಆಶ್ರಯ ಮನೆ ವಿತರಿಸಲು ಕ್ರಮ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.21
ವಸತಿ ರಹಿತರಾದಂತಹ ದಿನಪತ್ರಿಕೆಗಳನ್ನು ಹಂಚುವವರು ಹಾಗೂ ಪತ್ರಿಕಾ ಉಪ ಪ್ರತಿನಿಧಿಗಳಿಗೆ ಆಶ್ರಯ ಮನೆಗಳನ್ನು ವಿತರಿಸಲು ಕ್ರಮಕೈಗೊಳ್ಳುವುದಾಗಿ ಶಾಸಕ ಪ್ರಸನ್ನಕುಮಾರ್ ಭರವಸೆ ನೀಡಿದ್ದಾರೆ.
ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸಂಘಟಿತ ವಲಯದಲ್ಲಿ ಬರುವ ಈ ವೃತ್ತಿ ನಿರ್ವಹಿಸುವವರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯ ಕೊಡಿಸುವಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಅನುದಾನ; ಭರವಸೆ: ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುದಾನವನ್ನು ಆದ್ಯತೆ ಮೇಲೆ ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಪತ್ರಿಕಾ ಏಜೆಂಟ್ ರವಿಕುಮಾರ್ ಮಾತನಾಡಿ, ದಿನಪತ್ರಿಕೆ ಹಂಚಲು ಇಂದು ಹುಡುಗರ ಸಮಸ್ಯೆ ಇದೆ. ಪೋಷಕರು ತಮ್ಮ ಮಕ್ಕಳನ್ನು ಪತ್ರಿಕೆ ಹಂಚಲು ಕಳುಹಿಸಲು ಹಿಂದೇಟು ಹಾಕುತ್ತಾರೆ. ವಾಸ್ತವವಾಗಿ ಪತ್ರಿಕೆ ಹಂಚುವ ಹುಡುಗರು ಶ್ರಮಜೀವಿಗಳು, ಎಂದೂ ಕಳ್ಳರಾಗಲ್ಲ. ಪೋಷಕರು ಈ ನಿಟ್ಟಿನಲ್ಲಿ ಆಲೋಚಿಸಬೇಕೆಂದರು.
ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್.ಮಂಜುನಾಥ್ ಮಾತನಾಡಿ, ಪತ್ರಿಕೆ ಹಂಚುವ ಕಾರ್ಯ ಕೀಳರಿಮೆಯಲ್ಲ. ಪತ್ರಿಕೆ ಹಂಚುವವರು ಉತ್ತಮ ಆರೋಗ್ಯ, ಹಣ ಸಂಪಾದಿಸುತ್ತಾರೆ. ಸಾಧಿಸುವ ಛಲ ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾ ವಿತರಣಾ ವ್ಯವಸ್ಥೆಯಲ್ಲಿರುವವರು ಅಸಂಘಟಿತ ಕಾರ್ಮಿಕರಾಗಿದ್ದು, ಅವರಿಗೆ ಸರ್ಕಾರದ ಸೌಲಭ್ಯ ಕೊಡಿಸಬೇಕೆಂದು ಸಲಹೆ ನೀಡಿದರು. ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಯೋಗೀಶ್ ಸ್ವಾಗತಿಸಿದರು. ಅಧ್ಯಕ್ಷ ಗಣೇಶ್ ಭಟ್, ಜಯಂತ್ ಭಟ್, ಅಣ್ಣಪ್ಪ, ಸತ್ಯನಾರಾಯಣ ಮತ್ತಿತರರು ಇದ್ದರು.
ಶಾಸಕರಿಗೆ ಪತ್ರಿಕೆ ಹಂಚಿದ ನೆನಪು
ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ತಮ್ಮ ಹಳೆಯ ದಿನಗಳ ನೆನಪುಗಳನ್ನು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಅಂದು ಪತ್ರಿಕೆ ಹಂಚುವುದು ಸುಲಭದ ಮಾತಾಗಿರಲಿಲ್ಲ. ಎಷ್ಟು ಪತ್ರಿಕೆ ಬೇಕೆಂದು ಮುಂಚಿತವಾಗಿ ಬರೆಸಬೇಕಾಗಿತ್ತು, ಪತ್ರಿಕೆಗಳು ನಿಗದಿತ ಸಮಯಕ್ಕೆ ಬರುತ್ತಿರಲಿಲ್ಲ. ಪತ್ರಿಕೆ ಬರುವುದನ್ನೇ ಕಾಯ್ದು ನಂತರ ಹಂಚಬೇಕಾಗಿತ್ತು ಎಂದರು.
ಪತ್ರಿಕೆ ಹಂಚುವುದಕ್ಕೆ ನನಗೆ ನಾಚಿಕೆ ಇರಲಿಲ್ಲ. ಬೆಳಗ್ಗೆ ರಾಜ್ಯಮಟ್ಟದ ಪತ್ರಿಕೆ ಹಂಚುತ್ತಿದ್ದೆ, ಸಂಜೆ ಉಷಾಮಹಿ ಪತ್ರಿಕೆ ಹಂಚುತ್ತಿದ್ದೆ. ಆ ಪತ್ರಿಕೆಯ ಅಂದಿನ ಸಂಪಾದಕ ಮಂಜುನಾಥ ಐತಾಳ್, ವ್ಯವಸ್ಥಾಪಕ ಮಂಜುನಾಥ್ ಶೇಟ್ ಅವರು ನನ್ನ ಬೆಳವಣಿಗೆಗೆ ಸಾಕಷ್ಟು ಸಹಕರಿಸಿದ್ದನ್ನು ಇಂದಿಗೂ ಮರೆಯಲಾರೆ ಎಂದು ನೆನಪಿಸಿಕೊಂಡರು.
ಚುನಾವಣೆಗೆ ಮತ ಕೇಳಲು ಹೋದಾಗ ಕೆಲವು ಮನೆಯವರು ನೀನು ನಮ್ಮ ಮನೆಗೆ ಪೇಪರ್ ಹಾಕುತ್ತಿದ್ದೀಯಲ್ಲಪ್ಪ ಎಂದು ನೆನಪಿಸಿಕೊಂಡರು, ಚುನಾವಣೆಗೆಂದು 500, 1000 ನೀಡಿ ಆತ್ಮಸ್ಥೈರ್ಯ ತುಂಬಿದರು ಎಂದು ಭಾವುಕರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

