ಗೋರಖ್ ಸಿಂಗ್ ವರದಿ ತಿರಸ್ಕರಿಸುವುದೇ ಲೇಸು
ಸಾಗರ: ಗೋರಖ್ ಸಿಂಗ್ ವರದಿ ಯಥಾವತ್ತಾಗಿ ಜಾರಿಗೆ ಬಂದರೆ ಮಲೆನಾಡಿನ ಅಡಕೆ ಬೆಳೆಗಾರರಿಗೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚು. ಈ ದೃಷ್ಟಿಯಿಂದ ವರದಿಯನ್ನು ತಿರಸ್ಕರಿಸುವುದೇ ಒಳ್ಳೆಯದು ಎಂದು ಚಿಂತಕ ಪ್ರೊ.ಬಿ.ಎಂ. ಕುಮಾರಸ್ವಾಮಿ ಹೇಳಿದರು.
ತಾಲೂಕು ಬಿಜೆಪಿ ಘಟಕ ಭಾನುವಾರ ಗೋರಖ್ ಸಿಂಗ್ ವರದಿ ಕುರಿತು ಅಡಕೆ ಬೆಳೆಗಾರರೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ, ವರದಿಯಿಂದ ಅಡಕೆ ಬೆಳೆಗಾರರಿಗೆ ಲಾಭವಾಗುತ್ತದೆ ಎನ್ನುವುದು ಸುಳ್ಳು. ಜಾಳುಜಾಳಾದ, ವೈಜ್ಞಾನಿಕ ಚಿಂತನೆ ಇಲ್ಲದ ವರದಿಯನ್ನು ಇಡಿಯಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸುವುದು ಅಪಾಯಕಾರಿ. ಆದ್ದರಿಂದ ವರದಿಯನ್ನು ಮತ್ತೊಮ್ಮೆ ಪರಿಷ್ಕರಿಸಬೇಕು ಎಂದು ಹೇಳಿದರು.
ಅಡಕೆ ಹಳದಿ ಎಲೆ ರೋಗ: ಕೇಂದ್ರ ಸರ್ಕಾರ 2007ರಲ್ಲಿ ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶವಾದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಅಡಕೆ ಬೆಳೆಗಾರರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ಗೋರಖ್ ಸಿಂಗ್ ಸಮಿತಿಯನ್ನು ನೇಮಕ ಮಾಡಿತು.
ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯ ಅಡಕೆ ಹಳದಿ ಎಲೆ ರೋಗ ಹಾಗೂ ಶಿವಮೊಗ್ಗ ಜಿಲ್ಲೆಯ ಕೊಳೆ ರೋಗದ ಬಗ್ಗೆ ಅಧ್ಯಯನ ನಡೆಸುವುದು ಸಮಿತಿಯ ಕೆಲಸವಾಗಿತ್ತು. ಆದರೆ ಸಮಿತಿ ಹೇಳಿರುವ ಕೆಲಸ ಮಾಡಿಲ್ಲ ಎನ್ನುವುದು ವರದಿಯಿಂದ ತಿಳಿಯುತ್ತದೆ.
ಹಳದಿ ಎಲೆ ರೋಗದ ಕುರಿತು ಹಿಂದೆ ರಚಿಸಲಾಗಿದ್ದ ಪೌಲಸ್ ಸಮಿತಿ ವರದಿಯ ಕಡೆಗೆ ಬೆಟ್ಟು ಮಾಡಿದ್ದರೆ ಕೊಳೆ ರೋಗದ ಬಗ್ಗೆ ಚೌದರಿ ಸಮಿತಿ ಹೇಳಿರುವುದನ್ನೆ ಜಾರಿಗೆ ತರಬೇಕು ಎಂದು ಗೋರಖ್ ಸಿಂಗ್ ಸಮಿತಿ ಹೇಳಿದೆ ಎಂದು ವಿವರಿಸಿದರು.
