ಶಿವಮೊಗ್ಗ

ಗಾಂಧಿಮಂದಿರದಲ್ಲಿ ಹಲಸಿನ ಸಂತೆ

Published On :

ಸಾಗರ: ಹೆಗ್ಗೋಡಿನ ಬಾಲನಂದನ ಟ್ರಸ್ಟ್ ಪಟ್ಟಣದ ಗಾಂಧಿಮಂದಿರದಲ್ಲಿ ಹಮ್ಮಿಕೊಂಡಿದ್ದ ಹಲಸಿನ ಸಂತೆಯಲ್ಲಿ ವಿವಿಧ ತಳಿಯ ಹಲಸಿನ ಕಾಯಿ, ಹಣ್ಣುಗಳು, ಹಲಸಿನ ವೈವಿಧ್ಯಮಯ ಖಾದ್ಯಗಳು ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಇತ್ತೀಚಿನ ವರ್ಷಗಳಲ್ಲಿ ಅಪರೂಪವಾಗುತ್ತಿರುವ ಹಲಸಿನ ತಳಿ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಬಾಲನಂದನ ಟ್ರಸ್ಟ್ ಹಲಸಿನ ಕುರಿತಾದ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡಿದ್ದಲ್ಲದೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಹಲಸಿನ ಸಂತೆ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ರವೀಂದ್ರ ಕಾಶಿ, ಹಲಸಿನ ತಳಿ ಸಂರಕ್ಷಣೆಯ ನಿಟ್ಟಿನಲ್ಲಿ ಇಂತಹ ಸಂತೆಗಳು ಸಹಕಾರಿಯಾಗಲಿವೆ. ಹಲಸಿನ ಹಣ್ಣುಗಳ ಜೊತೆಯಲ್ಲಿ ಹಲಸಿನಿಂದ ತಯಾರಿಸಿದ ವಿವಿಧ ತಿನಿಸುಗಳನ್ನು ಸ್ವತಃ ಬೆಳೆಗಾರರು ಮತ್ತು ಆಹಾರ ಸಿದ್ದಪಡಿಸಿದ ವ್ಯಕ್ತಿಗಳೆ ನೇರವಾಗಿ ವ್ಯಾಪಾರ ಮಾಡಲು ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ರೈತರು ಹಾಗೂ ರೈತ ಮಹಿಳೆಯರಿಗೆ ಪ್ರೋತ್ಸಾಹದ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಈ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹಲಸಿನ ಹಣ್ಣಿನಲ್ಲಿ ಬಕ್ಕೆ ಮತ್ತು ಬೆಳವ ಎನ್ನುವ ಎರಡು ವಿಭಾಗವಿದ್ದು, ಬಕ್ಕೆ ಹಣ್ಣಿನಲ್ಲಿ ಅನೇಕ ವಿಧಗಳಿದೆ. ಮಲೆನಾಡು ಭಾಗದಲ್ಲಿ ಸುಳಮನೆ ಬಕ್ಕೆ, ಅತ್ತಿಸರ ಬಕ್ಕೆ, ಕಾನುಗೋಡು ಬಕ್ಕೆ, ಕೆಳದಿ ಬಕ್ಕೆ, ಚಿದಂಬರಯ್ಯ ಬಕ್ಕೆ ಸೇರಿದಂತೆ 20ಕ್ಕೂ ಹೆಚ್ಚು ಜಾತಿಗಳಿವೆ. ಅದರಲ್ಲಿಯೂ ಮಂಕಾಳೆಯ ಚಂದ್ರಬಕ್ಕೆ ತಳಿ ಅತ್ಯಂತ ವಿಶೇಷವಾಗಿದೆ. ಆದರೆ ಎಷ್ಟೋ ಜನರಿಗೆ ಇವುಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಂತೆಯಲ್ಲಿ ತಾಲೂಕಿನ ಬೇರೆಬೇರೆ ಭಾಗಗಳಿಂದ ಹಲಸು ಬೆಳೆಯುವ ಬೆಳೆಗಾರರು ಪಾಲ್ಗೊಂಡಿದ್ದು, ಜನರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಒಂದು ದಿನದ ಈ ಪ್ರದರ್ಶನ, ಮಾರಾಟದಲ್ಲಿ ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದು, ಹಲಸಿನ ಬಗ್ಗೆ ಅವರಿಗೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ. ಜೂ. 23ರಂದು ಮತ್ತೊಮ್ಮೆ ಇದೆ ಸ್ಥಳದಲ್ಲಿ ಹಲಸಿನ ಸಂತೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಟ್ರಸ್ಟಿನ ಸುಬ್ರಾವ್, ಯು.ಎನ್. ರಾಘವೇಂದ್ರ, ಲಿಂಗರಾಜ್, ಸತ್ಯನಾರಾಯಣ ಭಾಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.