ಶೋಷಣೆ ತಪ್ಪಿಸಲು ಕಾನೂನು ಸೌಲಭ್ಯ ಬಳಸಿ
ಕ.ಪ್ರ.ವಾರ್ತೆ, ಶಿಕಾರಿಪುರ, ಮಾ.17 ಸರ್ಕಾರ ಮಹಿಳೆಯರ ವಿರುದ್ಧದ ಶೋಷಣೆ ತಪ್ಪಿಸಲು ಕಾನೂನಿನ ಮೂಲಕ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿದರೂ, ಕುಟುಂಬದ ಮರ್ಯಾದೆಗೆ ಅಂಜಿ ಮಹಿಳೆ ಶೋಷಣೆ ಅನುಭವಿಸುತ್ತಿದ್ದಾಳೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮುಖ್ಯಸ್ಥೆ ಕು. ರಾಣಿ ಹೇಳಿದರು.
ಭಾನುವಾರ ಪಟ್ಟಣದ ಶಾಂತಿ ನಗರದಲ್ಲಿನ ಪುಷ್ಪಾಶ್ರಮದ ಸಂತ ತರೇಸಮ್ಮನ ದೇವಾಲಯದಲ್ಲಿ ವಿವಿದ ಮಹಿಳಾ ಸಂಘದ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದರು.
ಪವಿತ್ರ ಸ್ಥಾನ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯಂತ ಪವಿತ್ರ ಸ್ಥಾನ ಕಲ್ಪಿಸಲಾಗಿದ್ದು, ತ್ಯಾಗದ ಪ್ರತೀಕವಾಗಿ ಕ್ಷಮಯಾ ಧರಿತ್ರಿಯಾದ ಮಹಿಳೆಗೆ ಅನಾದಿ ಕಾಲದಿಂದ ಕಲ್ಪಿಸಲಾದ ಪವಿತ್ರ ಸ್ಥಾನದ ಜತೆಗೆ ಕೇವಲ 4 ಗೋಡೆಗೆ ಮಾತ್ರ ಸೀಮಿತವಾಗಿಸಲಾಗಿದೆ ಎಂದ ಅವರು ಇತ್ತೀಚಿನ ದಿನದಲ್ಲಿ ಬದಲಾದ ಸಮಾಜದಲ್ಲಿ ಮಹಿಳೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಅಸಾಮಾನ್ಯ ಪ್ರತಿಭೆ ಸಾಬೀತುಪಡಿಸಿ ಪುರುಷರಿಗೆ ಸರಿಸಮಾನವಾದ ಸಾಧನೆಗೈಯುತ್ತಿದ್ದಾಳೆ ಎಂದು ಪ್ರಶಂಸಿಸಿದರು.
ಜನನದ ಮೂಲಕ ತಂದೆ, ನಂತರದಲ್ಲಿ ಪತಿ, ಗಂಡು ಮಕ್ಕಳನ್ನು ಜೀವನಪೂರ್ತಿ ಅವಲಂಭಿಸಿರುವ ಮಹಿಳೆ ಕುಟುಂಬ ವ್ಯವಸ್ಥೆಯಲ್ಲಿ ಅತ್ತೆ ಸಹಿತ ಪತಿಯ ಸಂಬಂಧಿಕರ ಮೂಲಕ ವರದಕ್ಷಿಣೆ, ಹಿಂಸೆಯನ್ನು ಅನುಭವಿಸುತ್ತಿದ್ದು, ಉದ್ಯೋಗದ ಸ್ಥಳದಲ್ಲಿ ಮಾನಸಿಕ, ದೈಹಿಕ, ಲೈಂಗಿಕ ಕಿರುಕುಳ, ಅತ್ಯಾಚಾರ, ದೌರ್ಜನ್ಯವನ್ನು ಅನುಭವಿಸುತ್ತಿದ್ದಾಳೆ ಎಂದು ವಿಷಾದ ವ್ಯಕ್ತಪಡಿಸಿದರು.
ಅರಿವು ಅಗತ್ಯ: ಮಹಿಳೆಯರಿಗೆ ಕಾನೂನು ನೆರವು, ಸಲಹೆ ಬಗ್ಗೆ ನ್ಯಾಯವಾದಿ ಗಿಡ್ಡಪ್ಪ ಸಿರಿಯಣ್ಣಾರ ಮಾತನಾಡಿ, ಸದಾ ಕೌಟುಂಬಿಕ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರಿಗೆ ಕಾನೂನು ಅರಿವು ಅತ್ಯಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಕಾನೂನು ಪ್ರಾಧಿಕಾರದ ಜತೆ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಉಚಿತವಾಗಿ ಮಹಿಳೆಗೆ ಕಾನೂನು ಸೇವೆ ದೊರಕಿಸುತ್ತಿದೆ ಎಂದರು. ಹಾಗೂ ಜನತಾ ನ್ಯಾಯಾಲಯದ ಮೂಲಕ ಪ್ರತಿ ಗ್ರಾಮದಲ್ಲಿ ರಾಜಿ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸುತ್ತಿದ್ದು, ವರದಕ್ಷಿಣೆಗೆ, ಅತ್ಯಾಚಾರ, ಸ್ತ್ರೀ ಭ್ರೂಣ ಹತ್ಯೆಯಂತಹ ಹೇಯ ಕೃತ್ಯಕ್ಕೆ ಉಗ್ರ ಶಿಕ್ಷೆ ವಿಧಿಸಬಹುದಾಗಿದೆ ಎಂದರು.
ಅಧ್ಯಕ್ಷತೆಯನ್ನು ಆಶ್ರಮದ ಧರ್ಮಗುರು ಫಾದರ್ ಕೆ. ಜಾರ್ಜ್ ವಹಿಸಿದ್ದರು. ಮಹಿಳಾ ಸಂಘದ ಮುಖ್ಯಸ್ಥೆ ಛಾಯಾ ಶಿವಾನಂದ, ತಾಲೂಕು ಕ್ಯಾಥೊಲಿಕ್ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ದೇವರಾಜ್, ಉಪಾಸನಾ ಮಹಿಳಾ ಸಂಘದ ಕುಮಾರ್, ಸಿಸ್ಟರ್ ಆಂತೋಣಿ ಮೇರಿ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

