ಶಿವಮೊಗ್ಗ

ಉಪ ಕಸುಬು ರೈತರಿಗೆ ಲಾಭದಾಯಕ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.21
ಕೃಷಿಯೊಂದಿಗೆ ಪಶುಪಾಲನೆಯನ್ನು ಉಪ ಕಸುಬಾಗಿ ಕೈಗೊಳ್ಳುವ ರೈತರು ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯ. ಕೆಲ ಸಂದರ್ಭಗಳಲ್ಲಿ ಕೃಷಿಯಲ್ಲಿ ನಷ್ಟವಾದರೂ ಪಶುಪಾಲನೆ ಉಪ ಕಸುಬುನಿಂದ ಲಾಭ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ರೈತರು ಜಾಗೃತರಾಗಬೇಕು ಎಂದು ಪಶುಪಾಲನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಆರ್.ಆರ್. ರವೀಂದ್ರ ಅಭಿಪ್ರಾಯಪಟ್ಟಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿರುವ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಇಲಾಖೆಯ ವತಿಯಿಂದ ಕೇಂದ್ರ ಪುರಸ್ಕೃತ ಆಸ್ಕಾಡ್ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಜಾನುವಾರುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೈತರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅರಿವು ಶಿಬಿರ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.
ರೈತರಲ್ಲಿ ನಿರಾಸಕ್ತಿ: ಪ್ರಸ್ತುತ ಪಶುಪಾಲನೆಯ ಬಗ್ಗೆ ರೈತ ಸಮೂಹದಲ್ಲಿ ನಿರಾಸಕ್ತಿ, ನಿರ್ಲಕ್ಷ್ಯ ಕಂಡುಬರುತ್ತಿದೆ. ಈ ನಿರಾಸಕ್ತಿಯೇ ರೈತರು ಕೃಷಿಯಲ್ಲಿ ವಿಫಲರಾಗಲು ಮುಖ್ಯ ಕಾರಣವೆಂದರೆ ತಪ್ಪಾಗಲಾರದು. ಯಾವುದೇ ಕಾರಣಕ್ಕೂ ರೈತರು ಉಪ ಕಸುಬುಗಳ ಬಗ್ಗೆ ನಿರ್ಲಕ್ಷ್ಯ ತಳೆಯಬಾರದು.
ಉಪ ಕಸುಬುಗಳೇ ಜೀವನಾಧಾರ, ಜೀವನ ಭದ್ರತೆ ಎಂಬುವುದನ್ನು ಮನಗಾಣಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರೈತರು ಕೃಷಿಯೊಂದಿಗೆ ಪಶುಪಾಲನೆ, ಕೋಳಿ, ಕುರಿ, ಆಡು ಸಾಕಾಣೆ ಸೇರಿದಂತೆ ಇತ್ಯಾದಿ ಉಪ ಕಸುಬುಗಳತ್ತ ಗಮನ ಹರಿಸುವ ಮೂಲಕ ಸಮಗ್ರ ಕೃಷಿ ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಅರಿವು ಹೊಂದುವುದು ಅತ್ಯಗತ್ಯ: ಪಶುಪಾಲನಾ ಇಲಾಖೆಯ ಪಶು ವೈದ್ಯಾದಿಕಾರಿ ಡಾ. ಟಿ.ಎಚ್. ನಟರಾಜ್ ಮಾತನಾಡಿ, ಜಾನುವಾರುಗಳ ರೋಗ ಪ್ರಸಾರ ತಡೆಯ ಬಗ್ಗೆ ರೈತರ ಹೆಚ್ಚಿನ ಅರಿವು ಹೊಂದುವುದು ಅತ್ಯಗತ್ಯವಾಗಿದೆ. ಪ್ರಸ್ತುತ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಹವಾಮಾನ ವ್ಯವಸ್ಥೆಯಲ್ಲಿ ಜಾನುವಾರುಗಳು ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿವೆ ಎಂದರು.
ಗುರುತರ ಜವಾಬ್ದಾರಿ: ಇದರ ಜೊತೆಗೆ ಸತ್ತ ಜಾನುವಾರುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಮಾಲಿನ್ಯದ ಜೊತೆಗೆ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಈ ಹಿನ್ನೆಯಲ್ಲಿ ಪಶುಪಾಲಕರು ಸತ್ತ ಜಾನುವಾರುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಕಡ್ಡಾಯವಾಗಿದೆ.
ಇದು ತಮ್ಮ ಗುರುತರ ಜವಾಬ್ದಾರಿಯಾಗಿದೆ. ಹಾಗೆಯೇ ಇತರೆ ಜನ, ಜಾನುವಾರುಗಳಿಗೆ ರೋಗ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಜೊತೆಗೆ ಸ್ಥಳಿಯಾಡಳಿತಗಳು ಪ್ರತಿ ಗ್ರಾಮದಲ್ಲಿ ಸತ್ತ ಜಾನುವಾರುಗಳ ವಿಲೇವಾರಿಗೆ ಪ್ರತ್ಯೇಕ ಜಾಗ ಮೀಸಲಿಡಬೇಕು ಎಂದು ತಿಳಿಸಿದರು.
ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಾದೇಶಿಕ ಸಂಶೋಧನಾಧಿಕಾರಿ ಡಾ.ಕೆ.ಜೆ. ಸುದರ್ಶನ ಅವರು ಲಸಿಕೆಗಳ ಮಹತ್ವ ಹಾಗೂ ಜಾನುವಾರು ರೋಗಗಳ ನಿಯಂತ್ರಣದ ಕುರಿತಂತೆ ಮಾತನಾಡಿದರು.
ಪಶುಪಾಲನಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ. ಟಿ.ಎಸ್. ರಮಾನಂದ ಮಾತನಾಡಿ, ಹಾಲು ಉತ್ಪಾದನಾ ಒತ್ತಡದಿಂದ ಪಶುಗಳ ಮೇಲೆ ಉಂಟಾಗುವ ಪರಿಣಾಮ ಹಾಗೂ ಪಶು ವೈದ್ಯಕೀಯ ಮೌಲ್ಯಗಳ ಕುರಿತಂತೆ ಉಪನ್ಯಾಸ ನೀಡಿದರು.
ಪಶು ವೈದಾಧಿಕಾರಿ ಡಾ.. ನಾಗರಾಜ್ ಮಾತನಾಡಿದರು. ಸಮಾರಂಭದಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕಲ್ಲಪ್ಪ, ನಿವೃತ್ತ ಜಂಟಿ ನಿರ್ದೇಶಕ ಡಾ. ವಿಶ್ವನಾಥ್, ಡಾ. ಜಯಪ್ರಕಾಶ್, ಡಾ. ಪ್ರಸನ್ನ, ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.