ಶಿವಮೊಗ್ಗ

ಕುವೆಂಪು ಕೃತಿಗಳಲ್ಲಿ ಸಾಮಾಜಿಕ ಕಳಕಳಿ

Published On :

ಕ.ಪ್ರ.ವಾರ್ತೆ, ತೀರ್ಥಹಳ್ಳಿ (ಎಸ್.ವಿ. ಪರಮೇಶ್ವರ ಭಟ್ಟ ವೇದಿಕೆ): ಸಾಮಾಜಿಕ ಕಳಕಳಿಯ ಹಿನ್ನೆಲೆ ಎಲ್ಲ ಸಾಧಕರ ಅಸೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ತುಡಿತ ಎಲ್ಲರಿಗೂ ಇರುತ್ತದೆ. ಪ್ರಕೃತಿ, ಸಾಮಾಜಿಕ ಕಳಕಳಿಯ ಪ್ರಸ್ತಾಪ ಕುವೆಂಪು ಕೃತಿಗಳಲ್ಲಿ ದೊಡ್ಡ ಪ್ರಮಾಣದಲ್ಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಕಾಳೇಗೌಡ ನಾಗವಾರ ಅಭಿಪ್ರಯಪಟ್ಟರು.
ತೀರ್ಥಹಳ್ಳಿಯ ಗೋಪಾಲ ಗೌಡ ರಂಗಮಂದಿರದಲ್ಲಿ ಎಸ್.ವಿ. ಪರಮೇಶ್ವರ ಭಟ್ಟ ವೇದಿಕೆಯಲ್ಲಿ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 3ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಅಧ್ಯಯನದಲ್ಲಿ ಅಪರಿಮಿತ ವಿಶ್ವಾಸ ಹೊಂದಿದ ಡಾ. ಅಂಬೇಡ್ಕರ್,  ಲೋಹಿಯಾ ಅವರು ಸತತ ಅಭ್ಯಾಸದಿಂದಲೇ ಸಾಮಾಜಿಕ ಕಳಕಳಿಯ ಚಿಂತನೆ ಮಾಡಲು ಸಾಧ್ಯವಾಯಿತು ಎಂದರು.
ಮಹಾರಾಷ್ಟ್ರದಲ್ಲಿ ಕನ್ನಡ ಶಾಸನಗಳೇ ಹೆಚ್ಚಾಗಿ ಲಭಿಸಿದೆ. ಕರ್ನಾಟಕದ ಬನವಾಸಿಯಿಂದ ಗುಜರಾತಿನ ನರ್ಮದಾ ತೀರದವರೆಗೂ ಪಸರಿಸಿದ್ದ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯಲ್ಲಿ ವಿಶ್ವ ಮಟ್ಟದ ಶ್ರೇಷ್ಠ ಕವಿಗಳಿದ್ದಾರೆ. ಅಕ್ಕ ಮಹಾದೇವಯಂತಹ ಚಿಂತಕರಿದ್ದಾರೆ. ಎಲ್ಲ ಧರ್ಮಗಳೂ ಮಹಿಳೆಗೆ ಅಪಮಾನ ಮಾಡಿವೆ. ಇತ್ತೀಚೆಗೆ ಹೇಸಿಗೆ ಹುಟ್ಟಿಸುವ ಮಟ್ಟದಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯಗಳು ನೆಡೆಯುತ್ತಿವೆ. ಹೀಗಾಗದಂತೆ ನೋಡಿಕೊಳ್ಳಬೇಕಾಗಿದ್ದು ಮಾನವಿಯತೆಯ ಧರ್ಮ ಎಂದು ಹೇಳಿದರು.
ರಾಜಶಾಹಿ, ಪುರೋಹಿತಶಾಹಿ ವ್ಯವಸ್ಥೆಗಳಂತಹ ಸವಾಧಿಕಾರಿ ಚಿಂತನೆ ಹೋಗಬೇಕು. ಕ್ರಿಸ್ತಪೂರ್ವದಲ್ಲಿ ಬುದ್ಧನ ಚಿಂತನೆ, ನಂತರದಲ್ಲಿ ಬಸವಣ್ಣನವರ ಚಿಂತನೆ ಈ ನಿಟ್ಟಿನಲ್ಲಿ ಇಡೀ ಜಗತ್ತಿಗೆ ದಾರಿ ತೋರಿಸಿದೆ ಎಂದು ಪ್ರತಿಪಾದಿಸಿದರು. ಸಮಾಜವಾದಕ್ಕೆ ವಿಶೇಷ ಅರ್ಥ ಕಲ್ಪಿಸಿದ ಲೋಹಿಯಾ ಅವರು ಸ್ವಂತಕ್ಕಾಗಿ ಒಂದೇ ಒಂದು ಬ್ಯಾಂಕ್ ಖಾತೆ ಹೊಂದಿರಲಿಲ್ಲ. ಶ್ರೀಮಂತಿಗೆಯೇ ಸರ್ವಸ್ವವಲ್ಲ ಎಂದು ಹೇಳಿದರು.
