ಕಿಚ್ಚೆಬ್ಬಿಸಿದ ಕ್ರಿಕೆಟಿಗರು, ಹುಚ್ಚೆದ್ದ ಅಭಿಮಾನಿಗಳು
ಶಿವಮೊಗ್ಗ: ಹೆಚ್ಚಾದ ಬಿಸಿಲಿನ ಝಳ. ಇನ್ನೊಂದು ಕಡೆ ಪರೀಕ್ಷಾ ಜ್ವರ. ಕ್ರಿಕೆಟ್ ಪ್ರೇಮಿಗಳಿಗೆ ಇದ್ಯಾವುದೂ ಲೆಕ್ಕಕ್ಕೇ ಇಲ್ಲ. ಏಕೆಂದರೆ, ಶಿವಮೊಗ್ಗ ಹಾಗೂ ಭದ್ರಾವತಿಯಲ್ಲೀಗ ಕ್ರಿಕೆಟ್ ಫೀವರ್ ಜೋರಾಗಿದೆ.
ಈ ಫೀವರ್ಗೆ ಕಾರಣವಾಗಿರೋದು ಸೈಯದ್ ಮುಶ್ತಾಕ್ ಆಲಿ ಟ್ರೋಫಿ- ದಕ್ಷಿಣ ವಲಯ ಅಂತರರಾಜ್ಯ ಟಿ-20 ಪಂದ್ಯಾವಳಿ. ಶಿವಮೊಗ್ಗದ ಜೆಎನ್ಎನ್ ಕಾಲೇಜು ಮೈದಾನ, ಪೆಸೆಟ್ನ ಅಬ್ಲುದ್ ಕಲಾಂ ಕ್ರೀಡಾಂಗಣ, ಭದ್ರಾವತಿಯ ವಿಐಎಸ್ಎಲ್ ಅಂಗಣದಲ್ಲಿ ಭಾನುವಾರ ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ದೊರೆಯಿತು.
ಕಳೆದ ವರ್ಷ ರಣಜಿ ಪಂದ್ಯವನ್ನು ಕಣ್ತುಂಬಿಕೊಂಡಿದ್ದ ಸ್ಥಳೀಯ ಕ್ರಿಕೆಟ್ ಪ್ರೇಮಿಗಳಿಗೆ ಈ ಪಂದ್ಯಾವಳಿ ಜಾತ್ರೆ ಎಂದರೂ ತಪ್ಪಿಲ್ಲ, ಈ ಜಾತ್ರೆಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ರಾಜ್ಯ ತಂಡದ ವಿನಯ್, ಮಿಥುನ್, ಮನೀಷ್ ಪಾಂಡೆ, ತಮಿಳುನಾಡು ತಂಡದ ಬದ್ರಿನಾಥ್, ಬಾಲಾಜಿ ಮತ್ತಿತರರೇ ದೇವರು. ಇವರ ಆಟ ಕಾಣಲು, ಅವರ ಹಸ್ತಾಕ್ಷರ ಪಡೆಯಲು ಕ್ರಿಕೆಟ್ ಅಭಿಮಾನಿಗಳಿಗೆ ಇನ್ನಿಲ್ಲದ ಸಡಗರ. ಜಾತ್ರೆಯಲ್ಲಿ ಬೆಂಡುಬತಾಸ್ ತಿಂದಷ್ಟೇ ಸಂಭ್ರಮ.
ಮೊದಲ ದಿನ ಕಳೆಗಟ್ಟಿದವರು: ಮೊದಲ ದಿನ ಜೆಎನ್ಎನ್ ಅಂಗಣದಲ್ಲಿ ಕೇರಳ- ಹೈದ್ರಾಬಾದ್, ಪೆಸೆಟ್ ಅಂಗಣದಲ್ಲಿ ಗೋವಾ- ಕರ್ನಾಟಕ, ಭದ್ರಾವತಿ ವಿಐಎಸ್ಎಲ್ ಅಂಗಣದಲ್ಲಿ ಆಂಧ್ರ- ತಮಿಳುನಾಡು ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪೈಕಿ ಗೋವಾ-ಕರ್ನಾಟಕ, ಆಂಧ್ರ-ತಮಿಳುನಾಡು ನಡುವಿನ ಪಂದ್ಯ ಒನ್ಸೈಡೆಡ್ ಮ್ಯಾಚ್ ಎನಿಸಿದರೂ ಮನರಂಜನೆಗೇನು ಕೊರತೆ ಇರಲಿಲ್ಲ.
