ಶಿವಮೊಗ್ಗ

ಅಭಿವೃದ್ಧಿಗೆ ಹೆಚ್ಚು ಹಣ ನೀಡಿದ್ದು ಬಿಜೆಪಿ ಸರ್ಕಾರ

Published On :

ಕ.ಪ್ರ.ವಾರ್ತೆ ೤ ಹಿರಿಯೂರು ೤ ಮಾ25.
ಆಪರೇಷನ್ ಕಮಲದ ಮೂಲಕ ಈ ಹಿಂದೆ ಬಿಜೆಪಿ  ಹಗಲುಕಂಡ ಬಾವಿಯಲ್ಲಿ ರಾತ್ರಿ ಬಿದ್ದರೇ, ಇಲ್ಲಿ ತಿಂದು ಉಂಡು ಹೋದವರನ್ನೆಲ್ಲಾ ಪಕ್ಷಕ್ಕೆ ರತ್ನಗಂಬಳಿ ಹಾಸಿ ಕರೆಯುತ್ತಿರುವ ಕಾಂಗ್ರೆಸ್ ಬಿದ್ದ ಬಾವಿಯಲ್ಲಿಯೇ ಮತ್ತೆ ಬೀಳುತ್ತಿದೆಯೆಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದರು.
ತಾಲೂಕಿನ ಆದಿಜಾಂಬವ ಬೃಹನ್ಮಠಕ್ಕೆ ಇಂದು ಇಳಿ ಸಂಜೆ ಧಿಡೀರ್ ಭೇಟಿ ನೀಡಿದ ಸಂದರ್ಭದಲ್ಲಿ ಕನ್ನಡಪ್ರಭದ ಜೊತೆ ಮಾತನಾಡಿ, ಸ್ವಾತಂತ್ರ್ಯದ ತರುವಾಯ ಯಾವುದೇ ಸರ್ಕಾರಗಳು ನೀಡದಷ್ಟು ಹಣವನ್ನು ಅಭಿವೃದ್ಧಿಗೆ ನೀಡಿದ ಸರ್ಕಾರ ಬಿಜೆಪಿಯೆಂಬುದು ಹೆಗ್ಗಳಿಗೆಯಾಗಿದೆಯೆಂದುರು.
ರಾಜ್ಯದ ಸುಮಾರು ಒಂದು ಕಾಲುಕೋಟಿ ಜನರಿಗೆ ವೈಯುಕ್ತಿಕ ಸೌಲಭ್ಯಗಳನ್ನು ನೀಡುವ ಮೂಲಕ ಜನಪರ ಆಡಳಿತ ನೀಡಬೇಕೆನ್ನುವ ತನ್ನ ಬದ್ದತೆಯನ್ನು ಉಳಿಸಿಕೊಂಡಿದೆಯೆಂದರು. ಶೂನ್ಯ ಬಡ್ಡಿದರಗಳ ಕೆ.ಸಿ.ಸಿ.ಸಾಲ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ, ಸುವರ್ಣಭೂಮಿ ಯೋಜನೆಗಳ ಮೂಲಕ ವೈಯುಕ್ತಿಕವಾಗಿ ಸೌಲಭ್ಯಗಳನ್ನು ನೀಡುವ ಕಾರ್ಯಕ್ರಮಗಳನ್ನು ರೂಪಿಸಿದ್ದೇ ಬಿ.ಜೆ.ಪಿ ಸರ್ಕಾರದ ನಿಜ ಸಾಧನೆಯಾಗಿದೆಯೆಂದರು.
ಅಭಿವೃದ್ಧಿ ವಿಷಯಗಳ ಆಧಾರದಲ್ಲಿ ಜನತೆ ಬಿ.ಜೆ.ಪಿ. ಸಾಧನೆಯನ್ನು ಗಮನಿಸಿದರೇ ಮತ್ಯಾವ ಪಕ್ಷಗಳಿಗೂ ಮತ ಹಾಕಬಾರದೆನ್ನುವ ನಿರ್ಣಯ ಕೈಗೊಳ್ಳಲಿದ್ದಾರೆ. ಆದರೆ ಪಕ್ಷದೊಳಗಿನ ನಾಯಕರುಗಳ ಆಂತರಿಕ ಕಿತ್ತಾಟಗಳಿಂದ ಬೇಸತ್ತು ಮನಸ್ಸು ಬದಲಾಯಿಸಿದರೇ ಪಕ್ಷಕ್ಕೆ ನಿಜಕ್ಕೂ ಹಾನಿಯಾಗಲಿದೆಯೆಂದು ಹೇಳಿದರು.