ಪರ್ಯಾಯ ಬೆಳೆ: ಸಮಿತಿ ನೀಡಿರುವ ಶಿಫಾರಸ್ಸುಗಳ ಬಗ್ಗೆ ಬೆಳಕು ಚೆಲ್ಲಿದ ಕುಮಾರಸ್ವಾಮಿ, ಹಳದಿ ರೋಗಪೀಡಿತ ಮರಗಳನ್ನು ತೆಗೆದು ಹೊಸ ಸಸಿ ನೆಡಲು ಅಥವಾ ಪರ್ಯಾಯ ಬೆಳೆ ಬೆಳೆಯಲು ತಗಲುವ ಖರ್ಚಿನ ಅರ್ಧದಷ್ಟನ್ನು ಸರ್ಕಾರ ಭರಿಸಬೇಕು ಎಂದಿರುವುದನ್ನು ಸರ್ಕಾರ ಮೊದಲೇ ತಿರಸ್ಕರಿಸಿದೆ.
ಅಡಕೆ ವಿಸ್ತರಣೆ ಬಗ್ಗೆ ನಿರ್ಬಂಧ ಹಾಕಬೇಕು, ಪರ್ಯಾಯ ಬೆಳೆ ಬೆಳೆಯಲು ಪರಿಶೀಲನೆ ಮಾಡಬೇಕು, ಕಾಲುವೆ ನೀರಿನ ಆಧಾರದಲ್ಲಿ ಅಡಕೆ ಬೆಳೆಯುವುದನ್ನು ನಿರ್ಬಂಧಿಸಬೇಕು ಎಂಬ ಸಲಹೆಗಳು ಮುಂದೆ ಮಲೆನಾಡಿನ ಅಡಕೆ ಬೆಳೆಗಾರರಿಗೇ ಕಂಟಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬೆಳೆಗಾರರಿಗೆ ಮಾರಕ: ಸಾಂಪ್ರಾದಾಯಿಕ ಅಡಕೆ ಬೆಳೆಗಾರರಿಗೆ ಮಾತ್ರ ಸಹಾಯಧನ ನೀಡಬೇಕು ಹಾಗೂ ಸಾಂಪ್ರದಾಯಿಕ ಬೆಳೆಗಾರರಿಗೆ ಮಾತ್ರ ಮಾರುಕಟ್ಟೆ ಮಧ್ಯಪ್ರವೇಶ ಅನ್ವಯಿಸಬೇಕು ಎಂಬುದು ಮಲೆನಾಡಿನ ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸಲಿದೆ. ವರದಿ ಮಲೆನಾಡು, ಬಯಲುಸೀಮೆ ಪ್ರಾಂತ್ಯದ ಬೆಳೆಗಾರರನ್ನು ಪ್ರತ್ಯೇಕಿಸುವ ಮೂಲಕ ಭಿನ್ನಾಲೋಚನೆ ಸೃಷ್ಟಿಸಿ, ಬೆಳೆಗಾರರಲ್ಲಿಯೆ ಒಡಕು ಉಂಟು ಮಾಡುವ ಪ್ರಯತ್ನ ಮಾಡಿರುವುದು ಸರಿಯಲ್ಲ ಎಂದು ವಿಶ್ಲೇಷಿಸಿದರು.
ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್, ಅಡಕೆ ಬೆಳೆಗಾರರಲ್ಲದವರು ಸಮಿತಿಯಲ್ಲಿ ಸದಸ್ಯರಾಗಿದ್ದರು. ಅವರು ಹೇಗೆ ವೈಜ್ಞಾನಿಕ ಅಧ್ಯಯನ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ ವರದಿ ನೈಜ ಕಾಳಜಿ ಇಲ್ಲದ ಅವಸರದಲ್ಲಿ ಹುಟ್ಟಿ ಕೂಸು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಚರ್ಚೆ ನಡೆಯಬೇಕು, ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಆರಗ ಜ್ಞಾನೇಂದ್ರ, ಮ್ಯಾಮ್ಕೋಸ್ ಉಪಾಧ್ಯಕ್ಷ ನರಸಿಂಹನಾಯಕ್, ಬಿ.ಎಚ್. ರಾಘವೇಂದ್ರ, ಯು.ಎಚ್. ರಾಮಪ್ಪ, ವ.ಶಂ. ರಾಮಚಂದ್ರ ಭಟ್ ಸಂವಾದದಲ್ಲಿ ಭಾಗವಹಿಸಿದ್ದರು. ಬಿಜೆಪಿ ತಾಲೂಕು ಅಧ್ಯಕ್ಷ ಚೇತನರಾಜ್, ನಗರಾಧ್ಯಕ್ಷ ಸತೀಶಬಾಬು, ಸಂತೋಷ ಶೇಟ್ ಈ ಸಂದರ್ಭದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

