ಶಿವಮೊಗ್ಗ

ಬಿಪಿಎಲ್ ಕಾರ್ಡ್‌ದಾರರಿಗೆ ನಿವೇಶನ ಹಕ್ಕುಪತ್ರ

Published On :

ಕ.ಪ್ರ.ವಾರ್ತೆ, ಸಾಗರ,  ಜು.21
ಗ್ರಾಪಂ ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನಿವೇಶನ ಹಕ್ಕುಪತ್ರ ನೀಡುವ ಕಾಯ್ದೆ ಜಾರಿಯಲ್ಲಿದ್ದು, ಅರ್ಹರನ್ನು ತಕ್ಷಣ ಗುರುತಿಸುವಂತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸೂಚನೆ ಅವರು ನೀಡಿದರು.
ಭಾನುವಾರ ತಾಪಂ ಸಭಾಂಗಣದಲ್ಲಿ ತಾಪಂ ಸದಸ್ಯರು, ಜಿಪಂ ಸದಸ್ಯರು ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರ ಜೊತೆಗೆ ನಿವೇಶನ ಹಂಚಿಕೆ ಸಂಬಂಧ ಕರೆದಿದ್ದ ಸಭೆಯಲ್ಲಿ ಮಾತನಾಡಿ, ತಾಲೂಕಿನ 35 ಗ್ರಾಪಂಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ತ್ವರಿತವಾಗಿ ಆಗಬೇಕು. ಅರ್ಹರಿಗೆ ಪಂಚಾಯ್ತಿ ಮಟ್ಟದಲ್ಲಿ ಸಭೆ ನಡೆಸಿ ಹಕ್ಕುಪತ್ರ ನೀಡಲಾಗುವುದು. ಎಪಿಎಲ್ ಕಾರ್ಡ್‌ದಾರರದ್ದೆ ಪ್ರತ್ಯೇಕ ಪಟ್ಟಿ ತಯಾರಿಸಿ, ಅವರಿಗೂ ನಿಯಮಾನುಸಾರ ಹಕ್ಕುಪತ್ರ ನೀಡುವ ಕುರಿತು ಗಮನಹರಿಸಲಾಗುವುದು ಎಂದರು.
ರಾಜ್ಯಪಾಲರು ಅಂಕಿತ ಹಾಕಿದ್ದಾರೆ: ಭೂಕಂದಾಯ ಕಾಯ್ದೆ 191ರ ಅಡಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದಲ್ಲಿ ಅದನ್ನು ತೆರವುಗೊಳಿಸುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇದೆ. ಸರ್ಕಾರ ಇದನ್ನು ಗಮನದಲ್ಲಿರಿಸಿಕೊಂಡು ಅಕ್ರಮಸಕ್ರಮ ಕಾಯ್ದೆ ತಿದ್ದುಪಡಿ ಮಾಡಿದ್ದು ಈಗಾಗಲೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇನ್ನೂ ಎಂಟತ್ತು ದಿನಗಳಲ್ಲಿ ಕಾಯ್ದೆ ಜಾರಿಗೆ ಬರಲಿದ್ದು, ಈ ಸಂದರ್ಭದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಸಕ್ರಮಗೊಳಿಸುವ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಿ ತಯಾರಿಸಿ: ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವ ಸಂಬಂಧ ಗಂಭೀರ ಪ್ರಯತ್ನ ನಡೆಯುತ್ತಿದೆ. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಣ್ಯಹಕ್ಕು ಸಮಿತಿ ಸಭೆ ನಡೆಸಿ ಅರಣ್ಯ ಜಾಗದಲ್ಲಿ ಮನೆ ನರ್ಮಿಸಿಕೊಂಡವರ ಪಟ್ಟಿಯನ್ನು ತಕ್ಷಣ ಸಿದ್ಧಪಡಿಸಬೇಕು.
ಪಂಚಾಯ್ತಿಯವರು ಮೊದಲ ಪಟ್ಟಿ ತಯಾರಿಸಿ ಅದನ್ನು ಅರಣ್ಯಹಕ್ಕು ಸಮಿತಿಗೆ ಸ್ಕೆಚ್ ಸಹಿತವಾಗಿ ಕಳಿಸಿಕೊಡಬೇಕು. ಅರಣ್ಯಸಮಿತಿ ಅರ್ಜಿಯನ್ನು ಪರಿಶೀಲಿಸಿ ಗ್ರಾಮ ಸಭೆಯ ಮುಂದೆ ಪಟ್ಟಿಯನ್ನು ಅನುಮೋದನೆ ಪಡೆದು ಉಪವಿಭಾಗಾಧಿಕಾರಿಗಳಿಗೆ ಕಳಿಸುವಂತೆ ಸೂಚನೆ ನೀಡಿ, ಮುಂದಿನ ಐದಾರು ತಿಂಗಳಿನಲ್ಲಿ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಉಪಾಧ್ಯಕ್ಷೆ ಗೌರಮ್ಮ, ತಹಸೀಲ್ದಾರ್ ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ ಡಾ. ಸದಾಶಿವ ಇದ್ದರು.

ನೆರೆಪೀಡಿತರಿಗೆ ಪರಿಹಾರಕ್ಕೆ ಕ್ರಮ
ಕ.ಪ್ರ.ವಾರ್ತೆ, ಸಾಗರ,  ಜು.21
ತಾಲೂಕಿನ ಶುಂಠಿಕೊಪ್ಪ, ಹಿರೇನೆಲ್ಲೂರು, ತಡಗಳಲೆ, ಸೈದೂರು ಕಾನ್ಲೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನೆರೆಯಿಂದಾಗಿ ಸುಮಾರು ಎರಡೂವರೆ ಸಾವಿರ ಎಕರೆ ಜಮೀನು ಜಲಾವೃತವಾಗಿ ರೈತರು ಆತಂಕದಲ್ಲಿದ್ದಾರೆ. ಅವರಿಗೆ ತಕ್ಷಣ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಭಾನುವಾರ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಏಳೆಂಟು ವರ್ಷಗಳಿಂದ ಈ ಪ್ರಮಾಣದಲ್ಲಿ ನೆರೆ ಬಂದಿರಲಿಲ್ಲ. ನೆರೆಯಿಂದ 5 ಕೋಟಿಗೂ ಹೆಚ್ಚಿನ ನಷ್ಟವಾಗಿದೆ. ವಿಪರೀತ ಮಳೆಯಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರಥಮ ಹಂತದಲ್ಲಿ ನೆರೆ ಪರಿಹಾರ ಕಾಮಗಾರಿಯಲ್ಲಿ ತುರ್ತು ಕೆಲಸಗಳನ್ನು ಕೈಗೆತ್ತಿಕೊಳ್ಳಲು 3 ಕೋಟಿ ವೆಚ್ಚದ ಯೋಜನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದರು.
ನಷ್ಟ ತಪ್ಪಿಸಲು ಕ್ರಮ: ನೆರೆಯಿಂದ ಫಸಲು ಕಳೆದುಕೊಂಡ ರೈತರಿಗೆ ಎಕರೆಗೆ 800 ಪರಿಹಾರ ನೀಡುತ್ತಿದ್ದು, ಇದನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ತಾ.ಪಂ. ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಸದಸ್ಯೆ ಶ್ವೇತಾ, ಜಿ.ಪಂ. ಸದಸ್ಯರಾದ ಲಲಿತಾ ನಾರಾಯಣ್, ಸುಮಂಗಲ ರಾಮಕೃಷ್ಣ, ಕಾರ್ಯನಿರ್ವಹಣಾಧಿಕಾರಿ ಡಾ.ಸದಾಶಿವ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.