ವಾಹನ ದಟ್ಟಣೆಗೆ ಮಿತವ್ಯಯ ಪರಿಹಾರ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.12
ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ, ವಾಹನಗಳ ವೇಗ ನಿಯಂತ್ರಣ ಹೀಗೆ ವಿವಿಧ ರೀತಿಯ ವಾಹನ ಸಂಬಂಧಿ ಸಮಸ್ಯೆಗಳಿಗೆ ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ವಿದ್ಯಾರ್ಥಿಗಳು ಮಿತವ್ಯಯಕಾರಿ ಪರಿಹಾರ ಕಂಡುಹಿಡಿದ್ದಾರೆ.
ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳ ಮೂರು ತಂಡ ವಾರ್ಷಿಕ ಪ್ರಾಜೆಕ್ಟ್‌ನಡಿ ಲೋ ಬಜೆಟ್‌ನಲ್ಲಿ ತಂತ್ರಜ್ಞಾನ ರೂಪಿಸಿದ್ದು, ವಾಹನ ಸಂಬಂಧಿ ಉದ್ಯಮ- ವ್ಯವಸ್ಥೆಗಳು ಇತ್ತ ಚಿತ್ತ ಹರಿಸುವಂತೆ ಮಾಡಿದ್ದಾರೆ.
ಸಂಚಾರ ನಿಯಂತ್ರಣ: ಟ್ರಾಫಿಕ್ ಸಮಸ್ಯೆ ಮಹಾನ್ ನಗರಗಳ ಮಹಾರಗಳೆಗಳಲ್ಲೊಂದು. ಈ ಸಮಸ್ಯೆಗೆ ಪರಿಹಾರ ಸಿಗದೇ ಆಡಳಿತ ವ್ಯವಸ್ಥೆ ಹಪಹಪಿಸುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ರಸ್ತೆಗಳಲ್ಲಿರುವ ವಾಹನಗಳ ಸಂಖ್ಯೆ ಆಧರಿಸಿ ಸಿಗ್ನಲ್ ಲೈಟ್ ನಿಯಂತ್ರಿಸುವ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಾದ ಅಂಶುಮಾನ್, ಮನೀಶ್, ನಿತಿನ್ ಮತ್ತು ಶುಭ ಸಿದ್ಧಪಡಿಸಿದ್ದಾರೆ.
ಉದಾಹರಣೆಗೆ, ಒಂದು ಸಿಗ್ನಲ್‌ನಲ್ಲಿ ನಾಲ್ಕು ಪಥಗಳಿಂದ ಎಷ್ಟು ವಾಹನಗಳು ಬರುತ್ತಿವೆ ಎಂಬುದು ಕ್ಯಾಮರಾ ಮೂಲಕ ಕಂಟ್ರೋಲ್ ರೂಂನಲ್ಲಿ ಬಿತ್ತರಗೊಳ್ಳುತ್ತಿರುತ್ತವೆ. ಜೊತೆಗೆ ಯಾವ ದಿಕ್ಕಿನಲ್ಲಿ ಹೆಚ್ಚು ವಾಹನ ಇದೆಯೋ ಆ ಭಾಗದ ಸಂಚಾರ ಸುಗಮಗೊಳಿಸಲು ಸ್ವಯಂಚಾಲಿತ ವ್ಯವಸ್ಥೆ ಒತ್ತು ನೀಡುತ್ತದೆ. ಹೀಗಾಗಿ ಈಗಿರುವ ನಿಗದಿತ ಸಮಯ ವ್ಯವಸ್ಥೆ ಬದಲಾಗಿ ವಾಹನ ದಟ್ಟಣೆ ಆಧರಿಸಿ ಸ್ವಯಂಚಾಲಿತ ವ್ಯವಸ್ಥೆ ಸಿಗ್ನಲ್ ನೀಡುತ್ತಾ ವಾಹನ ದಟ್ಟಣೆ ನಿಯಂತ್ರಿಸುತ್ತದೆ. ಒಂದು ರಸ್ತೆಯಲ್ಲಿ ವಾಹನವೇ ಇಲ್ಲದೇ ಇದ್ದರೂ ಉಳಿದ ಮೂರು ಕಡೆಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಈ ತಂತ್ರಜ್ಞಾನದಿಂದ ಇಲ್ಲವಾಗುತ್ತದೆ.
ಇಷ್ಟೇ ಅಲ್ಲದೇ ಆಂಬ್ಯುಲೆನ್ಸ್, ವಿಐಪಿ ವಾಹನ ಸಂಚಾರವನ್ನು ಕಂಟ್ರೋಲ್ ರೂಂನಿಂದಲೇ ನಿಯಂತ್ರಿಸಿ ಸಿಗ್ನಲ್ ನೀಡುವ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲೂ ಸಾಧ್ಯವಿದೆ.
ಸಿಗ್ನಲ್‌ನಲ್ಲಿ ಅಳವಡಿಸಿರುವ ಕ್ಯಾಮರಾಗಳು ಸಂಗ್ರಹಿಸುವ ವಾಹನಗಳ ಚಿತ್ರವನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಾಫ್ಟ್‌ವೇರ್ ಲೆಕ್ಕಾಚಾರ ಹಾಕಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವುದು ಈ ತಂತ್ರಜ್ಞಾನ. ಸಹಾಯಕ ಪ್ರೊಫೆಸರ್ ಉಜ್ವಲ ಬಿ.ಎಸ್. ಮಾರ್ಗದರ್ಶನದಡಿ ಈ ಪ್ರಾಜೆಕ್ಟ್ ನಡೆದಿದೆ.
