ಶಿವಮೊಗ್ಗ

ಎಡಬಿಡದ ಮಳೆ; ತೀರದ ಕಷ್ಟಗಳು

Published On :

ಸೊರಬ: ಒಂದು ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಮಂಗಳವಾರ ಹಾಗೂ ಬುಧವಾರ ಈ ಎರಡು ದಿನದಲ್ಲಿ 120 ಮಿಮೀ.ಗೂ ಅಧಿಕ ಮಳೆ ಆಗಿದೆ.
ವರದಾ ಮತ್ತು ದಂಡಾವತಿ ನದಿಗಳ ಪ್ರವಾಹ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾವಿರಾರು ಹೆಕ್ಟೇರ್ ಬತ್ತದ ಗದ್ದೆ, ಸುಮಾರು 300 ಎಕರೆ ಅಡಕೆ, ಬಾಳೆ ತೋಟ ಜಲಾವೃತವಾಗಿದೆ. ಚಂದ್ರಗುತ್ತಿ ಜೋಳದ ಗುಡ್ಡೆ ಗ್ರಾಮದ ಬತ್ತದ ಗದ್ದೆಗಳು ಸಂಪೂರ್ಣ ಮುಳುಗಿದೆ. ತಾಲೂಕಿನ ಬಹುತೇಕ ಹಕ್ಕಲು ಪೈರು ಹಾಳಾಗಿದ್ದು, ಜೋಳ, ಶುಂಠಿ ಇತ್ಯಾದಿ ಕಾಳು ಬೆಳೆಗಳು ರೈತನಿಗೆ ಸಿಗುವ ಸಾಧ್ಯತೆ ಕಡಿಮೆ ಇದೆ.
ಉದ್ರಿ ಗ್ರಾಪಂ ವ್ಯಾಪ್ತಿಯ ಅನೇಕ ಕಡೆ ದಂಡಾವತಿ ನದಿ ಹಾಗೂ ಹಳ್ಳಗಳಿಂದಾಗಿ ಜಮೀನು ಮುಳುಗಿದ್ದು, ಗುಡುಗಿನಕೊಪ್ಪದ ಗೌರಿ ಹಳ್ಳದಲ್ಲಿರುವ ಹೊಳೆ ಶಿವಲಿಂಗ ಮಂಟಪಕ್ಕೆ ನೀರು ಏರಲಾರಂಭಿಸಿದೆ. ಬಂಕಸಾಣದ ಮಧುಲಿಂಗೇಶ್ವರ ಮಂಟಪ, ಹೆಚ್ಚೆ ಕಾರೆಹೊಂಡ ಬಳಿಯ ಸಂಗಮೇಶ್ವರ ಸಂಪೂರ್ಣ ಜಲಾವೃತಗೊಂಡಿದೆ.
 ಶಿಡ್ಡಿಹಳ್ಳಿ ಗ್ರಾಮ ತಲುಪಲು ದಂಡಾವತಿ ನದಿ ಅಡ್ಡಗಟ್ಟಿದ್ದು, ಇಲ್ಲಿನ ಜನತೆ ಕೆಲಕಾಲ ಅಜ್ಞಾತದಲ್ಲಿರಬೇಕಾದ ಪರಿಸ್ಥಿತಿ ಎದುರಾಗಿದೆ. ಚಂದ್ರಗುತ್ತಿ ಭಾಗದ ಕತವಾಯಿ ಹಳ್ಳದ ಅರ್ಭಟದಿಂದಾಗಿ ಬಸ್ತಿಕೊಪ್ಪ ಗ್ರಾಮದ ರಸ್ತೆ ಸಂಪರ್ಕ ಕಡಿದುಕೊಂಡಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಸೊರಬ ತೊಗರ್ಶಿ, ಶಿರಾಳಕೊಪ್ಪ ಹಾಗೂ ಸಿದ್ಧಾಪುರ ರಸ್ತೆ ಸಂಚಾರ ಸ್ಥಗಿತಗೊಳ್ಳಲಿದೆ. ಪಟ್ಟಣ ಸಮೀಪದ ಚಿಕ್ಕಶಕುನ ಕೆರೆ ಏರಿ ಈಗಾಗಲೆ ಕುಸಿದಿದ್ದು, ಸಾಮಾನ್ಯ ಜನ ಸಂಚಾರಕ್ಕೆ ತೊಂದರೆ ಇಲ್ಲ, ಮಳೆ ಬಿಡುವು ನೀಡದೆ ಹೋದಲ್ಲಿ ಈ ಕೆರೆ ಪೂರ್ಣ ಒಡೆದು ಸೊರಬ-ಉದ್ರಿ ಸಂಪರ್ಕಕ್ಕೆ ಅಡ್ಡಿಯಾಗುತ್ತದೆ. ಈಗಾಗಲೆ ಜಡೆಕೋಟೆಕೊಪ್ಪ, ಹೊಸೂರು ಮಾರ್ಗ ಸಂಪರ್ಕ ಕಡಿದುಕೊಂಡಿದೆ.
ಗುಡುಗಿನಕೊಪ್ಪ ಗ್ರಾಮದ ಚಂದ್ರಪ್ಪ ಎಂಬುವವರ ಮನೆ ಕುಸಿದು ನಷ್ಟ ಸಂಭವಿಸಿದೆ. ಹೆಚ್ಚೆ ಹೊಸಕೊಪ್ಪ ಗ್ರಾಮದಲ್ಲಿನ ಕನ್ನಪ್ಪ ಅವರ ಮನೆ ಗೋಡೆ ಕುಸಿದು ವರ್ಷದ ಆಹಾರ ಬತ್ತ ಹಾಳಾಗಿದೆ. ಮನೆಯಲ್ಲಿ ಪುಟ್ಟ ಮಗುವಿದ್ದು ಚಳಿಗಾಳಿಯಿಂದ ರಕ್ಷಣೆ ಇಲ್ಲದಂತಾಗಿದೆ. ತಾಲೂಕಿನ ಉಳವಿ, ಚಂದ್ರಗುತ್ತಿ ಹೋಬಳಿಯ ಅನೇಕ ಗ್ರಾಮಗಳಲ್ಲಿ ನಾಲ್ಕಾರು ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದೆ.
ಪಟ್ಟಣದಲ್ಲೂ  ಮೇಲಿಂದ ಮೇಲೆ ಟ್ರಿಪ್ ಆಗುತ್ತಿದ್ದು, ಕಚೇರಿ, ಝೆರಾಕ್ಸ್, ವಿದ್ಯುತ್ ಉಪಕರಣಗಳ ದುರಸ್ತಿ ಇತ್ಯಾದಿ ಕೆಲಸ ಕಾರ್ಯಗಳಿಗೆ ತೀವ್ರ ಅಡಚಣೆ ಉಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.