ಆಶ್ರಯದಾತನ ಕಳಕೊಂಡು ತಬ್ಬಿಬ್ಬಾದ ನೆಲೆ ಮಕ್ಕಳು
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.30
ಸಮಾಜ ಸೇವಕ ಮೈಲಾರಿಯವರ ಸಾವಿನ ಸುದ್ದಿ ಕೇವಲ ಅವರ ಕುಟುಂಬಕ್ಕೆ ಹಾಗೂ ಆತ್ಮೀಯ ಬಳಗಕ್ಕಷ್ಟೇ ನೋವು ತಂದಿಲ್ಲ, ಮೈಲಾರಿಯವರ ಆಶ್ರಯದಲ್ಲೇ ಭವಿಷ್ಯದ ಕನಸು ಕಟ್ಟಿದ ಮಾಧವ ನೆಲೆಯ 37 ಕಂದಮ್ಮಗಳಿಗೆ ತೀವ್ರ ಆಘಾತ ತಂದಿದೆ.
ಮೈಲಾರಿಯವರಲ್ಲಿ ಅಪ್ಪ, ಅಣ್ಣನನ್ನು ಕಂಡಿದ್ದ ಅನಾಥ, ಚಿಂದಿ ಆಯುವ ಮಕ್ಕಳು ಮೈಲಾರಿಯವರ ಸಾವನ್ನು ಒಪ್ಪಿಕೊಳ್ಳಲು ಸುತಾರಾಂ ಸಿದ್ಧರಿಲ್ಲದ ಪರಿಸ್ಥಿತಿ ಮಂಗಳವಾರ ನಿರ್ಮಾಣವಾಗಿತ್ತು. ತಮ್ಮ ಬೇಕು ಬೇಡಗಳನ್ನು ನಿರ್ಧರಿಸಿ, ಒಂದು ದಿನವೂ ಹೊಟ್ಟೆ ಬಟ್ಟೆಗೆ ಕೊರತೆಯಾಗದಂತೆ ನೋಡಿಕೊಂಡಿದ್ದ ಆಶ್ರಯಧಾತ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆ ಮಕ್ಕಳು ಚಡಪಡಿಸುತ್ತಿದ್ದರು.
ಮಂಗಳವಾರ ಮಧ್ಯಾಹ್ನ ಮೈಲಾರಿಯವರ ಮೃತ ದೇಹ ಮಾಧವ ನೆಲೆ ತಲುಪುತ್ತಿದ್ದಂತೆ ಆ ಮಕ್ಕಳಲ್ಲಿ ದುಃಖ ಉಮ್ಮಳಿಸಿ ಬಂದಿತ್ತು. ಮಾಧವ ನೆಲೆಗೆ ಅಕ್ಷರಶಃ ಸೂತಕದ ಛಾಯೆ ಆವರಿಸಿತ್ತು. ಮಕ್ಕಳು, ಸೇವಾವ್ರತಿಗಳು ಬಿಕ್ಕಿಬಿಕ್ಕಿ ಅಳುತ್ತಿದ್ದುದು ಕಂಡುಬಂತು.
