ಸಮಸ್ಯೆ ಸರೆಮಾಲೆ ಬಿಚ್ಚಿಟ್ಟ ಸಾರ್ವಜನಿಕರು
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.23
ನಗರದ ಡಿಎಆರ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭಾನುವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಂವಾದದಲ್ಲಿ ಸಮಸ್ಯೆಗಳ ಸರೆಮಾಲೆಯೇ ಪೊಲೀಸ್ ಅಧಿಕಾರಿಗಳ ಮುಂದೆ ಬಿಚ್ಚಿಡಲ್ಪಟ್ಟಿತು.
ನಗರದ ಪ್ರಮುಖ ರಸ್ತೆಗಳಲ್ಲಿರುವ ಟ್ರಾಫಿಕ್ ಸಮಸ್ಯೆ, ಖಾಸಗಿ ಬಸ್ಗಳ ವೇಗದ ಚಾಲನೆ, ಸಿಗ್ನಲ್ ಬಳಿಯೇ ಟ್ರಾಫಿಕ್ ಪೇದೆಗಳು ಮೊಬೈಲ್ ಚಾಟಿಂಗ್, ಟ್ರಾಫಿಕ್ ಪೊಲೀಸರು ನೋ ಪಾರ್ಕಿಂಗ್ ಬೋರ್ಡ್ ಇಲ್ಲದಿರುವ ಕಡೆ ನಿಲ್ಲಿಸುವ ವಾಹನಗಳನ್ನೂ ಟೈಗರ್ ಮೂಲಕ ಎತ್ತುಕೊಂಡು ಹೋಗ್ತಾರೆ ಎಂಬೆಲ್ಲ ಸಮಸ್ಯೆಗಳನ್ನು ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಎದುರು ಸಾರ್ವಜನಿಕರು ಪ್ರಸ್ತಾಪಿಸಿದರು.
ಅನಧಿಕೃತ ಮದ್ಯದ ಅಂಗಡಿ: ನವಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಎಂ.ಕೆ.ಕೆ ರಸ್ತೆಯ ಮಂಜುನಾಥ ಚಿತ್ರಮಂದಿರದ ಬಳಿ ಮೂರು ಶಾಲೆಗಳಿವೆ. ಆದರೆ, ಇಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ರಾಗಿಗುಡ್ಡದಲ್ಲಿ 10-15 ಕಡೆ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ವೇಶ್ಯಾವಾಟಿಕೆಯ ಜೊತೆಗೆ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಸಂಭವಿಸುವ ಸಾಧ್ಯತೆ ಇದೆ ಎಂದರು.
ನಗರದಲ್ಲಿ ಅನೇಕ ಆಟೋ ಚಾಲಕರ ಬಳಿ ಚಾಲನಾ ಪರವಾನಗಿಯೇ ಇಲ್ಲ. ಹೀಗಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದರಿಂದ ಟ್ರಾಫಿಕ್ ಪೊಲೀಸ್ ಅಧಿಕಾರಗಳು ಸರಿಯಾದ ದಾಖಲೆಗಳನ್ನು ಪಡೆದು ಅಗತ್ಯ ಇರುವವರಿಗೆ ಚಾಲನಾ ಪರವಾನಿಗೆ ನೀಡಬೇಕು ಎಂದು ಆಗ್ರಹಿಸಿದರು.
ಬಸ್ ನಿಲುಗಡೆ ಸಮಸ್ಯೆ: ವಕೀಲ ಎ. ಸೋಮಶೇಖರ್ ಮಾತನಾಡಿ, ನಗರದ ಖಾಸಗಿ ಬಸ್ಗಳು ಬಸ್ ನಿಲ್ದಾಣದಿಂದ ದೂರದಲ್ಲಿ ನಿಲ್ಲಿಸುತ್ತಿವೆ. ಅಲ್ಲದೇ, ಎಲ್ಲೆಂದರಲ್ಲಿ ಬಸ್ಗಳು ನಿಲ್ಲುವುದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತದೆ. ಇದರಿಂದ ಇತರೇ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ರವೀಂದ್ರ ನಗರದ ರೈಲ್ವೆ ಟ್ರಾಕ್ ಸಮೀಪ ನಿರ್ಮಿಸಿರುವ ವಾಕಿಂಗ್ ಪಾಥ್ನಲ್ಲಿ ಸಂಜೆ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾಗರಿಕ ಸಮಿತಿಯ ವಡಿವೇಲು ಮಾತನಾಡಿ, ಹೊನ್ನಾಳಿ ರಸ್ತೆಯ ಕೆಇಬಿ ವೃತ್ತದಿಂದ ಕೆನರಾ ಬ್ಯಾಂಕ್ವರೆಗೆ ಬೀದಿ ದೀಪಗಳು ಸಮರ್ಪಕವಾಗಿಲ್ಲ.
ಇಲ್ಲಿ ಲಾರಿಗಳ ನಿಲುಗಡೆಯಾಗುವುದರಿಂದ ರಾತ್ರಿ ವೇಳೆ ವಾಹನ ಸಂಚಾರ ಕಷ್ಟವಾಗಿದೆ. ಇನ್ನು ಪ್ಲೈ ಓವರ್ನಲ್ಲೂ ಬೀದಿ ದೀಪದ ವ್ಯವಸ್ಥೆ ಸರಿಯಿಲ್ಲ. ಪಾದಚಾರಿಗಳಿಗೆ ನಡೆದಾಡಲೂ ಜಾಗವಿಲ್ಲದಂತಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ಅಹಲವಾಲುಗಳನ್ನು ಸ್ವೀಕರಿಸಿದ ಎಸ್ಪಿ ಕೌಶಲೇಂದ್ರ ಕುಮಾರ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

