ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರ ಕೋರಿ ಕೇಂದ್ರಕ್ಕೆ ನಿಯೋಗ
ಶಿವಮೊಗ್ಗ: ಅಡಕೆ ಬೆಳೆಗಾರರ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕೊಂಡಯ್ಯಲು ನಿರ್ಧರಿಸಿದ್ದು, ರಾಜ್ಯ ಸಚಿವರು ಹಾಗೂ ಸ್ಥಳೀಯ ಅಡಕೆ ಬೆಳೆಗಾರರನ್ನೊಳಗೊಂಡ ತಂಡ ಕೇಂದ್ರದೊಂದಿಗೆ ಚರ್ಚೆ ನಡೆಸಲಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭರವಸೆ ನೀಡಿದ್ದಾರೆ.
ಜಿಲ್ಲಾ ಅಡಕೆ ಬೆಳೆಗಾರರ ಸಂಘ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಡಕೆ ಬೆಳೆಗಾರರ ಸಮಸ್ಯೆಗಳು ಹಾಗೂ ಪರಿಹಾರ ಮತ್ತು ಗೋರಕ್ ಸಿಂಗ್ ವರದಿ ಕುರಿತ ವಿಚಾರ ಸಂಕಿರಣದಲ್ಲಿ ಅವರು, ಗೋರಕ್ ಸಿಂಗ್ ಆಯೋಗದ ಪ್ರಕಾರ ಸಾಲಮನ್ನಾ, ಹಳದಿ ರೋಗದ ಬಗ್ಗೆ ದೆಹಲಿಗೆ ನಿಯೋಗಮೊಂದು ಹೋಗಿ ಕೇಂದ್ರ ಕೃಷಿ ಸಚಿವ, ಆರ್ಥಿಕ ಸಚಿವ, ಪ್ರಧಾನ ಮಂತ್ರಿ ಜೊತೆ ಮಾತುಕತೆ ನಡೆಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿತ್ವದಲ್ಲಿರುವ ಏಲಕ್ಕಿ, ಕಾಫಿ ಬೋರ್ಡ್ನಂತೆ ಅಡಕೆ ಬೋರ್ಡ್ ಕೂಡ ಸ್ಥಾಪನೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಅಡಕೆಗೆ ತಗುಲಿರುವ ಹಲವಾರು ರೋಗಗಳಿಂದ ಬೆಳೆಗಾರರು ಬಹಳಷ್ಟು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿಯೂ ಸರ್ಕಾರ ಎಚ್ಚೆತ್ತು ಕೆಲಸ ಮಾಡಲಿದೆ ಎಂದರು.
ಅಡಕೆಯಿಂದಲೇ ಕ್ಯಾನ್ಸರ್
ವಿಶ್ವ ಆರೋಗ್ಯ ಸಂಸ್ಥೆಯಿಂದ 2008ರಲ್ಲಿ ಬಂದ ವರದಿಯಲ್ಲಿ ಅಡಕೆಯಿಂದಲೇ ಕ್ಯಾನ್ಸರ್ ಬರುತ್ತದೆ ಎಂಬ ಅಂಶವಿದ್ದು, ಇದು ಆತಂಕಕಾರಿ ಸಂಗತಿ ಎಂದು ಬೆಂಗಳೂರು ಕೃಷಿ ವಿವಿಯ ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಕಮ್ಮರಡಿ ತಿಳಿಸಿದರು.
ಜಿಲ್ಲಾ ಅಡಕೆ ಬೆಳೆಗಾರರ ಸಂಘ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಡಕೆ ಬೆಳೆಗಾರರ ಸಮಸ್ಯೆಗಳು ಹಾಗೂ ಪರಿಹಾರ ಮತ್ತು ಗೋರಖ್ ಸಿಂಗ್ ವರದಿ ಕುರಿತ ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿದ ಅವರು, ಗುಟ್ಕಾ, ತಂಬಾಕುಗಳಿಂದ ಕ್ಯಾನ್ಸರ್ ರೋಗ ಬರುವುದಿಲ್ಲ. ಅಡಕೆಯಿಂದ ಮಾತ್ರ ಎಂದು ವರದಿ ತಿಳಿಸಿದೆ. ಅದು 450 ಪುಟಗಳ ವರದಿಯಾಗಿದೆ. ಗುಟ್ಕಾದೊಂದಿಗೆ ಅದಕ್ಕೆ ಬಳಸುವ ಅಡಕೆಯನ್ನು ಕೂಡ ನಿಷೇಧ ಮಾಡಬೇಕು ಎಂದು ವರದಿ ನೀಡಿದೆ ಎಂದರು.
2 ಸಾವಿರ ಪುಟಗಳ ವರದಿ: ಈ ರೀತಿಯ 2 ಸಾವಿರ ಪುಟಗಳ ವರದಿ ಸುಪ್ರೀಂಕೋರ್ಟ್ ಮುಂದಿದ್ದು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವರದಿಯ ವಿರುದ್ಧವಾದ ವರದಿ ಸಲ್ಲಿಸಿದೆ ಎಂದ ಅವರು, ಗೋರಖ್ ಸಿಂಗ್ ವರದಿ ಅನುಷ್ಠಾನ ಕ್ಯಾನ್ಸರ್ ರೋಗಕ್ಕೆ ಔಷಧಿ ನೀಡಿದಂತೆ. ಆದರೆ, ಇದು ಅನುಷ್ಠಾನಕ್ಕೆ ಬರಲು ಸಾಕಷ್ಟು ಪ್ರಯತ್ನಗಳು ಬೇಕು ಎಂದರು.
ಗೋರಖ್ ಸಿಂಗ್ ವರದಿಯಲ್ಲಿ ಎರಡು ಪ್ರಮುಖ ಅಂಶಗಳನ್ನು ಪರಿಗಣಿಸಬೇಕು. ಗುಟ್ಕಾದಿಂದ ಅಡಕೆಯನ್ನು ಹೊರತು ಪಡಿಸಿ ಪರ್ಯಾಯವಾಗಿ ಬಳಸಿಕೊಳ್ಳಬೇಕು ಎಂದ ಅವರು, ಗುಟ್ಕಾದಿಂದ ಅಡಕೆಗೆ ಕೆಟ್ಟ ಹೆಸರು ಬಂದಿದೆ. ಈ ಹಿನ್ನೆಲೆಯಲ್ಲಿ ಅಡಕೆ ಒಂದು ಸುಸ್ಥಿರ ಉದ್ದಿಮೆಯಾಗಿ ಬೆಳೆಯಬೇಕು ಎಂದರು.
ರಾಜ್ಯ ಸರ್ಕಾರ ಸಹಕರಿಸಲಿ: ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ನ್ಯಾಯಾಲಯದಲ್ಲಿ ಅಡಕೆ ಬೆಳೆಯನ್ನು ಮುಗಿಸಲು ಲಾಭಿ ನಡೆಸಲಾಗುತ್ತಿದೆ ಎಂದೆನಿಸಿದೆ. ಇದರ ಹಿಂದೆ ಸಿಗರೇಟ್ ಕಂಪನಿಗಳ ಕೈವಾಡ ಕೂಡ ಇದೆ. ಅದಕ್ಕೆ ವ್ಯತಿರಿಕ್ತವಾಗಿ ನಾವೇನು ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಕರಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

