ಕೋಟಿ ಬೆಲೆಯ ಗೋಮಾಳ ಕಂಡವರ ಪಾಲು
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.18: ಶಿವಮೊಗ್ಗಕ್ಕೆ ದಿನದಿನಕ್ಕೂ ಹತ್ತಿರವಾಗುತ್ತಿರುವ ಆಯನೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ. ಈ ಬೆಳವಣಿಗೆಯ ನೆರಳಿನಲ್ಲೇ ಗೋಮಾಳವನ್ನೂ ಉಳ್ಳವರಿಗೆ ಹಂಚಿರುವ ಸಂಗತಿ ನಡೆದಿದೆ.
ಮೇವು, ಸ್ಮಶಾನ, ಸರ್ಕಾರಿ ಬಳಕೆಗೆ ಉಪಯೋಗವಾಗಬೇಕಾಗಿದ್ದ ಕೋಟಿ ಕೋಟಿ ರೂ. ಮೌಲ್ಯದ ಜಮೀನು ಕಂಡವರ ಪಾಲಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಹಾಸುಹೊದ್ದು ಮಲಗಿದ್ದಾರೆ. ಇದು ಊರವರ ಆಕ್ರೋಶಕ್ಕೂ ಕಾರಣವಾಗಿದೆ.
ಹಿನ್ನೆಲೆ: ಶಿವಮೊಗ್ಗದಿಂದ 18 ಕಿ.ಮೀ. ದೂರದ ಆಯನೂರಿಗೆ ಹೊಂದಿಕೊಂಡಂತೆ ದೊಡ್ಡದಾನವಂದಿ ಗ್ರಾಮವಿದೆ. ಇದು ಹಾರ್ನಳ್ಳಿ ಹೋಬಳಿಗೆ ಸೇರಲಿದ್ದು, ಗ್ರಾಮದಲ್ಲಿ 119 ಎಕರೆ ಗೋಮಾಳ ಜಾಗವಿದೆ.
ಇದು ಈ ಹಿಂದೆಯೇ ಸಾಕಷ್ಟು ಒತ್ತುವರಿಯಾಗಿದ್ದು, ಒಂದಷ್ಟು ಜಾಗದಲ್ಲಿ ಬಹಗ್ ಹುಕುಂ ಸಾಗುವಳಿ ನಡೆದುಕೊಂಡು ಬಂದಿದೆ. ಬಗರ್ಹುಕುಂ ಸಾಗುವಳಿ ಮಾಡಿಕೊಂಡು ಬಂದ ರೈತರು ಸಕ್ರಮೀಕರಣಕ್ಕೆ ಅರ್ಜಿ ಹಾಕಿ ಇಂದೋ-ನಾಳೆಯೋ ನಮ್ಮ ಹೆಸರಿಗೂ ಭೂಮಿ ಬರುತ್ತದೆ ಎಂದು ವರ್ಷಾನುವರ್ಷದಿಂದ ಕಾದುಕುಳಿತಿದ್ದಾರೆ.
ಆದರೆ ಭೂಮಿ ಬೆಲೆ ಹೆಚ್ಚಾಗುತ್ತಿದ್ದಂತೆ ಸರ್ವೆ ನಂಬರ್ 03ರ ಮೇಲೆ ಕೆಲವರ ಕಾಕದೃಷ್ಟಿ ಬಿತ್ತು, ತಮಗೂ ಭೂಮಿ ಕೊಡಿ ಎಂದು ಕೆಲವರು ಅರ್ಜಿ ಸಲ್ಲಿಸಿದರು. ಅರ್ಜಿ ಮಾನ್ಯ ಮಾಡಿದ ಶಿವಮೊಗ್ಗ ತಾಲೂಕು ಸಕ್ರಮೀಕರಣ ಸಮಿತಿ ಅರ್ಜಿದಾರರಿಗೆ ಜಾಗವನ್ನು ಅನುಭೋಗಿಸಲು ಅನುಮತಿ ನೀಡಿತು.