 ಸಮ್ಮೇಳನದ ಸರ್ವಾಧ್ಯಕ್ಷ ಕೋಣಂದೂರು ಲಿಂಗಪ್ಪ ತಮ್ಮ ಅಧ್ಯಕ್ಷ ಭಾಷಣದಲ್ಲಿ, ಸಾಹಿತ್ಯ ಪ್ರಚೋದನೆ ವಿದ್ಯಾರ್ಥಿಗಳಲ್ಲಿ ಆಗುತ್ತದೆ. ಟಿವಿ, ಕ್ರಿಕೆಟ್ ನಿಯಮಿತವಾಗಿ ನೋಡುವ ಅಭ್ಯಾಸ ಇಟ್ಟುಕೊಂಡರೆ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಬಹುದು ಎಂದು ಹೇಳಿದರು.
ತೀರ್ಥಹಳ್ಳಿಯಲ್ಲಿ ಹುಟ್ಟಿದ್ದೇ ಪುಣ್ಯ ಎಂದ ಅವರು, ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಠ್ಯ ವಿಷಯಗಳನ್ನು ನಿರ್ಧರಿಸುವ  ಪಠ್ಯಪುಸ್ತಕ ಸಮಿತಿಯನ್ನು ಪರಿಷ್ಕರಿಸಲು ಸಚಿವರಲ್ಲಿ ವಿನಂತಿಸಿದರು. ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು, ಹಾ.ಮಾ. ನಾಯಕ್ ಅಂಥವರು ತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ    ಸಾಕಷ್ಟು ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತರನ್ನಾಗಿ ಬದಲಾಯಿಸಿದ್ದಾರೆ. ಶಾಲೆಗಳಲ್ಲಿ ಕೈಬರಹದ ಪ್ರತಿಗಳ ಪುಸ್ತಕ ಮಕ್ಕಳಿಂದ ಬರೆಸುವುದು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು ಶಾಲೆಗಳು  ಮಾಡಬೇಕು ಎಂದು ಹೇಳಿದರು.
 ಒಳ್ಳೆಯ ಚಿಂತನೆಗಳು ಮೂಡಿಬರಬೇಕಾದರೆ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣ ಮಾಡಲಿ ಎಂದು ಹೇಳಿದರು. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಅಗ್ರಹಾರ ಹೋಬಳಿಗಳು  ಅರಣ್ಯ ಕಾಯಿದೆಯಿಂದಾಗಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇದು ತಪ್ಪಬೇಕು, ಇದನ್ನು ಪರಿಷ್ಕರಿಸಲಿ ಎಂದರು.
ಸಚಿವ ಕಿಮ್ಮನೆ ರತ್ನಾಕರ್: ಹಿತವನ್ನು  ಕಾಪಾಡುವ ಹಿರಿಯರ ಆಶೀರ್ವಾದ ಪಡೆಯವುದು ಒಳ್ಳೆಯದು, ಈಗಿನ ಕೆಟ್ಟ ವ್ಯವಸ್ಥೆಯಲ್ಲಿ ಒಳ್ಳೆಯತನವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಸಾಹಿತ್ಯ ಬಿಟ್ಟು ನಾವು ಒಳ್ಳೆಯ ಮನುಷ್ಯರಾಗುವುದು ಕಷ್ಟ, ಇತಿಹಾಸ ಬದಲಾವಣೆಯಾಗದ್ದರೆ ಅದಕ್ಕೆ ಸಾಹಿತ್ಯ ಕಾರಣ ಎಂದು ಹೇಳಿದರು. ತೀರ್ಥಹಳ್ಳಿಯ ಬಾಲೇಬೈಲಿನಲ್ಲಿ ಕನ್ನಡ ಭವನದ ಶಂಕುಸ್ಥಾಪನೆ ನೆರವೇರಿಸಿ, ಇದಕ್ಕೆ 25 ಲಕ್ಷ ಆರ್ಥಿಕ ಸಹಾಯ ನೀಡುವುದಾಗಿ, ಎಲ್ಲರನ್ನೂ ಜೊತೆಜೊತೆಗೆ ತೆಗೆದುಕೊಂಡುಹೋಗುವ ಶಿಕ್ಷಣ ನೀತಿ ಆಗಬೇಕು. ಇದು ಪವಾಡದ ರೀತಿ ಮಾಡಲು ಬರುವುದಿಲ್ಲ, ಸಮಯಾವಕಾಶ ಬೇಕು ಎಂದು ಹೇಳಿದರು.