ಮೈಲಾರಿಯವರ ಹಿನ್ನೆಲೆ: ಮೂಲತಃ ತರೀಕೆರೆ ತಾಲೂಕು ಅಜ್ಜಂಪುರದ ಮಲ್ಲಪ್ಪ ಮತ್ತು ಕಮಲಮ್ಮ ದಂಪತಿಯ ಕೊನೆಯ ಪುತ್ರರಾದ ಮೈಲಾರಿಯವರು ಶಿವಮೊಗ್ಗ ದುರ್ಗಿಗುಡಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಇಲ್ಲಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದರು. ಸ್ವಯಂಸೇವಕ ಸಂಘದ ಕುಟುಂಬದವರಾದ ಇವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಸಹೋದರಿ ಮತ್ತು ಸಹೋದರರೊಂದಿಗೆ 50 ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ಸೇವಾ ಮನೋಭಾವನೆಯನ್ನು ಹೊಂದಿದ್ದ ಮೈಲಾರಿಯವರು ತಮ್ಮ ಪದವಿ ಶಿಕ್ಷಣ ಮುಗಿಯುತ್ತಿದ್ದಂತೆ ಮೂರುವರ್ಷ ಕಾಲ ಉಡುಪಿಯಲ್ಲಿ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದರು. ನಂತರ ಶಿವಮೊಗ್ಗಕ್ಕೆ ಬಂದು ಪ್ರಿಂಟಿಂಗ್ಪ್ರೆಸ್ ಆರಂಭಿಸಿ, ಜೊತೆ ಜೊತೆಗೆ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1989ರಲ್ಲಿ ಡಾಕ್ಟರ್ಜೀ ಜನ್ಮ ಶತಮಾನೋತ್ಸವದ ನೆನಪಿಗಾಗಿ ಕೊಳಚೆ ಪ್ರದೇಶದಲ್ಲಿ ಸಂಘದ ವತಿಯಿಂದ ಆರೋಗ್ಯ ಸೇವೆ ಒದಗಿಸಬೇಕೆಂಬ ನಿರ್ಣಯದಂತೆ ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಕೇಶವ ಉಚಿತ ಚಿಕಿತ್ಸಾಲಯ ಪ್ರಾರಂಭಿಸಿದ ನಂತರ ಅದನ್ನು ಈವರೆಗೂ ನಿರ್ವಹಣೆ ಮಾಡಿಕೊಂಡು ಬಂದಿದ್ದರು.
ಹಾಗೆಯೇ 1995ರಲ್ಲಿ ಸಂಘದ ಎರಡನೇ ಸರಸಂಘಚಾಲಕರಾದ ಗುರೂಜಿಯವರ ನೆನಪಿನಲ್ಲಿ ಶಿವಮೊಗ್ಗದಲ್ಲಿ ಮಾಧವನೆಲೆ ಪ್ರಾರಂಭಿಸಲಾಯಿತು. ಅಂದಿನಿಂದಲೂ ಮೈಲಾರಿಯವರು ಕೆಇಬಿ ಉದ್ಯೋಗಿ ದಿವಂಗತ ಪ್ರಾಣೇಶ್ರೊಂದಿಗೆ ಇಲ್ಲಿನ ಸೋಮಯ್ಯ ಲೇಔಟ್ನಲ್ಲಿ ನಗರದ ವಿವಿಧೆಡೆ ಚಿಂದಿ ಆಯುತ್ತಿದ್ದ 20 ಮಕ್ಕಳನ್ನು ಮಾಧವನೆಲೆಗೆ ಕರೆತಂದು ಅವರಿಗೆ ಶಿಕ್ಷಣ, ವಸತಿ ಕಲ್ಪಿಸುವಲ್ಲಿ ಶ್ರಮಿಸಿದ್ದರು.
37 ಮಕ್ಕಳಿಗೆ ಶಿಕ್ಷಣ: ಮೈಲಾರಿಯವರ ಪರಿಶ್ರಮದಿಂದಾಗಿ ಇಂದು ಮಾಧವ ನೆಲೆ ಸುಮಾರು 1.5 ಕೋಟಿ ರುಪಾಯಿ ವೆಚ್ಚದ ಬೃಹತ್ ಕಟ್ಟಡದಲ್ಲಿ ನೆಲೆಗೊಂಡಿದ್ದು, ಇಂದು ಅಲ್ಲಿ 37 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕೇಶವ ಉಚಿತ ಚಿಕಿತ್ಸಾಲಯ ಮತ್ತು ಮಾಧವ ನೆಲೆಯ ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು 60-70 ಸಾವಿರ ಖರ್ಚಾಗುತ್ತಿದ್ದು, ಅವರು ದಾನಿಗಳಿಂದ ಸಂಗ್ರಹಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