ತಾಳ ತಪ್ಪಿದ್ದೆಲ್ಲಿ?: 2010ರ ಅಕ್ಟೋಬರ್ 19 ಮತ್ತು ನವೆಂಬರ್ 16ರಂದು ತಾಲೂಕು ಸಕ್ರಮೀಕರಣ ಸಮಿತಿಯು ದೊಡ್ಡದಾನವಂದಿಯ ಸ.ನಂ.3ರಲ್ಲಿ 36 ಎಕರೆ 2 ಗುಂಟೆ ಜಾಗವನ್ನು 9 ಜನರಿಗೆ ವ್ಯವಸಾಯಕ್ಕೆ ಬಿಡುಗಡೆ ಮಾಡಲು ತೀರ್ಮಾನಿಸಿತು.
ಹಾಗೆಯೇ ಬಗರ್ಹುಕುಂ ಮಾಡುತ್ತಿರುವವರಿಗೆ ವರ್ಷ ಒಂದಕ್ಕೆ ಎಕರೆಗೆ ರು. 25 ರಂತೆ ಟಿಟಿ ದಂಡ, ಫೋಡಿ ಫೀಸ್ ರು. 59 ವಿಧಿಸಿದ್ದಲ್ಲದೇ, ಬಗರ್ಹುಕುಂ ಅವಧಿಗೆ ದುಪ್ಪಟ್ಟು ಕಂದಾಯ ವಸೂಲಿ ಮಾಡಲು ಆದೇಶಿಸಿತು.
ವಾಸ್ತವವಾಗಿ 9 ಜನರಿಗೆ ಹಂಚಲಾದ ಜಮೀನು ಇಂದಿಗೂ ಗೋಮಾಳವಾಗಿಯೇ ಉಳಿದಿದೆ.
ಕುರುಚಲು ಮರಗಳು ಬೆಳೆದ ಕಿರು ಅರಣ್ಯದಂತೆ ಭಾಸವಾಗುತ್ತದೆ. ಬಗರ್ ಹುಕುಂ ಮಾಡಿದ ಕಿಂಚಿತ್ ಲಕ್ಷಣವೂ ಇಲ್ಲವಾಗಿದೆ. ಈ ಜಾಗ ಊರಿಗೆ ಸೇರಿದ್ದು ಎಂಬ ಕಾರಣಕ್ಕೆ ಯಾರೂ ಇದನ್ನು ಬಳಸಿಕೊಳ್ಳುವುದಿಲ್ಲ ಎಂದು ಗ್ರಾಮಸ್ಥರು ನಂಬಿದ್ದರು. ಆದರೆ ಅಧಿಕಾರಿಗಳ ದುಡ್ಡಿನ ದುರಾಸೆ ಫಲವಾಗಿ ಇಂದು ಊರಿನ ಉಪಯೋಗಕ್ಕೆ ಬಳಕೆಯಾಗಬೇಕಾದ ಭೂಮಿ ಕಂಡವರ ಪಾಲಾಗಿದೆ.
ಈಗ ಏನಾಯಿತು..?: 2010ರಲ್ಲಿ ವ್ಯವಸಾಯಕ್ಕೆ ಈ ಭೂಮಿ ಬಿಡುಗಡೆಯಾದರೂ, ಇಲ್ಲಿಯವರೆಗೆ ಹಕ್ಕುಪಡೆದವರು ಭೂಮಿಗೆ ಕಾಲಿಟ್ಟಿರಲಿಲ್ಲ. ಕಳೆದ 15 ದಿನಗಳಿಂದೀಚೆಗೆ ಏಕಾಏಕಿ ಟ್ರ್ಯಾಕ್ಟರ್, ಜೆಸಿಬಿಯೊಂದಿಗೆ ಆಗಮಿಸಿ, ಕುರುಚಲು ಗಿಡ ತೆಗೆಸಿಹಾಕಿ ಭೂಮಿಯನ್ನು ಉಳುಮೆಗೆ ಸಿದ್ಧಮಾಡಲು ಮುಂದಾದರು. ಇದು ಊರಿನವರ ಆಕ್ರೋಶಕ್ಕೆ ಕಾರಣವಾಯಿತು.
