ಶಿವಮೊಗ್ಗ

ಪಠ್ಯದಲ್ಲಿ ವ್ಯಂಗ್ಯಚಿತ್ರ ಅಳವಡಿಕೆಗೆ ಕ್ರಮ: ಕಿಮ್ಮನೆ

Published On :

ಕ.ಪ್ರ. ವಾರ್ತೆ ,  ಶಿವಮೊಗ್ಗ ,  ಜೂ.8
ಶಿಕ್ಷಣ ಇಲಾಖೆ ಪಠ್ಯಕ್ರಮದಲ್ಲಿ ವ್ಯಂಗ್ಯ ಚಿತ್ರಕಲೆ ಅಳವಡಿಕೆಯ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭರವಸೆ ನೀಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ವಾರ್ತಾ ಇಲಾಖೆ ಆಶ್ರಯದಲ್ಲಿ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಜ್ಯಮಟ್ಟದ ವ್ಯಂಗ್ಯ ಚಿತ್ರಕಾರರ ಕಾರ್ಯಾಗಾರದಲ್ಲಿ ಶನಿವಾರ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪುಟದಲ್ಲಿ ಚರ್ಚೆ: ವ್ಯಂಗ್ಯಚಿತ್ರಗಳ ಮೂಲಕ ಮಕ್ಕಳ ಕಲಿಕೆ ಸುಲಭ ಮಾರ್ಗವಾಗಿರುವುದರಿಂದ ಪ್ರಾಥಮಿಕ ಶಾಲಾ ಪಠ್ಯದಲ್ಲಿ ವ್ಯಂಗ್ಯಚಿತ್ರಗಳ ಮೂಲಕ ಪಾಠಗಳನ್ನು ಹೇಳಿಕೊಡುವ ಕಾಮಿಕ್ಸ್ ಪಠ್ಯಕ್ರಮದ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ವ್ಯಂಗ್ಯ ಚಿತ್ರ ಕಲೆಗೆ ಪ್ರೋತ್ಸಾಹ ನೀಡುವುದು ಅಗತ್ಯವಿರುವುದರಿಂದ ಈ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವ್ಯಂಗ್ಯ ಚಿತ್ರಕಲೆಯನ್ನು ಒಂದು ಪಠ್ಯ ವಿಷಯವನ್ನಾಗಿಸಲು ಪ್ರಯತ್ನ ನಡೆಸಲಾಗುವುದು ಎಂದರು.
ವಿವಿ ಬಗ್ಗೆಯೂ ಚರ್ಚಿಸಲಾಗುವುದು: ಪ್ರಸ್ತುತ ಚರ್ಚಿತ ವಿಷಯಗಳನ್ನು ವ್ಯಂಗ್ಯ ಚಿತ್ರಕಲೆ ಮೂಲಕ ವಿಮರ್ಶಾತ್ಮಕವಾಗಿ ಪ್ರಸ್ತುತಪಡೆಸುವ ಕಲೆ ವ್ಯಂಗ್ಯ ಚಿತ್ರಕ್ಕಿದೆ. ವಿಮರ್ಶಾತ್ಮಕ ಲೇಖನಗಳನ್ನು ಅರ್ಥೈಸುವ ಚಿತ್ರಣವನ್ನು ಕಲೆ ಹೊಂದಿದೆ ಎಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಸ್ತಾಪಿಸಿರುವ ಮಹಾತ್ಮಗಾಂಧಿ ಮಾಧ್ಯಮ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ವಿಷಯದ ಬಗ್ಗೆಯೂ, ಅದರ ಸಾಧಕ ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ವ್ಯಂಗ್ಯಚಿತ್ರಗಳು