ಈ ಹಿಂದೆ ಪಕ್ಷವು ಆಪರೇಷನ್ ಕಮಲದ ಮೂಲಕ ತನ್ನ ವರ್ಚಸ್ಸಿಗೆ ಧಕ್ಕೆ ತಂದುಕೊಂಡಿತೆನ್ನುವುದು ಈಗ ಅರಿವಾಗುತ್ತಿದೆಯೆಂದರು. ಆ ಸಂಧರ್ಭದಲ್ಲಿ ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದು ಉಂಡು, ತಿಂದು , ಪಕ್ಷಕ್ಕೆ ಮಾಡಬಹುದಾದ ಹಾನಿಯೆಲ್ಲವನ್ನೂ ಮಾಡಿದ ಕೆಲಸವು ವಲಸಿಗರಿಂದಲೇ ಬಿಜೆಪಿ ಮುಜುಗರ ಅನುಭವಿಸುವಂತಾಯಿತೆಂದು ಹೇಳಿದರು.
ಈ ಸ್ವಾರ್ಥವುಳ್ಳ ನಾಯಕರು ಉಂಡೂ ಹೋದ ಕೊಂಡೂ ಹೋದ ಎನ್ನುವ ಗಾದೆಯಂತೆ ಈಗ ಬೇರೆ ಪಕ್ಷಗಳ ಕದ ತಟ್ಟುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಇಂತವರಿಗೆ ಹೆಚ್ಚು ಮಣೆ ಹಾಕುತ್ತಿದ್ದು ಭವಿಷ್ಯದಲ್ಲಿ ಪಾಠ ಕಲಿಯಲಿದೆಯೆಂದು ಹೇಳಿದರು.
ನಮ್ಮ ಪಕ್ಷದ ಆಂತರಿಕ ಕಿತ್ತಾಟಗಳನ್ನು ಮರೆತು ಈಗ ಆಗಿರುವ ಅಭಿವೃದ್ದಿಯನ್ನು ನೋಡಿ ಮತ ನೀಡಿ ಎಂದು ಕೇಳುವುದು ಮತ್ತೆ ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿರೆಂದು ಜನತೆಯ ಮುಂದೆ ಕ್ಷಮೆ ಯಾಚನೆ ಮಾಡುವ ಮೂಲಕ ಚುನಾವಣೆಗಳನ್ನು ಎದುರಿಸಲಿದ್ದೇವೆಂದು ಹೇಳಿದರು.
ಯಡಿಯೂರಪ್ಪನವರು ಪಕ್ಷ ತ್ಯಜಿಸಿ ಹೋಗಿದ್ದರಿಂದ ಸ್ವಲ್ಪ ಹಿನ್ನಡೆಯಾಗಿದೆಯೆಂದು ಒಪ್ಪಿಕೊಂಡ ಸಚಿವ ಸಿ.ಟಿ.ರವಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಗೊತ್ತಾಗಿದೆ ಆದರೆ ಅಸೆಂಬ್ಲಿ ಚುನಾವಣೆಯಲ್ಲಿ ಈ ಹಾನಿಯ ಪ್ರಮಾಣ ಕಡಿಮೆಯಾಗಲಿದ್ದು ಪಕ್ಷ ಬಹುಮತ ಪಡೆಯುವುದಕ್ಕೆ ಯಾವ ತೊಂದರೆಗಳೂ ಇಲ್ಲವೆಂದು ಹೇಳಿದರು.
ಜೆ.ಡಿ.ಎಸ್.ಪಕ್ಷವು ಕುಟುಂಬ ಪೋಷಿತ ಪಕ್ಷವಾಗಿದ್ದು ಅಪ್ಪ ರಾಷ್ಟ್ರಾದ್ಯಕ್ಷರಾದರೇ ಮಗ ರಾಜ್ಯಾಧ್ಯಕ್ಷರಾಗಿದ್ದಾರೆ. ಇನ್ನು ಯುವ ಘಟಕಕ್ಕೆ ಮೊಮ್ಮಕ್ಕಳನ್ನು ತಂದರೇ ಅದು ಸಂಪೂರ್ಣ ಕುಟುಂಬ ರಾಜಕಾರಣಕ್ಕೆ ಮೀಸಲಾಗಲಿದೆಯೆಂದರು.
ಕಳೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇಲ್ಲದೇ ಹೋದದ್ದರಿಂದ ಮತ್ತು ಓಲೈಕೆ ರಾಜಕಾರಣ ಅನಿವಾರ್ಯವಾದ್ದರಿಂದ ಪ್ರತಿಯೊಂದು ಹಂತದಲ್ಲಿಯೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೆಲಮೊಂದು ಅಸಹಾಯಕತೆಗಳು ಕಾಡುತ್ತಿದ್ದವು, ಆದ್ದರಿಂದಲೇ ಆಪರೇಷನ್ ಕಮಲ ಅನಿವಾರ್ಯವಾಯಿತೆಂದು ಹೇಳಿದರು.
ಆದರೆ ಅನುಭವವೇ ನಮಗೆ ದೊಡ್ಡ ಪಾಠವಾಗಿದ್ದು ಈ ಚುನಾವಣೆಯಲ್ಲಿ ಪಕ್ಷ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಘೋಷಣೆಯಾಗಿರುವ ಚುನಾವಣಾ ಸಮರದಲ್ಲಿ ಎಲ್ಲರೂ ಒಗ್ಗೂಡಿ ಸೆಣಸಲಿದ್ದೇವೆಂದು ಹೇಳಿದರು.
ಕಾಂಗ್ರೆಸ್‌ಗೆ ನೇರ ಎದುರಾಳಿಯಾಗಿದ್ದು ಕೇಂದ್ರದಲ್ಲಿನ ಹಗರಣಗಳ ಸರಮಾಲೆಯಿಂದ ಮತ್ತು ಬೆಲೆಯೇರಿಕೆಯ ಸಮಸ್ಯೆಗಳನ್ನು ಸೃಷ್ಟಿಸಿ ಜನಸಾಮಾನ್ಯರ ಬದುಕಲ್ಲಿ ಆಟವಾಡುತ್ತಿರುವ ವಿಷಯವನ್ನೇ ಮುಂದು ಮಾಡಿಕೊಂಡು ಚುನಾವಣೆಯನ್ನು ಎದುರುಗೊಳ್ಳುತ್ತೇವೆ. ಕಳೆದ 65 ವರ್ಷಗಳಲ್ಲಿ 45 ವರ್ಷಗಳಷ್ಟು ರಾಜ್ಯದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೇಸ್ಯಾವುದೇ ಗುರುತರ ಕೆಲಸಗಳನ್ನು ಮಾಡಿಲ್ಲವೆಂದರು.  
ಹಾಗೆಯೇ ಚುನಾವಣೆಯನ್ನು ಯಾರ ನಾಯಕತ್ವದಲ್ಲಿ ಎದುರಿಸಬೇಕೆಂದೇ ಕಾಂಗ್ರೆಸ್‌ನಲ್ಲಿ ಸ್ಷಷ್ಟ ನಿಲುವಿಲ್ಲವೆಂದರು. ಒಂದು ವೇಳೆ ಅವರ ಪಕ್ಷದ ಹೈಕಮಾಂಡ್ ಯಾವುದೇ ನಾಯಕರ ಹೆಸರನ್ನು ನಾಯಕತ್ವಕ್ಕೆ ಸೂಚಿಸದರೇ ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಲಿದೆಯೆಂದರು. ಈ ಕಾರಣಕ್ಕೆ ಕಾಂಗ್ರೇಸ್ಗೆ ಹೋಲಿಸಿದಾಗ ಬಿ.ಜೆ.ಪಿ.ಯಲ್ಲಿ ನೂರಕ್ಕೆ ನೂರರಷ್ಟು ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದೆಯೆಂದರು.
ಪರಿಶಿಷ್ಟರಿಗೆ ಒಳ ಮೀಸಲು ಕಲ್ಪಿಸುವ ಸದಾಶಿವ ವರದಿಯನ್ನು ಅನುಮೋದನೆಗೊಳಿಸುವಲ್ಲಿ ಸರ್ಕಾರಕ್ಕೆ ಅನೇಕ ವಿಘ್ನಗಳು ಎದುರಾಗಿದ್ದವು, ಕೊನೆಯ ಹಂತದಲ್ಲಿ ಯಾವುದೇ ನಿರ್ಣಯವಿಲ್ಲದೇ ಕೇಂದ್ರಕ್ಕೆ ವರದಿಯನ್ನು ಶೀಘ್ರವಾಗಿ ಕಳಿಸಬೇಕೆನ್ನುವ ನಿರ್ಧಾರ ತಳೆಯಲಾಗಿತ್ತು. ಆದರೆ ಚುನಾವಣೆ ಘೋಷಣೆಯಾಗಿದ್ದರಿಂದ ಅದು ಸಾಧ್ಯವಾಗಲಿಲ್ಲವೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.