ಮಾಂಸ ಮಾರುಕಟ್ಟೆ ಸ್ಥಳಾಂತರಕ್ಕೆ ಮೀನಮೇಷ
ಕ.ಪ್ರ.ವಾರ್ತೆ, ಶಿಕಾರಿಪುರ, ಮಾ.25
ಪಟ್ಟಣದ ಮಧ್ಯಭಾಗದಲ್ಲಿ ಕೋಟ್ಯಂತರ ವೆಚ್ಚದ ಸುಸಜ್ಜಿತ ಬಸ್ ನಿಲ್ದಾಣ, ಹಿಂಭಾಗದಲ್ಲಿ ದೊಡ್ಡ ಸಾಂಸ್ಕೃತಿಕ ಸಭಾಭವನ, ಸುತ್ತ ಮುತ್ತ ಭವ್ಯ ಕಟ್ಟಡಗಳ ಸಾಲು.... ಇಂತಹ ಅಭಿವೃದ್ಧಿಯ ಮಧ್ಯೆ ಎಲ್ಲೆಡೆ ಮಾಂಸದ ತುಂಡು ಬಿಸಾಕಿ ರಣಹದ್ದು, ಕಾಗೆ ಮತ್ತಿತರ ಪ್ರಾಣಿಗಳ ವಾಸಸ್ಥಾನವಾಗಿರುವ ಮಾಂಸದ ಅಂಗಡಿ ಮಾರುಕಟ್ಟೆ ಇರುವುದು ಪಟ್ಟಣಕ್ಕೆ ನಿಜಕ್ಕೂ ಕರಿಚುಕ್ಕಿಯಾಗಿದೆ.
ಇದು ಪುರಸಭೆಯ ಆಡಳಿತ ವೈಖರಿಗೆ ಹಾಗೂ ಜನಪ್ರತಿನಿಧಿಗಳ ಅಭಿವೃದ್ಧಿಯ ಜಪಕ್ಕೆ ಸವಾಲಾಗಿರುವ ಪ್ರಶ್ನೆಯಾಗಿದೆ.
ಪ್ರತ್ಯೇಕ ಸ್ಥಳ: ಕಳೆದ ಹಲವು ದಶಕದಿಂದ ಪಟ್ಟಣದ ಸಂತೆ ಮೈದಾನದಲ್ಲಿ ಮಾಂಸದ ಅಂಗಡಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿ ಹರಾಜು ಪ್ರಕ್ರಿಯೆಯಲ್ಲಿ ಕಟ್ಟಡ ಹಸ್ತಾಂತರಿಸಲಾಗಿತ್ತು. ಪಟ್ಟಣದ ಅಭಿವೃದ್ಧಿಗಾಗಿ ಇಂತಹ ಪ್ರದೇಶದಲ್ಲಿನ ಮಾಂಸದ ಅಂಗಡಿಯ ಕೊಳಚೆ, ದುರ್ವಾಸನೆ ಸಹಿಸಲಾಗದೆ ಕಳೆದ 4 ವರ್ಷದ ಹಿಂದೆ ಪಟ್ಟಣದಿಂದ 2 ಕಿ.ಮೀ ಹೊರವಲಯದ ಆಶ್ರಯ ಬಡಾವಣೆ ಬಳಿ ಅಂದಾಜು ರು. 21 ಲಕ್ಷದಲ್ಲಿ ನೂತನ ಮಾಂಸದ ಅಂಗಡಿಯನ್ನು ನಿರ್ಮಿಸಲಾಗಿದೆ.
ಆದರೆ ಎಲ್ಲಾ ರೀತಿಯ ವ್ಯವಸ್ಥೆ ಹೊಂದಿರುವ ನೂತನ ಕಟ್ಟಡಕ್ಕೆ ಇದುವರೆಗೂ ಸ್ಥಳಾಂತರವಾಗದೇ ಹಾಗೂ ಹಳೆಯ ಕಟ್ಟಡ ಕಳೆದ 2 ವರ್ಷದಿಂದ ಹರಾಜು ಪ್ರಕ್ರಿಯೆಗೊಳಪಡಿಸದೆ ಪುರಸಭೆಯ ಲಕ್ಷಾಂತರ ಆದಾಯಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ನಷ್ಟವಾದಂತಾಗಿದೆ.