ಮನುಷ್ಯನಲ್ಲಿ ಆಸಕ್ತಿಗಳನ್ನು ಹುಟ್ಟಿಹಾಕುತ್ತದೆ. ಅದರೊಂದಿಗೆ ಮನುಷ್ಯನಲ್ಲಿ ಬದಲಾವಣೆ ತರುತ್ತದೆ. ಅಲ್ಲದೇ, ಆಸಕ್ತಿ ಮತ್ತು ಕುತೂಹಲ ಯಶಸ್ವಿ ವ್ಯಕ್ತಿಯ ಪ್ರಮುಖ ಗುಟ್ಟುಗಳು. ಆಸಕ್ತಿ ಮತ್ತು ಕುತೂಹಲ ಮನುಷ್ಯನ ಬದುಕನ್ನೇ ಬದಲಾಯಿಸುವ ಅಸ್ತ್ರಗಳು ಕೂಡ ಹೌದು. ಇವನ್ನು ಪ್ರತಿಯೊಬ್ಬರೂ ಜೀವನದುದ್ದಕ್ಕೂ ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಾಗೂ ಯಶಸ್ವಿ ವ್ಯಕ್ತಿಯಾಗಬೇಕು ಎಂದರು.
ಯುವಕರು ಆಸಕ್ತಿ ತೋರಲಿ: ವ್ಯಂಗ್ಯಚಿತ್ರಕಾರರಿಗೆ ಸಾಧಾರಣವಾಗಿ ರಾಜಕಾರಣಿಗಳು ವಸ್ತುವಾಗುತ್ತಾರೆ. ಆದರೆ ವ್ಯಂಗ್ಯಚಿತ್ರಗಳು ಎಷ್ಟೊಂದು ಪರಿಣಾಮ ಬೀರುತ್ತವೆ ಎಂದರೆ, ಕೆಲವೊಮ್ಮೆ ಬಹು ಚರ್ಚಿತ ವಿಷಯಗಳಾಗಿವೆ ಹಾಗೂ ನ್ಯಾಯಾಲಯದವರೆಗೆ ವಿಷಯ ಹೋಗಿದ್ದು ಇದೆ. ಇಂತಹ ಪರಿಣಾಮಕಾರಿ ಮಾಧ್ಯಮ, ಸಾರ್ವಜನಿಕರನ್ನು ಬಹುಬೇಗ ತಲುಪಬಹುದಾದ ಮಾಧ್ಯಮದ ಬಗ್ಗೆ ಯುವಕರು ಹೆಚ್ಚಿನ ಆಸಕ್ತಿ ತೋರಬೇಕು ಎಂದು ನುಡಿದರು.
ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷ ಎಸ್.ವಿ. ಪದ್ಮನಾಭ ಮಾತನಾಡಿ, 35 ವರ್ಷಗಳ ಇತಿಹಾಸ ಇರುವ ವ್ಯಂಗ್ಯಚಿತ್ರಕಾರರ ಸಂಘದಲ್ಲಿ 100ಕ್ಕೂ ಹೆಚ್ಚು ಕಲಾವಿದರು ಸಂಘಕ್ಕೆ ಸದಸ್ಯರಾಗಿದ್ದಾರೆ ಎಂದ ಅವರು, ಶಿಕ್ಷಣ ಇಲಾಖೆ ಪಠ್ಯಪುಸ್ತಕ ರಚನಾಸಮಿತಿಗೆ ವ್ಯಂಗ್ಯಚಿತ್ರಕಾರರನ್ನು ಸದಸ್ಯರನ್ನಾಗಿ ನೇಮಿಸಬೇಕು ಹಾಗೂ ಶಿಕ್ಷಣ ಇಲಾಖೆಯ ವಿವಿಧ ಪ್ರಚಾರಕ್ಕೆ ವ್ಯಂಗ್ಯಚಿತ್ರ ಬಳಸಬೇಕೆಂದು ಸಚಿವರಿಗೆ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಜಿಪಂ ಸದಸ್ಯ ಪದ್ಮನಾಭ, ಹಿರಿಯ ವ್ಯಂಗ್ಯಚಿತ್ರಕಾರ ಬಿ.ಜಿ. ಗುಜ್ಜಾರಪ್ಪ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಕಾರ್ಯದರ್ಶಿ ಹಮೀದ್‌ಖಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.