ಶಿವಮೊಗ್ಗ

ಶರಾವತಿಗೆ ಮರಳು ಮಾಫಿಯಾ ಕನ್ನ

Published On :

 ರವಿ ಬಿದನೂರು
ಕ.ಪ್ರ.ವಾರ್ತೆ, ಹೊಸನಗರ, ಮಾ.24
ದಿನೇದಿನೇ ಅಕ್ರಮ ಮರಳು ಮಾಫಿಯಾ ಹೆಚ್ಚುತ್ತಿದ್ದು ಹೇರಳ ಮರಳು ಸಂಪತ್ತು ಹೊಂದಿರುವ ಶರಾವತಿ ಒಡಲು ಬರಿದಾಗುತ್ತಿದೆ.
   ತಾಲೂಕಿನ ಶರಾವತಿ ಹಿನ್ನೀರು ಪ್ರದೇಶ ಹಿಲ್ಕುಂಜಿ ಪ್ರದೇಶದಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ನಗರ, ಆರಗ ರಸ್ತೆ ಇಕ್ಕೆಲಗಳು, ಗಿಡಪೊದೆಗಳ ನಡುವೆ ಎಲ್ಲೆಂದರಲ್ಲಿ ಮರಳಿನ ಅಕ್ರಮ ದಾಸ್ತಾನು ಕಂಡು ಬರುತ್ತಿದೆ.
 24 ಗಂಟೆಗಳ ನಿರಂತರ ಮರಳು ದಂಧೆ ನಡೆಯುತ್ತಿದ್ದು ದಿನವೊಂದಕ್ಕೆ 250ಕ್ಕೂ ಹೆಚ್ಚು ಲಾರಿಗಳಲ್ಲಿ ಮರಳನ್ನು ಸಾಗಿಸಲಾಗುತ್ತಿದ್ದು, ಈಗಾಗಲೇ 4000ಕ್ಕೂ ಹೆಚ್ಚು ಲೋಡ್ ಅಕ್ರಮ ಮರಳು ದಾಸ್ತಾನು ಮಾಡಲಾಗಿದೆ ಎಂದು ಹೇಳಲಾಗಿದೆ.
1 ಪರ್ಮಿಟ್‌ಗೆ 15 ಲೋಡ್: ಈ ವರೆಗೆ ಹಿಲ್ಕುಂಜಿ ಪ್ರದೇಶದಲ್ಲಿ ಮರಳು ತೆಗೆಯಲು ಅವಕಾಶವಿರಲಿಲ್ಲ. ಆದರೆ ಲೋಕೋಪಯೋಗಿ ಇಲಾಖೆ ಈ ವರ್ಷ ಪರ್ಮಿಟ್ ಕೊಡುತ್ತಿದೆ.
   ಆದರೆ ಇಲಾಖೆಯಿಂದ ಪಡೆಯುವ ಒಂದು ಪರ್ಮಿಟ್‌ಗೆ 15 ರಿಂದ 20 ಲೋಡ್ ಮರಳು ಸಾಗಾಟ ಮಾಡಿ ಕಂಡಕಂಡಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಈ ವಿಷಯ ಗುಟ್ಟಾಗಿ ಉಳಿದಿಲ್ಲ ಆದರೆ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಿದೆ ಎಂಬ ಆರೋಪವಿದೆ.
ದಬ್ಬಾಳಿಕೆ: ಪ್ರಕೃತಿ ಸಂಪತ್ತಿಗೆ ನಾವೇ ವಾರಸುದಾರರು ಎಂಬಂತೆ ಕೆಲವು ಹಿತಾಸಕ್ತಿಗಳು ಹಿಲ್ಕುಂಜಿ ಮರಳು ಸಂಪತ್ತಿನ ಮೇಲೆ ತಮ್ಮ ಅಧಿಪತ್ಯ ಸ್ಫಾಪಿಸುತ್ತಿವೆ.
  ಬೇರೆ ಯಾವುದೆ ಗಾಡಿಗಳು ಬಂದರೆ ನೇರವಾಗಿ ಮರಳು ತುಂಬಿಸುವ ಹಾಗಿಲ್ಲ. ಸ್ಥಾಪಿತ ಹಿತಾಸಕ್ತಿಗಳ ಅನುಮತಿ ಪಡೆದು ಲೋಡ್‌ಗೆ 1500 ಹಣ ತೆತ್ತು ತುಂಬಿಸಿಕೊಂಡು ಹೋಗಬೇಕಾದ ದಬ್ಬಾಳಿಕೆ ಪ್ರವೃತ್ತಿ ಕೂಡ ಮೈಳೈಸುತ್ತಿದೆ.
ಹಿಲ್ಕುಂಜಿ ಮರಳು ಪಾಯಿಂಟ್ ಅಲ್ಲದಿದ್ದರೂ ಇಲಾಖೆ ಪರವಾನಗಿ ನೀಡುತ್ತಿರುವುದರ ಹಿಂದೆ ಸಂಶಯ ವ್ಯಕ್ತವಾಗುತ್ತಿದೆ.
  ಮಾತ್ರವಲ್ಲ ಮರಳು ಸಂಪತ್ತು ರಕ್ಷಿಸಬೇಕಾದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಪರ್ಮಿಟ್ ನೀಡಿದ ಕೂಡಲೇ ತಮ್ಮ ಕೆಲಸ ಮುಗಿಯುತು ಎಂದು ಭಾವಿಸಿದಂತಿದೆ. ಒಬ್ಬ ಸಿಬ್ಬಂದಿಯನ್ನು ನೇಮಿಸುವಲ್ಲಿ ಕೂಡ ಇಲಾಖೆ ವಿಫಲವಾಗಿದೆ.
   ಇದು ಅಕ್ರಮ ಮರಳು ವಹಿವಾಟಿನೊಂದಿಗೆ ಇಲಾಖೆ ಶಾಮೀಲಾಗಿರುವ ಶಂಕೆ ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಸಾರ್ವಜನಿಕರ ಆಕ್ರೋಶ: ಹಿಲ್ಕುಂಜಿ ಸಮೀಪದ ಕೊಡಸೆ ಬಳಿ ಹಿನ್ನೀರಿಗೆ ರ್ಯಾಂಪ್ ನಿರ್ಮಿಸಿ ಅಕ್ರಮ ಮರಳು ದಂಧೆ ಕೈಹಾಕುವ ಪ್ರಯತ್ನದಲ್ಲಿದ್ದಾಗ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿಸಿದ ಘಟನೆ ವಾರದ ಹಿಂದೆ ನಡೆದಿದೆ. ಆದರೆ ಹಿಲ್ಕುಂಜಿಯಲ್ಲಿ ಮಾತ್ರ ತಾವೇ ಆಡಿದ್ದೆ ಆಟ ಎಂಬಂತೆ ಮರಳು ಮಾಫಿಯ ನಡೆಯುತ್ತಿದ್ದರು ಕೂಡ ಇಲಾಖೆ ಮಾತ್ರ ಗಮನಹರಿಸದಿರುವುದು ಪ್ರಕೃತಿಪ್ರಿಯರ ಪಾಲಿಗೆ ಬಿಸಿತುಪ್ಪವಾಗಿದೆ.
ವಶಕ್ಕೆ ತೆಗೆದುಕೊಳ್ಳಲಿ: ಹೀಗಾಗಲೆ ಹಿಲ್ಕುಂಜಿ, ಆರಗ ರಸ್ತೆ, ಬಸವನಬ್ಯಾಣ, ಶ್ರೀಧರಪುರ, ನಗರ, ನೂಲಿಗ್ಗೇರಿ ಸೇರಿದಂತೆ ವಿವಿಧ ಭಾಗದ ಅಲ್ಲಲ್ಲಿ ದಾಸ್ತಾನು ಮಾಡಿರುವ ಮರಳನ್ನು ಇಲಾಖೆ ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ಜಾಣತನ ಪ್ರದರ್ಶಿಸಿ ಯಾರದೊ ಖಾತೆ ಜಾಗದಲ್ಲಿ ಸುರಿದಿರುವ ಮರಳಿನ ಬಗ್ಗೆ ಮಾಹಿತಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜಿಪಿಎಸ್ ಅಳವಡಿಸಲಿ: ಮರಳು ಸಾಗಾಟ ಯಾವುದೇ ವಾಹನಕ್ಕೆ ಜಿಪಿಎಸ್ ಅಳವಡಿಗೆ ಕಡ್ಡಾಯಗೊಳಿಸಬೇಕು. ಆಗ ಮಾತ್ರ ಕಚೇರಿಯಲ್ಲೇ ಕುಳಿತರೂ ವಾಹನಗಳ ಚಲನವಲನ ಗಮನಕ್ಕೆ ಬರುವುದರಿಂದ ಅಕ್ರಮ ಮರಳು ಸಾಗಾಟ ತಡೆಯಲು ಸಾಧ್ಯವಾಗುತ್ತದೆ. ಆದರೆ ಲೋಕೋಪಯೋಗಿ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಅತಿಯಾದ ಒತ್ತಡ ಬಂದರೆ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ವರ್ತಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.