ಊರಿಗೆ ಸೇರಿದ ಗೋಮಾಳ ಜಾಗದಲ್ಲಿ ಏಕಾಏಕಿ ಕೃಷಿ ಮಾಡಲು ಬಂದ ಅಪರಿಚಿತ ವ್ಯಕ್ತಿಯ ವಿರುದ್ಧ ತಿರುಗಿಬಿದ್ದರು. ಮಾತಿಗೆ ಮಾತು ಬೆಳೆಯಿತು, ಕೈಕೈ ಮಿಲಾವಣೆ ಹಂತಕ್ಕೂ ಹೋಯಿತು. ಒಂದು ಹಂತದಲ್ಲಿ ಊರಿನ ಜಾಗ ಉಳಿಸಿಕೊಳ್ಳಲು ಗ್ರಾಮಸ್ಥರು ಪೆಟ್ಟನ್ನೂ ತಿನ್ನಬೇಕಾಗಿ ಬಂತು.
ಊರವರ ಆಕ್ರೋಶ ಹೆಚ್ಚಾದಂತೆ ಗೋಮಾಳದ ಮೇಲೆ ಪ್ರಭುತ್ವ ಸಾಧಿಸಲು ಬಂದವರು ರಾತ್ರೋರಾತ್ರಿ ಭೂಮಿಯನ್ನು ಹಸನು ಮಾಡಲು ಹೊರಟರು. ಇದಕ್ಕೂ ಪ್ರತಿರೋಧ ಎದುರಾಗಿದೆ.
ಭೂಮಿ ಉಳಿಸಲು ಹೋರಾಟ: ಇಡೀ ಊರಿಗೆ ಸೇರಿದ ಜಾಗ ಉಳಿಸಿಕೊಳ್ಳುವ ಛಲದೊಂದಿಗೆ ಗ್ರಾಮಸ್ಥರು ಹೋರಾಟಕ್ಕಿಳಿದು ಪೊಲೀಸ್ ಠಾಣೆ ಮೆಟ್ಟಿಲೇರಿದರು. ಆದರೆ ತಾಲೂಕು ಸಕ್ರಮೀಕರಣ ಸಮಿತಿಯಿಂದ ಅಧಿಕೃತ ಆದೇಶ ಪಡೆದುಕೊಂಡ ವ್ಯಕ್ತಿಗಳು ಇದು ನಮ್ಮದೇ ಜಾಗ ಎಂದು ದಾಖಲೆ ತೋರಿಸುವಾಗ ಪೊಲೀಸರು ಕೈಚೆಲ್ಲಿ ಕುಳಿತರು. ದೂರು ದಾಖಲಿಸಿಕೊಳ್ಳಲೂ ನಿರಾಕರಿಸಿದರು.
ಇದರಿಂದ ಬೇಸತ್ತ ಗ್ರಾಮಸ್ಥರು ಇದೀಗ ಹೋರಾಟಕ್ಕಿಳಿದ್ದಾರೆ. ಕಂಡಕಂಡ ಅಧಿಕಾರಿಗಳು, ಪ್ರಭಾವಿಗಳಿಗೆ ಊರಿನ ಜಾಗ ಉಳಿಸಿಕೊಡುವಂತೆ ದಂಬಾಲು ಬೀಳುತ್ತಿದ್ದಾರೆ. ಆದರೆ ಸಕ್ರಮೀಕರಣ ಸಮಿತಿ ಮಾಡಿದ ತಪ್ಪಿನಿಂದ ಊರಿನವರು ಬೆವರು ಹರಿಸಬೇಕಾಗಿ ಬಂದಿದೆ.
ನಿಮಯ ಉಲ್ಲಂಘನೆ: ಗ್ರಾಮಸ್ಥರ ಪ್ರಕಾರ ಅರ್ಹರಲ್ಲದವರಿಗೆ ಗೋಮಾಳ ಹಂಚಲಾಗಿದೆ. ಬಗರ್ಹುಕುಂ ಸಾಗುವಳಿದಾರರಲ್ಲದ, ಪರ ಊರಿನವರಿಗೆ ಭೂಮಿ ನೀಡಲಾಗಿದೆ. ಸಂಪೂರ್ಣ ನಿಯಮ ಉಲ್ಲಂಘಿಸಲಾಗಿದೆ ಎಂಬುದು ಗಂಭೀರ ಆರೋಪ.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