ಮಸುಕಿಲ್ಲ: ವಾಹನದ ವೇಗವನ್ನು ನಿಚ್ಚಳವಾಗಿ ಪತ್ತೆ ಹಚ್ಚುವ ವ್ಯವಸ್ಥಿತ ಸಾಧನವೊಂದನ್ನು ವಿದ್ಯಾರ್ಥಿಗಳ ತಂಡ ಸಿದ್ಧಪಡಿಸಿದೆ. ಸಂಚಾರಿ ಪೊಲೀಸರು ಬಳಸುವ ವೇಗ ಪತ್ತೆ ಸಾಧನ ಅಷ್ಟು ನಿಖರವಾಗಿಲ್ಲ, ಅವರ ಬಳಿ ಇರುವ ಸಾಧನೆ ವೇಗವನ್ನು ಒಂದು ಅಂದಾಜಿನಲ್ಲಿ ಪತ್ತೆ ಹಚ್ಚಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಎಂಬಂತೆ ವಿದ್ಯಾರ್ಥಿಗಳಾದ ಎಂ.ಅಶ್ವಿನಿ, ಕೆ.ವಿ. ಮಮತಾ, ಎಚ್.ಆರ್. ಶ್ರುತಿ, ಸುಷ್ಮಾ ಒಂದು ಪ್ರಾಜೆಕ್ಟ್ ಮಾಡಿದ್ದು, ಅದು ವಾಹನಗಳ ವೇಗದ ಮಿತಿಯನ್ನು ಖಚಿತವಾಗಿ ತಿಳಿಸುತ್ತದೆ.
ಈ ಕೃತಿಯಲ್ಲಿ ಚಲಿಸುವ ವಾಹನದ ಏಕೈಕ ಚಿತ್ರ ಸೆರೆ ಹಿಡಿದು ಚಿತ್ರದ ಮಸುಕನ್ನು ಸಾಫ್ಟ್‌ವೇರ್ ಬಳಸಿ ವಿಶ್ಲೇಷಿಸಲಾಗುತ್ತದೆ. ಅದು ವಾಹನದ ವೇಗವನ್ನು ಶೇ.99ರಷ್ಟು ನಿಖರವಾಗಿ ಹೇಳುತ್ತದೆ. ಈ ಪ್ರಾಜೆಕ್ಟ್ ಡಾ. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ.
ಸ್ಮಾರ್ಟ್ ಕಾರ್ ಪಾರ್ಕಿಂಗ್
ಹೀಗೊಂದು ತಂತ್ರಜ್ಞಾನವನ್ನು ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಅಜಂತ ಭಟ್, ಪವನ್ ಕಾಗಿನೆಲೆ, ರಘುನಂದನ್ ವಿ ನಾಡಿಗ್, ನಿತೇಶ್ ರಾಯ್ಕರ್ ಸಿದ್ಧಪಡಿಸಿದ್ದಾರೆ. ಕಡಿಮೆ ಬೆಲೆಯ ಹೊಸ ಕಾರುಗಳು ಹಾಗೂ ಹಳೆಯ ಕಾರುಗಳಲ್ಲಿ ಸೆನ್ಸರ್ ಇರುವ ಕಾರ್ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಆದರೆ, ಈ ವಿದ್ಯಾರ್ಥಿಗಳ ತಂಡ ಅತಿ ಕಡಿಮೆ ವೆಚ್ಚದಲ್ಲಿ (750-1000 ರು.)ಸಿದ್ಧಪಡಿಸಿದ ಸಾಧನದಲ್ಲಿ ಸೇಫ್ ಪಾರ್ಕಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದಾಗಿದೆ. ಕಾರ್ ಪಾರ್ಕಿಂಗ್ ವೇಳೆ ಎದುರಿಗಿರುವ ಅಡೆ ತಡೆಯನ್ನು ಈ ಸಾಧನ ಪತ್ತೆ ಹಚ್ಚಿ ಚಾಲಕನನ್ನು ಎಚ್ಚರಿಸುತ್ತದೆ. ಎದುರಿನ ಅಡೆತಡೆ (ತಡೆಗೋಡೆ) ಎಷ್ಟು ಸೆಂಟಿಮೀಟರ್ ನಂತರದಲ್ಲಿದೆ ಎಂಬುದು ವಾಹನದೊಳಗೆ ಪ್ರಚುರಗೊಳ್ಳುತ್ತದೆ. ಬೀಪ್ ಸೌಂಡ್, ಕೆಂಪು ದೀಪದ ಮೂಲಕ ಚಾಲಕನನ್ನು ಸಹ ಎಚ್ಚರಿಸುತ್ತದೆ. ಹೀಗಾಗಿ ಪಾರ್ಕಿಂಗ್ ವೇಳೆ ವಾಹನಕ್ಕಾಗುವ ಹಾನಿಯನ್ನು ತಪ್ಪಿಸಬಹುದಾಗಿದೆ. ಇದನ್ನು ಸ್ಮಾರ್ಟ್‌ಫೋನ್ ಸಹಾಯದಿಂದಲೂ ಉಪಯೋಗಿಸಲು ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿಗಳ ತಂಡ ರೂಪಿಸಿದೆ. ಈ ಪ್ರಾಜೆಕ್ಟ್‌ಗೆ ಅಸಿಸ್ಟೆಂಟ್ ಪ್ರೊಫೆಸರ್ ಸುನಿಲ್ ಮಾರ್ಗದರ್ಶನ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

