ಬಿತ್ತನೆ ಬೀಜಕ್ಕೆ ಕಂಪನಿಗಳನ್ನೇ ಅವಲಂಬಿಸಬೇಡಿ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.28
ಸಹ್ಯಾದ್ರಿವಿಜ್ಞಾನ ಕಾಲೇಜಿನ ಬೀಜ ತಂತ್ರಜ್ಞಾನ ಮತ್ತು ಸಸ್ಯ ಶಾಸ್ತ್ರ ವಿಭಾಗ ಕಾಲೇಜು ಆವರಣದಲ್ಲಿ ಗುರುವಾರ ಬೀಜ ದಿನಾಚರಣೆ ಆಚರಿಸಿತು.
ಸುಮಾರು 200 ಬಗೆಯ ನಮೂನೆಯ ಬೀಜಗಳನ್ನು ಸಂಗ್ರಹಿಸಿ ಪ್ರದರ್ಶನದಲ್ಲಿಡಲಾಗಿತ್ತು. ವಿವಿಧ ಧಾನ್ಯಗಳು, ಕಾಳುಗಳು, ಎಣ್ಣೆಕಾಳುಗಳು, ಮರದ ಬೀಜಗಳು, ಕಳೆ ಬೀಜಗಳೊಂದಿಗೆ ವಿವಿಧ ರೀತಿಯ ಬೀಜಗಳ ಮೊಳಕೆ ಮಾದರಿಗಳು ಹಾಗೂ ರೋಗದ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಂ. ಕೃಷ್ಣಪ್ಪ, ರೈತರು ಬಿತ್ತನೆ ಬೀಜಗಳಿಗಾಗಿ ಬೀಜ ಉತ್ಪಾದನಾ ಕಂಪನಿಗಳ ಮೇಲೆ ಅವಲಂಬನೆಯಾಗುವುದಕ್ಕಿಂತ ತಾವೇ ಉತ್ತಮ ಬಿತ್ತನೆ ಬೀಜಗಳ ಉತ್ಪಾದನೆ ಮಾಡಬೇಕು ಎಂದರು.
ಉತ್ತಮ ಇಳುವರಿ: ಉತ್ತಮ ಇಳುವರಿಯ ಬೀಜಗಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವರ್ಷದ ಎಲ್ಲಾ ಹವಾಮಾನಗಳಿಗೂ ಹೊಂದಿಕೆಯಾಗುವ ಬೆಳೆಗಳು, ಲವಣ ಮತ್ತು ಒಣ ಹವೆಯಲ್ಲೂ ಉತ್ತಮ ಇಳುವರಿ ನೀಡುವ ತಳಿಗಳ ಅಭಿವೃದ್ಧಿ ಉತ್ತಮ ಬಿತ್ತನೆ ಬೀಜಗಳಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಬಿತ್ತನೆ ಬೀಜ ಉತ್ಪಾದನಾ ಕಂಪನಿಗಳು ತಮ್ಮ ವ್ಯವಹಾರದೊಂದಿಗೆ ಸಾಂಪ್ರದಾಯಿಕ ಬೀಜಗಳ ಸಂಸ್ಕರಣೆಗೂ ಮಹತ್ವ ನೀಡಬೇಕು. ಯಾವುದೇ ಒಂದು ಸಾಂಪ್ರದಾಯಿಕ ಬೀಜದ ತಳಿಯನ್ನು ಕಳೆದುಕೊಂಡರೆ, ಮುಂದೆ ನೋಡಲೂ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬೀಜೋತ್ಪಾದನಾ ಕಂಪನಿಗಳೊಂದಿಗೆ, ಪ್ರತಿಯೊಬ್ಬರೂ ಸಾಂಪ್ರದಾಯಿಕ ಬೀಜಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದರು.
ವಿಶ್ವದ ಎಲ್ಲಾ ಸಾಂಪ್ರದಾಯಿಕ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ನ್ಯೂಯಾರ್ಕ್ನಲ್ಲಿ ಐಜಿಪಿಜಿಆರ್ ಸಂಸ್ಥೆ ಆರಂಭಗೊಂಡಿದೆ. ಈ ಸಂಸ್ಥೆಯಲ್ಲಿ ವಿಶ್ವದ ಎಲ್ಲಾ ದೇಶಗಳ ಸಾಂಪ್ರದಾಯಿಕ ಬಿತ್ತನೆ ಬೀಜದ ತಳಿಗಳನ್ನು ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ಭಾರತದಲ್ಲಿಯೂ ಎಲ್ಲಾ ತಳಿಗಳನ್ನು ಸಂಗ್ರಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೆಹಲಿಯಲ್ಲಿ ಎನ್ಜಿಪಿಜಿಆರ್ ಸಂಸ್ಥೆ ಆರಂಭಿಸಿದೆ ಎಂದು ತಿಳಿಸಿದರು.
ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ದೇಶದಲ್ಲಿನ ಆಹಾರ ಅಸಮತೋಲನವನ್ನು ಸರಿದೊಗಿಸಬಹುದು. ಇಲ್ಲದಿದ್ದಲ್ಲಿ ವಿಶ್ವದ ಅನೇಕ ದೇಶಗಳಂತೆ ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದ ಅವರು, ಪ್ರಸ್ತುತ ಉತ್ತಮ ಇಳುವರಿಯೊಂದೇ ಕೃಷಿಯ ಮೂಲ ಉದ್ದೇಶವಾಗಿದ್ದು, ಉತ್ತಮ ಬಿತ್ತನೆ ಬೀಜ ಬಳಸಿ, ಅದಕ್ಕೆ ಪೂರಕವಾದ ರಸಾಯನಿಕ ಬಳಸಿದರೆ ಉತ್ತಮ ಇಳುವರಿ ಬಂದೇ ಬರುತ್ತದೆ ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಪ್ರೊ. ಜಿ. ಶಕುಂತಲ, ಕುವೆಂಪು ವಿವಿಯ ದೂರ ಶಿಕ್ಷಣ ನಿರ್ದೇಶನಾಲಯದ ಉಪ ಕುಲಸಚಿವ ಡಾ.ಎಚ್.ಎನ್. ರಮೆಶ್ಬಾಬು, ರಾಷ್ಟ್ರಪ್ರಶಸ್ತಿ ಪುರಸ್ಕೃತ ರೈತ ಅಗಳಿ ನಾಗೇಶ್ ರಾವ್, ಸಸ್ಯಶಾಸ್ತ್ರ ವಿಭಾಗದ ಕೆ. ಕೃಷ್ಣಸ್ವಾಮಿ, ಉಪನ್ಯಾಸಕಿ ಡಾ. ರಾಜೇಶ್ವರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

