ಅಭಿಮಾನ ಕಂಡು ನಮ್ಮ ಹುಡುಗ್ರು ಸಂಭ್ರಮಿಸ್ತಿದಾರೆ: ಜೆ. ಅಭಿರಾಮ್
ಶಿವಮೊಗ್ಗ: ಶಿವಮೊಗ್ಗ ಹಾಗೂ ಭದ್ರಾವತಿಯಲ್ಲೀಗ ಕ್ರಿಕೆಟ್ ಫೀವರ್. ದಕ್ಷಿಣ ವಲಯ ಟಿ-20 ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಈ ಕ್ರಿಕೆಟ್ ಜಾತ್ರೆ ಆರಂಭವಾಗಿ ಎರಡು ದಿನ ಕಳೆದಿದೆ, 6 ಪಂದ್ಯಗಳು ಮುಗಿದಿವೆ. ಮುಂದೆ ಇನ್ನಷ್ಟು ಮಹತ್ವದ ಪಂದ್ಯಗಳು ನಡೆಯುವುದಿದೆ. ಈ ಹೊತ್ತಿನಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಜೆ. ಅಭಿರಾಮ್ ಅವರನ್ನು ಕನ್ನಡಪ್ರಭ ಮಾತನಾಡಿಸಿತು.
1979-89ರ ವರೆಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಆಲ್ರೌಂಡ್ ಆಟಗಾರ ಜೆ. ಅಭಿರಾಮ್, ಇದೀಗ ಕರ್ನಾಟಕ ಆಯ್ಕೆ ಸಮಿತಿ ಅಧ್ಯಕ್ಷ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಲೆನಾಡಿನಲ್ಲಿ ಆಯೋಜಿಸಿರುವ ಈ ಪಂದ್ಯಾವಳಿಯ ಒಳಹೊರಗುಗಳ ಕುರಿತು ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಕ್ರಿಕೆಟ್ ಪಂದ್ಯಾವಳಿ ಬೆಂಗಳೂರು ಕೇಂದ್ರೀಕೃತವಾಗಿರುವ ಸಂದರ್ಭದಲ್ಲಿ ಈ ಪಂದ್ಯಾವಳಿ ನಿಮಗೆ ಹೇಗೆ ಮಹತ್ವ ಎನಿಸುತ್ತಿದೆ
ಶಿವಮೊಗ್ಗ- ಭದ್ರಾವತಿಯ ಪಿಚ್ಗಳಲ್ಲಿ ಪಂದ್ಯಗಳು ನಡೆಯುತ್ತಿರುವುದು ನಮಗೇನು ವಿಭಿನ್ನವಾಗಿ ಕಾಣುತ್ತಿಲ್ಲ. ಇಲ್ಲಿನ ಪಿಚ್ಗಳು ಚೆನ್ನಾಗಿವೆ. ಅಂಕಣಗಳೂ ಉತ್ತಮವಾಗಿವೆ. ಪೆಸೆಟ್ ಅಂಕಣದಲ್ಲಿ ನಡೆದ ಮೊದಲ ಪಂದ್ಯ ರಣಜಿ ಪಂದ್ಯವಾಡಿದ ಅನುಭವವನ್ನೇ ನೀಡಿತು. ಸ್ಥಳೀಯ ಸಂಘಟಕರು ಇಲ್ಲಿ ವ್ಯವಸ್ಥೆ ಕೂಡ ಚೆನ್ನಾಗಿ ಮಾಡಿದ್ದಾರೆ. ಪಂದ್ಯಾವಳಿ ಯಶಸ್ವಿಯಾಗಿ ನಡೆಯುವುದರಲ್ಲಿ ಸಂದೇಹವಿಲ್ಲ.
ಈಗ ಎರಡು ಪಂದ್ಯ ಮುಗಿದಿದೆ, ಸ್ಥಳೀಯ ಕ್ರಿಕೆಟ್ ವಾತಾವರಣ ಹೇಗೆನಿಸುತ್ತಿದೆ
ದೊಡ್ಡ ಸಂಖ್ಯೆಯ ಪ್ರೇಕ್ಷಕರ ಮಧ್ಯೆ ಕ್ರಿಕೆಟ್ ಆಡುವುದೇ ಆಟಗಾರರಿಗೆ ಖುಷಿ ಎನಿಸುತ್ತದೆ. ಆಟಗಾರರು ಈ ವಿಚಾರದಲ್ಲಿ ಅಭಿಮಾನ ಕಂಡು ಸಂಭ್ರಮಿಸುತ್ತಿದ್ದಾರೆ, ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಉತ್ತಮ ಫೀಲ್ಡಿಂಗ್, ಬ್ಯಾಟಿಂಗ್, ಬೌಲಿಂಗ್ ಸಂದರ್ಭದಲ್ಲಿ ಪ್ರೇಕ್ಷಕರು ನೀಡುವ ಪ್ರೋತ್ಸಾಹ ಆಟಗಾರರ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮೊದಲ ಪಂದ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದರು, ಇದು ಹಲವು ಆಟಗಾರರನ್ನು ರೋಮಾಂಚನಗೊಳಿಸಿದೆ.