ಮೂಗು ಮುಟ್ಟಿಕೊಳ್ಳುವ ಸ್ಥಿತಿ: ಕಳೆದ 4 ವರ್ಷದಿಂದ ಹಲವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಪುರಸಭೆಗೆ ಒಂದೆಡೆ ನೂತನ ಕಟ್ಟಡಕ್ಕೆ ರು. 21 ಲಕ್ಷ ವ್ಯಯಿಸಿ, ಹಳೆಯ ಕಟ್ಟಡದಿಂದ ಬಾಡಿಗೆ ವಸೂಲಿಗೆ ಕ್ರಮಕೈಗೊಳ್ಳದ ದುಂಡಾವರ್ತನೆಯಿಂದ ಅರ್ಧ ಕೋಟಿಗೂ ಮಿಗಿಲಾಗಿ ನಷ್ಟವಾಗಿದ್ದು, ಇಂದಿಗೂ ಹಳೆ ಮಾರುಕಟ್ಟೆಯಿಂದ ಮೂಗು ಮುಚ್ಚಿ ಅಲೆದಾಡುವ ಸ್ಥಿತಿ ಜನಸಾಮಾನ್ಯರದ್ದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್, ಅಧ್ಯಕ್ಷರು ಹಾಗೂ ಅಧಿಕಾರಿಗಳ ಅಕ್ರಮ ಹೊಂದಾಣಿಕೆಯಿಂದಾಗಿ ಕಳೆದ ಬಾರಿ ಪುರಸಭೆಯ ಸಾಮಾನ್ಯ ಸಭೆಗೆ ಮಾಂಸದ ಅಂಗಡಿಯ ವಿಷಯವನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟು ಪುರಸಭೆಯ ಆದಾಯಕ್ಕೆ ವಂಚಿಸಲಾಗಿದೆ ಎಂದರು.
ಸ್ಥಳೀಯರಿಗೆ ಅನ್ಯಾಯ: ಮೀನು ಮಾರುಕಟ್ಟೆಯಲ್ಲಿನ ವರ್ತಕರು ಸ್ಥಳೀಯವಾಗಿ ಸಂಗ್ರಹಿಸಿದ ಮೀನುಗಳನ್ನು ಖರೀದಿಸದೆ ಆರೋಗ್ಯಕ್ಕೆ ವಿಷಯುಕ್ತವಾದ 3 ದಿನಗಳ ಹಳೆಯ ಭದ್ರಾವತಿಯ ಮೀನುಗಳನ್ನು ಗ್ರಾಹಕರಿಗೆ ವಿತರಿಸುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಜಾಣ ಕಿವುಡು ಪ್ರದರ್ಶಿಸುತ್ತಿರುವುದು ಸ್ಥಳೀಯ ಕೆರೆಯ ಮೀನು ಟೆಂಡರ್ದಾರರಿಗೆ ಅನ್ಯಾಯವಾಗುತ್ತಿದೆ ಎಂದರು.
2 ವರ್ಷದಿಂದ ಹರಾಜು ಪ್ರಕ್ರಿಯೆ ನಡೆಸದೆ ಮಾಂಸದ ಅಂಗಡಿ ಮಾಲೀಕರಿಂದ ನಷ್ಟವಾಗಿರುವ ಲಕ್ಷಾಂತರ ಹಣಕ್ಕೆ ಅಧಿಕಾರಿಗಳು ಜವಾಬ್ದಾರರಾಗಿದ್ದು, ಮುಂಗಡವಿಲ್ಲದೆ ನೀಡಿದ ಕಟ್ಟಡದಿಂದ ಮಾರುಕಟ್ಟೆಯನ್ನು ನೂತನ ಕಟ್ಟಡಕ್ಕೆ ಕೂಡಲೇ ಸ್ಥಳಾಂತರಿಸುವಂತೆ ಅವರು ಆಗ್ರಹಿಸಿದ್ದಾರೆ.
ಪುರಸಭೆಯ ರೆವಿನ್ಯೂ ಅಧಿಕಾರಿ ಪ್ರಮೋದ್, ಕಳೆದ ಮೇ ತಿಂಗಳಿನಲ್ಲಿ ಹರಾಜು ಪ್ರಕ್ರಿಯೆ ನಿಗದಿಪಡಿಸಿದಾಗ ವರ್ತಕರಾರೂ ಭಾಗವಹಿಸದ ಕಾರಣ ಮುಂದುವರಿಸಿದ್ದಾಗಿ ತಿಳಿಸಿ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಪುರಸಭೆಯಿಂದ ನಗರಸಭೆಯಾಗಿ ಪರಿವರ್ತನೆಗೊಳ್ಳುವ ತವಕದಲ್ಲಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿವೃದ್ಧಿ ಜಪವನ್ನು ವೇದಿಕೆಗೆ ಮಾತ್ರ ಸೀಮಿತಗೊಳಿಸದೆ ಶೀಘ್ರ ಮಾರುಕಟ್ಟೆ ಸ್ಥಳಾಂತರಿಸಿ ಆದಾಯ ಹೆಚ್ಚಿಸಿ ಸಾಮಾನ್ಯ ಜನತೆ ಮೂಗು ಮುಚ್ಚಿ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

