ರಂಗಾಯಣ ನಿರ್ದೇಶಕರ ವಜಾ: ಖಂಡನೆ
ಕ.ಪ್ರ ವಾರ್ತೆಸಾಗರಮಾ. 23
ಮೈಸೂರು ರಂಗಾಯಣದಲ್ಲಿನ ಕಾರ್ಯಚಟುವಟಿಕೆಯಲ್ಲಿ ಸರ್ಕಾರ ಹಾಗೂ ಅನಧಿಕೃತ ವ್ಯಕ್ತಿಗಳು ಹಸ್ತಕ್ಷೇಪ ಮಾಡುತ್ತಿರುವುದು ಹಾಗೂ ರಂಗಾಯಣದ ನಿರ್ದೇಶಕ ಡಾ. ಬಿ.ವಿ.ರಾಜಾರಾಂ ಅವರನ್ನು ಸರ್ಕಾರ ಅಮಾನತ್ತಿನಲ್ಲಿ ಇರಿಸಿರುವುದನ್ನು ಖಂಡಿಸಿ ಶನಿವಾರ ಉದಯ ಕಲಾವಿದರು ಸಂಸ್ಥೆ ಹಾಗೂ ರಂಗಕರ್ಮಿಗಳ ಒಕ್ಕೂಟದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿ.ವಿ.ಕಾರಂತರನ್ನು ಒಳಗೊಂಡಂತೆ ಅನೇಕ ಪ್ರಖ್ಯಾತ ರಂಗ ಕಲಾವಿದರಿಂದ ಬೆಳೆದು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಮೈಸೂರಿನ ರಂಗಾಯಣ ಈ ಹೊತ್ತು ಪ್ರಕ್ಷುಬ್ದ ಸ್ಥಿತಿಯನ್ನು ಎದುರಿಸುತ್ತಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಂತಹ ಸಂಸ್ಥೆಗಳ ಸ್ವಾಯತ್ತತೆಗೆ ಅನುವು ಮಾಡಿಕೊಡುವ ಬದಲು ಸಂಸ್ಥೆಯ ನಿರ್ವಹಣೆಯಲ್ಲಿ ಹಾಗೂ ಸಂಸ್ಥೆಯ ಕಲಾವಿದರ ಬದುಕಿನಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಕೈವಾಡ: ರಂಗಭೂಮಿಯ ಜನಜೀವನದಲ್ಲಿ ಇಂತಹ ಅನಧಿಕೃತ ಕೈವಾಡಗಳನ್ನು ವಿರೋಧಿಸುವ ಸಲುವಾಗಿ ಮೈಸೂರಿನ ರಂಗಾಯಣದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಹಾಗೂ ರಂಗಾಸಕ್ತರು, ಕಲಾವಿದರು ಪ್ರತಿಭಟನೆ ಸಹ ನಡೆಸುತ್ತಿದ್ದಾರೆ. ರಂಗಾಯಣದ ವ್ಯವಸ್ಥೆಯನ್ನು ಸುಸ್ಥಿತಿಗೊಳಿಸುವ ನಿಟ್ಟಿನಲ್ಲಿ ಹೋರಾಟಕ್ಕಿಳಿದಿರುವ ಡಾ. ಬಿ.ವಿ.ರಾಜಾರಾಂ ಅವರನ್ನು ಸರ್ಕಾರವು ಅಮಾನತ್ತಿನಲ್ಲಿ ಇರಿಸುವ ಮೂಲಕ ರಂಗಾಸಕ್ತರು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಸಾಗರದ ರಂಗಕರ್ಮಿಗಳ ಒಕ್ಕೂಟವು ಸರ್ಕಾರದ ಈ ಕ್ರಮವನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಂಗಾಯಣದ ಸೂಕ್ತ ರೂಪುರೇಷೆಗಳು, ಆಡಳಿತ ನಿರ್ವಹಣೆ ಹಾಗೂ ಕಾರ್ಯವ್ಯಾಪ್ತಿಗಳನ್ನು ಕುರಿತು ಚರ್ಚಿಸಲು ತಜ್ಞರ ಉಪಸಮಿತಿ ರಚಿಸಬೇಕು ಹಾಗೂ ಡಾ. ಬಿ.ವಿ.ರಾಜಾರಾಂ ಅವರ ಅಮಾನತ್ತನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಡಾ. ಗುರುರಾವ್ ಬಾಪಟ್, ಬಿ.ಆರ್.ವಿಜಯವಾಮನ್, ಸಿ.ಟಿ.ಬ್ರಹ್ಮಾಚಾರ್, ಮೃತ್ಯುಂಜಯ, ಸಿ.ಜಿ.ಶ್ರೀಧರ್, ನಾಗೇಂದ್ರ ಕುಮಟಾ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

