ಮತದಾರರು ಆಯ್ಕೆ ಮಾಡಿದ್ದು ಆಸ್ತಿ ಮಾಡಲಿಕ್ಕಲ್ಲ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.4
ನಿಮ್ಮ ಅಮೂಲ್ಯವಾದ ಮತದಿಂದ ಆಯ್ಕೆಯಾದ ಶಾಸಕ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನಿಮ್ಮ ಕಷ್ಟ- ಸುಖವನ್ನು ಕೇಳಿದ್ದಾರೆಯೇ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತದಾರರನ್ನು ಪ್ರಶ್ನಿಸಿದರು.
ಕರ್ನಾಟಕ ಜನತಾ ಪಕ್ಷ ಸೋಮವಾರ ಸಂಜೆ ನಗರದ ಮಿಳಘಟ್ಟ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು, ಇಲ್ಲಿನ ಶಾಸಕರನ್ನು ಜನರು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸುವುದು ಆಸ್ತಿಪಾಸ್ತಿ ಮಾಡಿಕೊಂಡು ಅಪ್ಪಮಕ್ಕಳು ಸುಖವಾಗಿರಲಿ ಅಂತಾ ಅಲ್ಲ.
ಜನಪ್ರತಿನಿಧಿಗಳು, ಬಡಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು. ಆದರೆ, ನೀವು ಆಯ್ಕೆ ಮಾಡಿ ಕಳುಹಿಸಿದ ಇಲ್ಲಿನ ಶಾಸಕ ಮಾಡಿದ್ದೇನು ಯಾವ ಕಾರಣಕ್ಕಾಗಿ ನೀವು ಈಶ್ವರಪ್ಪರನ್ನು ಆಯ್ಕೆ ಮಾಡಿದ್ದಿರಾ ಎಂದು ಈಶ್ವರಪ್ಪ ವಿರುದ್ಧ ಮತ್ತೊಮ್ಮೆ ಕಿಡಿಕಾರಿದರು.
ನೀವು ಮತ ಕೊಟ್ಟು ಶಾಸಕರನ್ನಾಗಿ ಮಾಡಿದ ಶಾಸಕರು ನಿಮ್ಮ ಬಡಾವಣೆಯಲ್ಲಿ ಓಡಾಡಿದ್ದಾರಾ ಮನೆಗಳಿಲ್ಲದವರಿಗೆ ಮನೆ ನೀಡಿ ಖಾತೆ ಮಾಡಿಸಿದ್ದರಾ, ರಸ್ತೆ ಮಾಡಿಸಿಕೊಟ್ಟಿದ್ದಾರಾ ಎಂದ ಅವರು, ನಿಮ್ಮ ಪಾಲಿಗೆ ಅವರು ಬದುಕಿದ್ದಾರಾ, ಸತ್ತಿದ್ದಾರಾ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಬೇಕು ಎಂದರು.
ತಮ್ಮ ಅಭಿವೃದ್ಧಿ ಮಾಡಿದರು: ರಾಜ್ಯದ ಉಪಮುಖ್ಯಮಂತ್ರಿಯಾಗಿ ಈಶ್ವರಪ್ಪ ಮಾಡಿದ್ದೇನು ಅಧಿಕಾರದಲ್ಲಿ ಯಾರೇ ಇರಲಿ, ತಮ್ಮನ್ನು ಆಯ್ಕೆ ಮಾಡಿದ್ದು ಜನರು ಎಂಬುದನ್ನು ಮರೆಯಬಾರದು.
ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ಹಣವಿದೆ. ಆದರೆ, ಬಡವರ ಶ್ರೇಯೋಭಿವೃದ್ಧಿಗಾಗಿ ಬಳಸುವ ಬದಲು ತಮ್ಮ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪಾರ್ಕ್ ಅಭಿವೃದ್ಧಿ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್ ಅಭಿವೃದ್ಧಿಗೆ ಸರ್ಕಾರದಿಂದ 10 ಕೋಟಿ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಿದ್ದೆ ಎಂದು ಹೇಳಿದ ಅವರು, ನನಗೆ ಸಿಎಂ ಸ್ಥಾನ ಹೋಯಿತು ಎಂದು, ಆಹ್ವಾನ ಪತ್ರಿಕೆಯಲ್ಲಿ ಇದ್ದಂತಹ ನನ್ನ ಹೆಸರಿದ್ದರೂ ನನ್ನಿಂದ ಉದ್ಘಾಟನೆ ಮಾಡಿಸಬಾರದು ಎಂದು ತಮ್ಮನ್ನು ಆಹ್ವಾನಿಸದೆ ಈಶ್ವರಪ್ಪ ಅವರೇ ಪಾರ್ಕ್ ಉದ್ಘಾಟಿಸಿದರು.
ನಗರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಯಲು ಅವರು ಬಿಡುತ್ತಿಲ್ಲ. ಆದ್ದರಿಂದ ಅವರ ಕೈಯಿಂದ ನಗರಸಭೆಯನ್ನು ಬಿಡಿಸಿ, ನಗರದ ಎಲ್ಲಾ ವಾರ್ಡ್ಗಳಲ್ಲಿಯು ಕೆಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಸೇರಲ್ಲ: ನಾನು ಅ ಪಕ್ಷದ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ, ನನ್ನನ್ನು ಜೈಲಿಗೆ ಕಳುಹಿಸಲು ಮೂಲ ಕಾರಣ ಹಾಗೂ ಅವಮಾನ ಮಾಡಿದ ಪಕ್ಷಕ್ಕೆ ನನ್ನ ಜನ್ಮ ಇರುವವರೆಗೆ ಮರಳಿ ಹೋಗುವುದಿಲ್ಲ ಎಂದ ಅವರು, ನಮ್ಮ ಸರ್ಕಾರ (ಕೆಜೆಪಿ) ಅಧಿಕಾರಕ್ಕೆ ಬಂದರೆ, ವೃದ್ಧಾಪ್ಯ, ವಿಧವಾ ವೇತನವನ್ನು 1 ಸಾವಿರ ಏರಿಸುವುದು ಹಾಗೂ ಸಮಾಜದಲ್ಲಿ ಪ್ರತಿಯೊಬ್ಬರು ಗೌರವವಾಗಿ ಬದುಕಲು ಅವಕಾಶ ಕಲ್ಪಸಲಾಗುವುದು ಭರವಸೆ ನೀಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಎಚ್. ಶ್ರೀನಿವಾಸ್, ಕೆಜೆಪಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಮೈಕೆಲ್ ಫರ್ನಾಂಡೀಸ್ ಹಾಗೂ ವಿವಿಧ ವಾರ್ಡ್ಗಳ ಅಭ್ಯರ್ಥಿಗಳು ಇದ್ದರು.
ಆಕ್ರೋಶ
ಚುನಾವಣಾ ಆಯೋಗಕ್ಕೆ ಏನಾಗಿದೆ. ಮೈಕ್ ಬಳಸೋಕೆ ಅವಕಾಶ ನೀಡದಿದ್ರೆ ಪ್ರಚಾರ ಮಾಡೋದದಾರೂ ಹೇಗೆ. ನಮ್ಮ ಕಾರ್ಯಕ್ರಮ ಇದೆ, ನಮ್ಮ ಅಭ್ಯರ್ಥಿಗಳು ಇವರೇ ಎಂದು ತಿಳಿಸುವ ಬಗೆಯಾದರೂ ಯಾವುದು ನಾವು ಯಾವ ದೇಶದಲ್ಲಿದ್ದೇವೆ ಎಂಬುದೇ ಗೊತ್ತಾಗುತ್ತಿಲ್ಲ.
ಒಂದೊಂದು ಊರಲ್ಲಿ ಒಂದೊಂದು ಕಾನೂನು ಜಾರಿಯಾಗುತ್ತಿದೆ. ಅಧಿಕಾರಿಗಳ ಕಪಿಮುಷ್ಠಿಗೆ ಸಿಲುಕಿ ಕಾನೂನುಗಳು ಬದಲಾಗುತ್ತಿವೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