ಪೆಸೆಟ್ ಅಂಗಣದಲ್ಲಿ ಮಾಯಾಂಕ್ ಅಗರ್ವಾಲ್ ಹಾಗೂ ಮನೀಷ್ ಪಾಂಡೆ ಮಿಂಚಿದರು. ಎರಡು ಜೀವದಾನ ಸಹಿತ ಮನೀಷ್ ಮೂರು ಸಿಕ್ಸರ್ ಹೊಡೆದರೆ, ಮಾಯಾಂಕ್ ಎರಡು ಸಿಕ್ಸರ್ ಬಾರಿಸಿದರು. ಇವರಿಬ್ಬರ ತಾಳಮೇಳ ಹೊಂದಿದ ಆಟವನ್ನು ಬೆರಗುಗಣ್ಣಿನಿಂದ ವೀಕ್ಷಿಸಿದ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಖುಷಿಪಟ್ಟರು. ಇವರಿಬ್ಬರ ಬ್ಯಾಂಟಿಂಗ್ ಅಲ್ಲದೇ ಕರ್ನಾಟಕ ತಂಡದ ಕರಾರುವಕ್ ಫೀಲ್ಡಿಂಗ್, ಬೌಲಿಂಗ್ ಕೂಡ ಪ್ರೇಕ್ಷಕರ ಗಮನ ಸೆಳೆಯಿತು.
ಇನ್ನು ಜೆಎನ್ಎನ್ ಅಂಗಣದಲ್ಲಿ ಕೇರಳ- ಹೈದ್ರಾಬಾದ್ ತಂಡಗಳ ನಡುವಿನ ಪಂದ್ಯವಾದರೂ ಸಾಕಷ್ಟು ಮಂದಿ ಪಂದ್ಯ ವೀಕ್ಷಿಸಿದರು. ಈ ಪಂದ್ಯದಲ್ಲಿ ಹೈದ್ರಾಬಾದ್ ತಂಡದ ವಿಹಾರಿ, ಟಿ.ಎಲ್.ಸುಮನ್, ಕೇರಳದ ಸುರೇಂದ್ರನ್, ಸಚಿನ್ ಬೇಬಿ, ಸ್ಯಾಮ್ಸನ್ ಉತ್ತಮ ರೀತಿಯಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದರು.
ಭದ್ರಾವತಿಯಲ್ಲಿ ನಡೆದ ಪಂದ್ಯದಲ್ಲಿ ಲಕ್ಷ್ಮೀಪತಿ ಬಾಲಾಜಿ ಬೌಲಿಂಗ್ ಗಮನ ಸೆಳೆಯಿತು. ಅವರು ಕೇವಲ ಐದು ರನ್ ನೀಡಿ ನಾಲ್ಕು ವಿಕೆಟ್ ಕಿತ್ತು ತಮ್ಮ ಬೌಲಿಂಗ್ ಮೊನಚು ಮಾಸಿಲ್ಲ ಎಂದು ತೋರಿಸಿಕೊಟ್ಟರು. ಅದೇ ರೀತಿ ಬದರೀನಾಥ್ ಬ್ಯಾಟಿಂಗ್ ಗಮನ ಸೆಳೆಯಿತು. ಈ ಮೂರು ಪಂದ್ಯ ವೀಕ್ಷಿಸಲು ಸಾಕಷ್ಟು ಜನ ಸೇರಿದ್ದು ಆಯೋಜಕರಿಗೂ ಖುಷಿಕೊಟ್ಟಿತು. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಪ್ರಮುಖರು ಪ್ರೇಕ್ಷಕರ ಒಲವನ್ನು ಶ್ಲಾಘಿಸಿದರು.
ಹಸ್ತಾಕ್ಷರಕ್ಕೆ ಮುಗಿಬಿದ್ದರು: ಅಪರೂಪವಾಗಿ ಕಾಣಿಸಿಕೊಂಡ ಕ್ರಿಕೆಟ್ ಆಟಗಾರರಿಂದ ಒಂದು ಹಸ್ತಾಕ್ಷರ ಪಡೆಯುವ ತವಕದಲ್ಲಿದ್ದ ಕ್ರಿಕೆಟ್ ಪ್ರೇಮಿಗಳು ಕರ್ನಾಟಕ ತಂಡದ ಆಟಗಾರರಿಗೆ ಮುಗಿಬಿದ್ದ ಪ್ರಸಂಗ ಪೆಸೆಟ್ ಅಂಕಣದಲ್ಲಿ ಭಾನುವಾರ ನಡೆಯಿತು. ಪಂದ್ಯ ಮುಗಿದು ಅರ್ಧಗಂಟೆ ಕಳೆದರೂ ಒಂದು ಸಾವಿರಕ್ಕೂ ಹೆಚ್ಚು ಜನ ಪೆವಿಲಿಯನ್ ಮುಂಭಾಗ ಜಮಾಯಿಸಿ ಕ್ರೀಡಾಪಟುಗಳ ಕೈಬೀಸುತ್ತಲೇ ಇದ್ದರು. ಮನೀಷ್ ಪಾಂಡೆ, ಮಾಯಾಂಕ್ ಅಗರ್ವಾಲ್, ವಿನಯ್ ಅವರ ಹಸ್ತಾಕ್ಷರ ಪಡೆಯುವ ಉದ್ದೇಶದಿಂದ ಸಾಕಷ್ಟು ತ್ರಾಸಪಟ್ಟರು. ಪೊಲೀಸರಿಂದಲೂ ಬೈಸಿಕೊಂಡರು.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

