ಪೆಟ್ರೋಲ್ ದರ ಏರಿಕೆ: ಪ್ರತಿಭಟನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.17
ಕೇಂದ್ರ ಸರ್ಕಾರ ಪೆಟ್ರೋಲ್ ದರ ಹಾಗೂ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಏಕಾಏಕಿ ಏರಿಸಿದ್ದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಸೋಮವಾರ ಹೋರಾಟ ನಡೆಸಿತು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಬಸ್ ಪ್ರಯಾಣ ದರವನ್ನು ಇಳಿಸುವಂತೆ ಆಗ್ರಹಿಸಿದರಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ರಾಜ್ಯದಲ್ಲಿ ಅಧಿಕಾದಲ್ಲಿರುವ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನಿಲುವು ತಳೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡೂ ಜನತೆಯ ಬದುಕಿನ ಮೇಲೆ ಗದಾ ಪ್ರಹಾರ ಮಾಡುತ್ತಿದೆ ಎಂದು ಟೀಕಿಸಿದರು.
ರಾತ್ರೋರಾತ್ರಿ ಬಸ್ ಪ್ರಯಾಣ ದರ ಏರಿಸುವ ಕೆಲಸವನ್ನು ಈ ಹಿಂದೆ ಯಾವ ಸರ್ಕಾರವೂ ಮಾಡಿರಲಿಲ್ಲ. ಇಂತಹ ಹೀನ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದ ಅವರು, ಈ ಕೂಡಲೇ ಏರಿಸಿರುವ ದರವನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಬಸ್ ಪ್ರಯಾಣ ದರ ಏರಿಕೆ ಮಾಡುವುದರ ಜೊತೆಗೆ ವಿದ್ಯುತ್ ದರ ಏರಿಕೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಸಾಮಾನ್ಯರ ಜನಜೀವನಕ್ಕೆ ಪೆಟ್ಟುಕೊಡುತ್ತಿದೆ ಎಂದು ಟೀಕಿಸಿದರು.
ಓಲೈಕೆಗೆ ಮುಂದಾದ ಕಾಂಗ್ರೆಸ್: ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರದ ಕಾಂಗ್ರೆಸ್ ಸರ್ಕಾರ ಜನರ ಬದುಕನ್ನು ಅಸಹನೀಯಗೊಳಿಸಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಎಪಿಎಲ್ ಕಾರ್ಡುದಾರರಿಗೆ ಅಕ್ಕಿ ವಿತರಣೆಯನ್ನು ಏಕಾಏಕಿ ನಿಲ್ಲಿಸುವ ಮೂಲಕ ಒಂದು ಜನಾಂಗದ ಓಲೈಕೆಗೆ ಮುಂದಾಗಿದೆ ಎಂದು ಆಪಾದಿಸಿದರು.
ಆತುರದ ನಿರ್ಧಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆತುರ ಆತುರವಾಗಿ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಟೀಕಿಸಿದರು.
ಅಧಿಕಾರಕ್ಕೆ ಬಂದ ದಿನದಲ್ಲೇ ಜೂ.1ರಿಂದ ಅಕ್ಕಿ ಕೆಜಿ ಒಂದಕ್ಕೆ ಒಂದು ರುಪಾಯಿಯಂತೆ 30 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಲಾಯಿತು. ನಂತರ ಜುಲೈ 1ರಿಂದ ಘೋಷಣೆ ಅನುಷ್ಟಾನ ಎಂದರು. ಈಗ ಒಬ್ಬರು ಇರುವ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ, ಇಬ್ಬರಿರುವ ಕುಟುಂಬಕ್ಕೆ 20 ಕೆಜಿ, 3 ಮತ್ತು ಅದಕ್ಕಿಂತ ಹೆಚ್ಚಿದ್ದರೆ 30 ಕೆಜಿ ಅಕ್ಕಿ ನೀಡುವುದಾಗಿ ಹೇಳಿಕೆ ನೀಡುವ ಮೂಲಕ ಜನರ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಅಗ್ಗದ ಮದ್ಯ ಮಾರಾಟ ಮಾಡುವುದಾಗಿ ಹೇಳಲಾಗಿದೆ, ಇದು ಸರಿಯಲ್ಲ ಎಂದು ಹೇಳಿದ ಮುಖಂಡರು, ವಿದ್ಯಾರ್ಥಿಗಳಿಗೆ ಪಾಸ್ ಕೊಡುವಲ್ಲಿ, ಸೈಕಲ್ ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರುಣ, ಸೂಡಾ ಮಾಜಿ ಅಧ್ಯಕ್ಷದತ್ತಾತ್ರಿ, ಜ್ಞಾನೇಶ್ವರ್, ನಗರಸಭೆ ಸದಸ್ಯರಾದ ಸುನಿತಾ ಅಣ್ಣಪ್ಪ, ರೇಣುಕಾ ನಾಗರಾಜ್, ಜಿಲ್ಲಾ ಮಾಧ್ಯಮ ಪ್ರಮುಖ ಮಧುಸೂಧನ್, ಅಣ್ಣಪ್ಪ, ನಾಗರಾಜ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

