ಶಿವಮೊಗ್ಗ

ಕೃಷಿಯಿಂದ ವಿಮುಖರಾಗುತ್ತಿರುವ ವಿದ್ಯಾವಂತರು: ವಿಷಾದ

Published On :

ಶಿವಮೊಗ್ಗ: ವಿದ್ಯಾವಂತರು ಸೇರಿದಂತೆ ಮಲೆನಾಡಿನ ಕೃಷಿ ಅವಲಂಬಿತ ಕುಟುಂಬಗಳ ಬಹುಸಂಖ್ಯಾತ ರೈತರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಆತಂಕ ವ್ಯಕ್ತಪಡಿಸಿದರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ಆಶ್ರಯದಲ್ಲಿ ಬುಧವಾರ ಸಾಗರದ ಎಸ್.ಆರ್. ಬಾಪಟ್ ಸಮುದಾಯ ಭವನದಲ್ಲಿ ಗೋಡಂಬಿ ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಹೆಚ್ಚು ವಿದೇಶಿ ವಿನಿಮಯವನ್ನು ಗಳಿಸಿಕೊಡುತ್ತಿರುವ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಪ್ರಮುಖವಾದ ಗೋಡಂಬಿ ಬೆಳೆ ಮಲೆನಾಡಿಗರಿಗೆ ಚಿರಪರಿಚಿತ. ಆದರೆ, ಗೇರು ಬೆಳೆಗಾಗಿ ಸಕಾರವು ಅರ್ಹ ರೈತರಿಗೆ ಮಂಜೂರು ಮಾಡಿದ್ದ ಭೂಮಿಯಲ್ಲಿ ಇಂದಿನ ದಿನಗಳಲ್ಲಿ ಅನ್ಯ ಬೆಳೆ ಬೆಳೆಯಲಾಗುತ್ತಿದೆ ಎಂದ ಅವರು, ಮಲೆನಾಡಿನ ಆಯ್ದ ಪ್ರದೇಶಗಳಲ್ಲಿ ಗೋಡಂಬಿ ಬೆಳೆಯಲು ಆಸಕ್ತಿ ತೋರುವ ರೈತರಿರುವಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳು ಸಕಾಲಿಕ ಮಾಹಿತಿ ನೀಡುವುದರ ಜೊತೆಗೆ ವೈಜ್ಞಾನಿಕವಾಗಿ ಗೋಡಂಬಿ ಕೃಷಿ ಕೈಗೊಳ್ಳಲು ಸೂಕ್ತ ವಾತಾವರಣ ನಿರ್ಮಿಸಬೇಕು. ಅಲ್ಲದೇ ಪ್ರಾತ್ಯಕ್ಷಿಕೆ ಹಾಗೂ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಮಾಹಿತಿ ನೀಡಬೇಕು ಎಂದರು.
ಚೆಕ್ ವಿತರಣೆ: ಕೃಷಿ ಸಂಬಂಧಿತ ಇಲಾಖೆಗಳು, ಅರಣ್ಯ ಇಲಾಖೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗೋಡಂಬಿ ಕೃಷಿ ಕೈಗೊಳ್ಳಲು ಇರಬಹುದಾದ ಅವಕಾಶಗಳ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರಲ್ಲದೇ, ಸಹಕಾರ ಸಂಘಗಳಿಂದಲೂ ಗೋಡಂಬಿ ಬೆಳೆಯುವ ರೈತರಿಗೆ ಅಗತ್ಯ ಸಾಲ- ಸೌಲಭ್ಯ ದೊರೆಯಲಿದೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ರೈತರು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಎಂದರು.
ಈ ವೇಳೆ ಕಾಗೋಡು ತಿಮ್ಮಪ್ಪ ಅವರು ಜಿಲ್ಲೆಯ ಗೇರು ಬೆಳೆಗಾರರಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.