ಶಿವಮೊಗ್ಗ

ವ್ಯಂಗ್ಯಚಿತ್ರಗಳಿಲ್ಲದ ಪತ್ರಿಕೆ ಒಣಭೂಮಿಯಿದ್ದಂತೆ: ಹಂಪನಾ

Published On :

ಕಪ್ರ ವಾರ್ತೆ  ಶಿವಮೊಗ್ಗ  ಜೂ. 7
ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ ಇಲ್ಲವಾದರೆ ಅದು ಒಣಭೂಮಿಯಂತೆ. ವ್ಯಂಗ್ಯಚಿತ್ರ ಜೊತೆಗೂಡಿದರೆ ಅಮೃತವೃಕ್ಷ ನೆಟ್ಟಂತೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ, ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ವಾರ್ತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ವ್ಯಂಗ್ಯಚಿತ್ರಕಾರರ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇದು ಐಟಿ, ಬಿಟಿ ಕಾಲವಾಗಿದ್ದು ಎಲ್ಲವೂ ವೇಗದಲ್ಲಿ ನಡೆಯುವುದರಿಂದ ವ್ಯಂಗ್ಯಚಿತ್ರಕಾರನು ವೇಗ ಮತ್ತು ಚುರುಕುತನವನ್ನು ಬೆಳೆಸಿಕೊಳ್ಳಬೇಕೆಂದರು
ವ್ಯಂಗ್ಯಚಿತ್ರಕಲೆ ಒಬ್ಬ ವ್ಯಕ್ತಿಯ ಮುಖ ನೋಡಿದಕ್ಷಣಾರ್ಧದಲ್ಲಿಯೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಗ್ರಹಿಸಿ ಗೆರೆಗಳ ಮೂಲಕ ವಿಡಂಬನೆ ಮಾಡುವ ಕಲೆ. ಆದ್ದರಿಂದ ವ್ಯಂಗ್ಯಚಿತ್ರಕಾರರಿಗೆ ಏಕಾಗ್ರತೆ ಬಹುಮುಖ್ಯ. ಇವರ ಹುದ್ದೆ ಸಾಮಾನ್ಯದ್ದಲ್ಲ. ಅನೇಕ ಗುಣಗಳ ಸಮಾವೇಶ ಹೊಂದಿದ ವ್ಯಕ್ತಿ ಮಾತ್ರ ವ್ಯಂಗ್ಯಚಿತ್ರಕಾರನಾಗಬಲ್ಲ. ನಿರಂತರ ಓದುವ, ವ್ಯಕ್ತಿತ್ವವನ್ನು ಕ್ಷಣದಲ್ಲಿ ಅಳೆಯುವ, ತಕ್ಕಡಿಯಲ್ಲಿ ತೂಗಿನೋಡುವ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳು ಉತ್ತಮ ವ್ಯಂಗ್ಯಚಿತ್ರಕಾರರಾಗಬಹುದು ಎಂದರು.
ಅಂಕು ಡೊಂಕು: ವ್ಯಂಗ್ಯಚಿತ್ರಕಾರರನ್ನು ವಕ್ರೋಕ್ತಿ ಜೀವಿಗಳೆಂದೂ ಕರೆಯಬಹುದು. ವಕ್ರಕ್ಕೆ ಸೌಂದರ್ಯ ಎಂಬ ಅರ್ಥವೂ ಇದೆ. ಈ ಅಂಕುಡೊಂಕುಗಳಲ್ಲಿ ಸೌಂದರ್ಯತೆ ಇದೆ. ಅದನ್ನು ಪ್ರಸ್ತುತಪಡಿಸಿ ಸಮಾಜಕ್ಕೆ ಸಂದೇಶ ನೀಡುತ್ತಿರುವ ವ್ಯಂಗ್ಯಚಿತ್ರಕಾರರ ಕೊಡುಗೆ ಮಹತ್ವದ್ದು. ಯುವ ವ್ಯಂಗ್ಯಚಿತ್ರಕಾರರನ್ನು ಪ್ರೋತ್ಸಾಹಿಸುವ ಇಂಥ ಕಾರ್ಯಾಗಾರಗಳು ಇಂದಿನ ಪೀಳಿಗೆಗೆ ಅವಶ್ಯಕ ಎಂದ ಹಂಪನಾ, ವ್ಯಂಗ್ಯಚಿತ್ರಕಾರರು ಕಾಲಕ್ಕೆ ತಕ್ಕಹಾಗೆ ಸಜ್ಜುಗೊಳ್ಳಬೇಕಾಗಿದೆ ಎಂದರು.
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ಎಸ್.ವಿ. ಪದ್ಮನಾಭ್, ಹಿರಿಯ ವ್ಯಂಗ್ಯಚಿತ್ರಕಾರ ಬಿ.ಜಿ. ಗುಜ್ಜಾರಪ್ಪ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಪ್ರತಿಷ್ಠಾನದ ಕೋಶಾಧಿಕಾರಿ ಮನುದೇವ್, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಹಮೀದ್ ಖಾನ್ ಇದ್ದರು.
ಬೆಂಗಳೂರಲ್ಲಿ ಸಮ್ಮೇಳನ
