ಕೃಷಿ ಸಂಶೋಧನೆ ಅಗತ್ಯ: ಪ್ರೊ. ರೇಣುಕಾ ಪ್ರಸಾದ್
ಕನ್ನಡ ಪ್ರಭ ವಾರ್ತೆ ಶಿವಮೊಗ್ಗ, ಮಾ.2
ಕೃಷಿ ಸಂಬಂಧಿತ ಕಾರ್ಯಗಳಲ್ಲಿ ಸಂಶೋಧನೆ ಅಗತ್ಯ. ಇದರಿಂದ ಹೊಸ- ಹೊಸ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಬೀದರ್ನ ಪಶು, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ. ಸಿ. ರೇಣುಕಾಪ್ರಸಾದ್ ಹೇಳಿದರು.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿದ್ಯಾಲಯ, ಬೀದರ, ಪಶು ವೈದ್ಯಕೀಯ ಮಹಾವಿದ್ಯಾಲಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಜಲಸಂವರ್ಧನಾ ಇಲಾಖೆ ಹಾಗೂ ಸ್ಥಳೀಯ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ವಿನೋಬ ನಗರದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನುವಾರು, ಕುಕ್ಕುಟ, ಮತ್ಸ್ಯ ಮತ್ತು ಕೃಷಿಮೇಳದಲ್ಲಿ ಅವರು ಮಾತನಾಡಿದರು.
ಸುಧಾರಣೆ ಅಗತ್ಯ: ಪ್ರಸ್ತುತ ಕೃಷಿ ಚಟುವಟಿಕೆಗಳು ಕಡಿಮೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊಸ ರೀತಿಯ ತಂತ್ರಜ್ಞಾನ ಹಾಗೂ ಸುಧಾರಣೆ ಅಗತ್ಯ. ಆದ್ದರಿಂದ ಕೃಷಿಯಲ್ಲಿ ಸಂಶೋಧನೆ ಅಗತ್ಯವಿದೆ ಎಂದ ಅವರು, ಸ್ಥಳೀಯ ರೈತರು ಕೂಡ ಬದಲಾಗುತ್ತಿರುವ ವಾತಾವರಣ ಹಾಗೂ ಹವಾಮಾನಕ್ಕೆ ತಕ್ಕಂತೆ ಕೃಷಿ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಿದೆ. ರೈತರು ತಮಗಿರುವ ಕಡಿಮೆ ಭೂಮಿ ಹಾಗೂ ನೀರಿನ ಸಂಪನ್ಮೂಲದಲ್ಲಿ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ವಿಶ್ವವಿದ್ಯಾಲಯವು ಸಂಶೋಧನೆ ನಡೆಸುತ್ತಿದೆ ಎಂದರು.
ಅಸಮತೋಲನ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಲಿನ ಉತ್ಪನ್ನದಲ್ಲಿ ಅಸಮತೋಲನ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಅಸಮಾನತೆಯನ್ನು ಸರಿದೂಗಿಸಲು ವಿಶ್ವವಿದ್ಯಾಲಯವು ರೈತಸ್ನೇಹಿ ವಿಶೇಷ ಕಾರ್ಯಕ್ರಮ ರೂಪಿಸಲಿದೆ.
ಕಾರವಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ನಿರುತ್ಸಾಹ ತೋರುತ್ತಿದ್ದಾರೆ. ಅದಕ್ಕಾಗಿ ಈ ಪ್ರದೇಶದಲ್ಲಿ ಹೈನುಗಾರಿಕೆ ಹಿಂದುಳಿಯಲು ಇರುವ ಕಾರಣಗಳ ಕುರಿತು ಸಂಶೋಧನೆ ಕೈಗೊಂಡು ವರದಿ ನೀಡುವಂತೆ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಅಧಿಕಾರಿಗಳಿಗೆ ತಿಳಿಸಿದರು.
ಮಾರುಕಟ್ಟೆ ಕಲ್ಪಿಸಿಕೊಡಿ: ವಿಶ್ವವಿದ್ಯಾಲಯವು ರೈತರ ಶ್ರೇಯೋಭಿವೃದ್ಧಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಇದರೊಂದಿಗೆ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡುವ ಅಗತ್ಯವಿದೆ ಎಂದ ಅವರು, ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪಶು, ಹೈನುಗಾರಿಕೆ ಮತ್ತು ಮೀನುಗಾರಿಕೆ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಜಾನುವಾರು ತಳಿಗಳಿಗೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ವಿದ್ಯಾಲಯದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಲಯದ ಡೀನ್ ಡಾ. ಎಂ. ದೇವರಾಜ್, ವಿಸ್ತರಣಾ ನಿರ್ದೇಶಕ ಡಾ.ಕೆ.ಎನ್. ಪ್ರಭುದೇವ್, ಉಪನಿರ್ದೇಶಕ ಡಾ.ಆರ್.ಆರ್. ರವೀಂದ್ರ, ವ್ಯವಸ್ಥಾಪಕ ಮಂಡಳಿ ಸದಸ್ಯ ಡಾ.ಡಿ.ಆರ್. ನಾಗೇಶ್, ಮುಕುಂದ ವರ್ಮ ಮತ್ತು ಡಾ. ವಿಶಾಲಾಕ್ಷಿ ವಿ. ರೆಡ್ಡಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