ಆರಗ ಜ್ಞಾನೇಂದ್ರ, ಸಾಹಿತ್ಯ ಮತ್ತು ಸಂಸ್ಕೃತಿ ಅಂಗವಿಕಲ ಆಗುವುದಕ್ಕೆ ಬಿಡಬಾರದು. ಇದಕ್ಕೆ  ಮಾತೃ  ಭಾಷೆಯಂತಹ  ಪೋಲಿಯೋ ಡ್ರಾಪ್ಸ್ ಹಾಕಬೇಕು. ಹಾಗಾದಾಗ ಮಾತ್ರ ಪರಿಸರ, ಭಾಷೆ, ಮಾತೃ ಭಾಷೆಗಳು ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದು ಹೇಳಿದರು. ಶಿಕ್ಷಣ ಜೀವನೋಪಾಯಕ್ಕಾಗಿ ಮಾತ್ರವಾಗದೆ  ಜ್ಞಾನಾರ್ಜನೆಗೂ ಉಪಯೋಗಕ್ಕೆ ಬರುವಂತಾಗಲಿ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಮಾತನಾಡಿ, ಶಿಕ್ಷಣ ಇಂದು ಉದ್ಯಮವಾಗಿದೆ. ಕನ್ನಡ ಮಾಧ್ಯ 7ನೇ ತರಗತಿಯವರೆಗೂ ಕಡ್ಡಾಯ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಪರ್ವ ಈ ಮ್ಮೇಳನದಿಂದ ಆಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ  ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರಪ್ರದರ್ಶನ, ವ್ಯಂಗ್ಯ ಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಸಮಾರೋಪ ಸಮಾರಂಭ: ಹಂಪಿ ವಿಶ್ವವಿದ್ಯಾಲಯದ ಗ್ರಂಥಾಲಯಾಧಿಕಾರಿ, ಖ್ಯಾತ ಸಾಹಿತಿ ಎಚ್.ಎಸ್. ನಾಗವೇಣಿ ಸಮಾರೋಪ ಭಾಷಣ ಮಾಡಿ, ಸಂಪ್ರದಾಯವಾದಿ ಸಮಾಜ ಸಾಹಿತ್ಯದಲ್ಲೂ ಪುರುಷ ಸಾಹಿತ್ಯ, ಸ್ತ್ರೀ ಸಾಹಿತ್ಯ ಎಂದು ಭೇದವೆಣಿಸುತ್ತಿದೆ. ಭಾಷಾ ಪ್ರಯೋಗದಲ್ಲೂ ಮಹಿಳೆಗೆ ಸ್ವಾತಂತ್ರ್ಯ ನೀಡುತ್ತಿಲ್ಲ. ಮಹಿಳಾ ಸಾಹಿತ್ಯದಲ್ಲಿ ಬರುತ್ತಿರುವುದೆಲ್ಲಾ ಸೋಸಿ, ಸೋಸಿ ಬರೆದ ವಿಷಯಗಳಾಗುತ್ತಿವೆ. ಪುರುಷ ನಿಷ್ಠ ಸಮಾಜಿಕ ಕಟ್ಟುಪಾಡು ಮಡಿವಂತಿಕೆಯನ್ನು ಹೇರುತ್ತಿದೆ, ಮಹಿಳಾ ಸಾಹಿತಿ  ಚೌಕಟ್ಟು ಮೀರದ ಹಾಗೆ ವರ್ತಿಸುತ್ತಿವೆ ಎಂದರು.
ಸಮ್ಮೇಳನದಲ್ಲಿ ಎರಡು ಸಾಹಿತ್ಯಿಕ ಗೋಷ್ಠಿಗಳು, ಒಂದು ಕವಿಗೋಷ್ಠಿಯನ್ನು ಹಮ್ಮಿಕೊಂಡು ನಿರ್ವಹಿಸಲಾಯಿತು. ಸಾಂಸ್ಕೃತಿಕ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮ್ಮೇಳನಕ್ಕೂ ಮೊದಲು ಪಟ್ಟಣದಲ್ಲಿ ಸಾಂಸ್ಕೃತಿಕ ನೆಡಿಗೆ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರ ಧ್ವಜ, ನಾಡ ಧ್ವಜ, ಪರಿಷತ್ತಿನ ಧ್ವಜಾರೋಹಣ ನೆರವೇರಿಸಲ್ಪಟ್ಟಿತು.   ಡಾ.ಜೆ.ಕೆ. ರಮೇಶ್ ಪುಸ್ತಕ ಬಿಡುಗಡೆ ಮಾಡಿದರು.ತಾಲೂಕು ಕಸಾಪ ಅಧ್ಯಕ್ಷ ನೆಂಪೆ ದೇವರಾಜ್ ಮತ್ತು ಸಮ್ಮೇಳನದ ಉಸ್ತುವಾರಿ ಹೊತ್ತಿದ್ದ ಸ್ವಾಗತ ಸಮಿತಿ ಅಚ್ಚುಕಟ್ಟಾಗಿ ಸಮ್ಮೇಳನದ ವ್ಯವಸ್ಥೆ ಮಾಡಿ ಸಾಹಿತ್ಯಾಸಕ್ತರ ಮನ ತಣಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.