ಎರಡು-ಮೂರನೇ ಹಂತದ ನಗರಗಳಲ್ಲಿ ಕ್ರಿಕೆಟ್ ಪಂದ್ಯ ನಡೆಯುವುದರಿಂದ ಕ್ರಿಕೆಟ್ ಬೆಳವಣಿಗೆ ಸಾದ್ಯ ಎಂಬ ಮಾತನ್ನು ಸಮರ್ಥಿಸುತ್ತೀರಾ
ನಿಜ. ಶಿವಮೊಗ್ಗದಂತಹ ನಗರಗಳಲ್ಲಿ ಕ್ರಿಕೆಟ್ ಪಂದ್ಯ ನಡೆಯುವುದರಿಂದ ಕ್ರಿಕೆಟ್ ಭವಿಷ್ಯಕ್ಕೆ ಅನುಕೂಲವಾಗಲಿದೆ. ಹಾಗೆಯೇ ಭವಿಷ್ಯದ ಕ್ರಿಕೆಟ್ ಆಟಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ.
ನಾವೆಲ್ಲಾ ಜಿ.ಆರ್. ವಿಶ್ವನಾಥ್, ಬೃಜೇಶ್ ಮೊದಲಾದವರ ಆಟವನ್ನು ಕಂಡು ಸಾಕಷ್ಟು ಕಲಿತೆವು. ಅದೇ ರೀತಿ ಇಂತಹ ನಗರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರಿಕೆಟ್ ತಾರೆಗಳು ಪಾಲ್ಗೊಳ್ಳುವುದರಿಂದ ಸ್ಥಳೀಯ ಕ್ರಿಕೆಟ್ ಆಟಗಾರರಿಗೆ ಹೆಚ್ಚಿನ ತಿಳುವಳಿಕೆ ಬರಲು ಸಾದ್ಯವಿದೆ. ಆಟಗಾರರಿಗೆ ಸಲಹೆ ಪಡೆಯಲು, ಅವರನ್ನು ಅನುಕರಿಸಲು, ಆಟದ ವೈಭವ ಆಸ್ವಾದಿಸಲು ಇದೊಂದು ವೇದಿಕೆಯಾಗಲಿದೆ.
ನಿಮ್ಮ ತಂಡ ಸ್ಥಳೀಯ ವಾತಾವರಣವನ್ನು ಹೇಗೆ ಸ್ವೀಕರಿಸಿದೆ
ನಮ್ಮ ಆಟಗಾರರು ಸಾಕಷ್ಟು ಖುಷಿಪಟ್ಟಿದ್ದಾರೆ. ಇಲ್ಲಿನ ಪ್ರೇಕ್ಷಕರ ಪ್ರೋತ್ಸಾಹದಿಂದ ಸಂಭ್ರಮಿಸಿದ್ದಾರೆ. ಕ್ರಿಕೆಟ್ ಕನಸುಹೊತ್ತ ಮಕ್ಕಳಿಗೆ ಟಿಪ್ಸ್ ಕೊಡುವ ಜೊತೆಗೆ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುವುದು, ಫೋಟೋ ತೆಗೆಸಿಕೊಳ್ಳುವ ಮೂಲಕ ಪುಳಕಗೊಂಡಿದ್ದಾರೆ.
ಅದೇ ರೀತಿ ನಮ್ಮದು ಬಲಿಷ್ಠ ತಂಡ, ಕೆ.ಎಲ್. ರಾಹುಲ್, ಮನೀಷ್, ಮಾಯಾಂಕ್, ಬಿನ್ನಿ ಎಲ್ಲರೂ ಫಾರ್ಮನಲ್ಲಿದ್ದಾರೆ. ಇದು ತಂಡವನ್ನು ಬಲಿಷ್ಠಗೊಳಿಸಿದೆ. ತಮಿಳುನಾಡು ಎದುರಿನ ಪಂದ್ಯ ನಮಗೆ ಸಾಕಷ್ಟು ಮಹತ್ವದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