ಮಾಧ್ಯಮ ಅಕಾಡೆಮಿ ಯುವ ದಕ್ಷಿಣ ಭಾರತ ಮಟ್ಟದ ವ್ಯಂಗ್ಯಚಿತ್ರಕಾರರ ಸಮ್ಮೇಳನವನ್ನು ಆಯೋಜಿಸಲು ಉದ್ದೇಶಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಈ ವಿಷಯ ತಿಳಿಸಿದ್ದು, ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಶೀಘ್ರ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ತೀರ್ಥಹಳ್ಳಿ ತಾಲೂಕು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ಶುಕ್ರವಾರದಿಂದ ಆರಂಭವಾದ ಮೂರು ದಿನಗಳ ರಾಜ್ಯಮಟ್ಟದ ವ್ಯಂಗ್ಯ ಚಿತ್ರಕಾರರ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ಪ್ರೋತ್ಸಾಹಿಸುವ ಉದ್ದೇಶ: ವ್ಯಂಗ್ಯಚಿತ್ರ ಎಂದರೆ ಕಾಮಿಕ್ ರೀತಿ ಅಲ್ಲ. ಸಮಾಜಕ್ಕೆ ಸಂದೇಶ ಕೊಡುವ ಒಂದು ಮಾಧ್ಯಮ ಎಂದ ಅವರು, ಇಂದು ಡಿಜಿಟಲ್ ತಂತ್ರಜ್ಞಾನ ಆವರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪೇಪರ್ ಪೆನ್ನಿನ ವ್ಯವಹಾರ ಇರುವುದಿಲ್ಲ. ಹೀಗಾಗಿ ವ್ಯಂಗ್ಯ ಚಿತ್ರಕಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವ್ಯಂಗ್ಯ ಚಿತ್ರಕಾರರ ಸಮ್ಮೇಳನ ಆಯೋಜಿಸುವ ಚಿಂತನೆ ಇದೆ. ಕೇರಳ, ಚೆನ್ನೈ, ಮುಂಬೈನಲ್ಲಿರುವ ಪ್ರಮುಖ ವ್ಯಂಗ್ಯಚಿತ್ರಕಾರರನ್ನು ಈ ಸಮ್ಮೇಳನಕ್ಕೆ ಆಹ್ವಾನಿಸೋಣ ಎಂದು ತಿಳಿಸಿದರು.
ಪ್ರಸಕ್ತ ವಿದ್ಯಮಾನ ಹಾಗೂ ಆಳುವ ಸರ್ಕಾರವನ್ನು ಕೇವಲ ರೇಖೆಗಳಿಂದಲೇ ವಿಡಂಬನೆ ಮಾಡುವ ಮೂಲಕ ಜನರನ್ನು ತಲುಪುವ ವ್ಯಂಗ್ಯಚಿತ್ರಕಲೆ ಮಾಧ್ಯಮಗಳಿಗೆ ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ವ್ಯಂಗ್ಯಚಿತ್ರಕಾರರ ಸಮ್ಮೇಳನ ಆಯೋಜಿಸುವ ಚಿಂತನೆ ಇದೆ ಎಂದು ಹೇಳಿದರು.
ಕೊರತೆ ಇದೆ: ನಮ್ಮಲ್ಲಿ ವ್ಯಂಗ್ಯಚಿತ್ರಕಾರರ ಕೊರತೆ ಇದೆ ಎಂದ ಅವರು, ಯುವ ಚಿತ್ರಕಾರರನ್ನು ವ್ಯಂಗ್ಯಚಿತ್ರಕಲೆಗೆ ಪ್ರೋತ್ಸಾಹಿಸಿ ಸಿದ್ಧಪಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ಹಾಗೂ ಕನ್ನಡಪ್ರಭದ ವ್ಯಂಗ್ಯಚಿತ್ರಕಾರ ಎಸ್.ವಿ. ಪದ್ಮನಾಭ ಮಾತನಾಡಿ, ಕೇವಲ ನಗಿಸುವುದೊಂದೇ ವ್ಯಂಗ್ಯಚಿತ್ರದ ಹಿಂದಿನ ಉದ್ದೇಶವಲ್ಲ. ಅದೊಂದು ವಿಮರ್ಶೆಯಾಗಿರಬೇಕು, ಸಮಾಜದ ಅಂಕುಡೊಂಕುಗಳನ್ನು ಎತ್ತಿತೋರಿಸುವ ಮಾಧ್ಯಮ ಎಂದರು.
ಮಾರ್ಗದರ್ಶನ: ಕಲ್ಪನೆಗಳನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬ ವಿಷಯ ಇಟ್ಟುಕೊಂಡು ಕಾರ್ಯಾಗಾರ ರೂಪುಗೊಂಡಿದೆ. ವ್ಯಂಗ್ಯಚಿತ್ರಕಾರನು ಸಂದರ್ಭಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಅನಿಮೇಶನ್, ಕ್ಯಾರಿಕೇಚರ್, ರಾಜಕೀಯ ವಿಷಯದಲ್ಲಿ ಖ್ಯಾತಿವೆತ್ತ ವ್ಯಂಗ್ಯಚಿತ್ರಕಾರರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.
ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ತರುವುದು ಮತ್ತು ಸೂಕ್ತ ದಾರಿ ತೋರಿಸುವ ಉದ್ದೇಶ ಈ ಕಾರ್ಯಾಗಾರದ್ದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.