ಸಂಬಂಧಪಟ್ಟ ಇಲಾಖೆ ಮನಸ್ಸು ಮಾಡಿದರೆ ಮರಳು ಸಂಪತ್ತನ್ನು ರಕ್ಷಿಸುವುದು ಕಷ್ಟವಲ್ಲ. ಆದರೆ ಅಧಿಕಾರಿಗಳು ಕರ್ತವ್ಯಕ್ಕೆ ನಿಷ್ಠರಾಗಿರಬೇಕು. ಅಕ್ರಮ ದಂಧೆಯನ್ನು ನಿಲ್ಲಿಸಲು ಇಲಾಖೆ ಇನ್ನಾದರು ಕ್ರಮ ಕೈಗೊಳ್ಳುವ ಇಚ್ಚಾಶಕ್ತಿ ಪ್ರದರ್ಶಿಸಲಿ.
                  - ನಾಗರಾಜ ಸ್ಥಳೀಯರು,
                   ಗ್ರಾಪಂ ಮಾಜಿ ಸದಸ್ಯರು

ಹಿಲ್ಕುಂಜಿ, ಕೊಡಸೆ ಸೇರಿದಂತೆ ಮರಳು ಸಂಪತ್ತು ಹೊಂದಿರುವ ಪಾಯಿಂಟ್‌ಗಳು ಕೆಲವಷ್ಟು ಇದ್ದು ಮರಳು ತೆಗೆಯಲು ಅನುಮತಿ ನೀಡುವಾಗ ಗ್ರಾಪಂ ಗಳಿಗೆ ಯಾವುದೆ ಮಾಹಿತಿ ನೀಡುತ್ತಿಲ್ಲ. ಈ ಸಂಬಂಧ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಲಾಗಿದೆ.
                    - ಎಚ್.ವೈ. ಸತೀಶಗೌಡ
                     ಅಧ್ಯಕ್ಷರು ಗ್ರಾಪಂ ನಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.