ಶಿವಮೊಗ್ಗ

ಬಿಎಸ್ವೈ ಒನ್ ಮ್ಯಾನ್ ಆರ್ಮಿ

Published On :

 ಶ್ರೀಕಾಂತ ಭಟ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಮಾ.30
ಅವರು ಪಕ್ಷದ ಅಗ್ರ ಪಂಕ್ತಿ ನಾಯಕ, ಆ ಪಕ್ಷದ ಏಕೈಕ ಸ್ಟಾರ್ ಕ್ಯಾಂಪೇನರ್, ಜೊತೆಗೆ ಚುನಾವಣಾ ಸ್ಪರ್ಧಿಕೂಡ. ಅಷ್ಟೇ ಅಲ್ಲ, ರಾಜ್ಯದ ತುಂಬೆಲ್ಲಾ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ಅಂತಿಮಗೊಳಿಸುವುದೂ ಅವರೇ.
ಹೀಗೆ ಒಂದೇ ವ್ಯಕ್ತಿ ಹಲವು ರೋಲ್ಗಳಲ್ಲಿ ಮೆರೆಯುವ, ಸಂಕಟ ಅನುಭವಿಸುವ ಅವಕಾಶ ಬಂದಿರುವುದು ಕೆಜೆಪಿ ಕಟ್ಟಿದ ಬಿ.ಎಸ್.ಯಡಿಯೂರಪ್ಪನವರಿಗೆ.
ಇಷ್ಟು ವರ್ಷಗಳ ವರೆಗೆ ವಿಶಾಲ ಸಂಘಟನೆ ಹಾಗೂ ಸಂಘಟನೆಯ ಮೇರು ಮುಖಂಡರು ಮಾಡುತ್ತಿದ್ದ ಕೆಲಸವನ್ನು ತಮ್ಮ ಮೇಲೆ ಹೊತ್ತುಕೊಳ್ಳುವ ಪರಿಸ್ಥಿತಿ ಈಗ ಯಡಿಯೂರಪ್ಪನವರಿಗೆ ಬಂದೊದಗಿದೆ. ಪರಿಣಾಮ, 70ರ ಹರೆಯದ ಬಿಎಸ್ವೈ ಈಗ ಹುಚ್ಚುಕುದುರೆ. ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಒಂದು ನಿಮಿಷ ಕೂರದೇ ಅಲೆದಾಟ ಆರಂಭಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುಂಚೆಯೇ ಬಿ.ಎಸ್. ಯಡಿಯೂರಪ್ಪನವರು ತಮ್ಮ ಸ್ವಕ್ಷೇತ್ರದ ಬಹುತೇಕ ಭಾಗವನ್ನು ಸುತ್ತಿಬಂದಿದ್ದಾಗಿದೆ. ಬುಧವಾರ ಹಾಗೂ ಗುರುವಾರ ಎರಡು ದಿನಗಳ ಪ್ರಚಾರವನ್ನೇ ತೆಗೆದುಕೊಂಡರೆ ದಿನಮೊಂದಕ್ಕೆ ಕನಿಷ್ಟ 14ರಿಂದ 15ಗಂಟೆ ಕಾಲ 18ರಿಂದ 20 ಗ್ರಾಮಾಂತರ ಪ್ರಚಾರ ಸಭೆ ನಡೆಸಿದ್ದಾರೆ. ತಡ ರಾತ್ರಿ ವರೆಗೆ ಮುಖಂಡರ ಸಭೆ ನಡೆಸಿ ಕಾರ್ಯತಂತ್ರ ಹೆಣೆದಿದ್ದಾರೆ.
ಏಕೈಕ ಸ್ಟಾರ್ ಕ್ಯಾಂಪೇನರ್: ಕೆಜೆಪಿಯ ಏಕೈಕ ಸ್ಟಾರ್ ಕ್ಯಾಂಪೇನರ್ ಬಿ.ಎಸ್.ಯಡಿಯೂರಪ್ಪ. ಈ ಅಂಶ ಕೂಡ ಎದುರಾಳಿ ಬಿಜೆಪಿಗೆ ಸಮಾಧಾನದ ವಿಷಯ.
ತಮ್ಮ ಸ್ವಕ್ಷೇತ್ರದಲ್ಲಿ ಪ್ರಚಾರ ಮಾಡುವ ಜೊತೆಗೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡುವ ಅನಿವಾರ್ಯತೆ ಯಡಿಯೂರಪ್ಪನವರಿಗೆ ಬಂದೊದಗಿದೆ. ಹೀಗಾಗಿಯೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿರುವ ಬಿಎಸ್ವೈ ಒತ್ತಡದಲ್ಲಿ ಸಿಲುಕಿದ್ದಾರೆ.
ಪಕ್ಷದ ನಾಯಕಿ ಶೋಭಾ ಕರಂದ್ಲಾಜೆ ಅವರು ತಮ್ಮ ಕ್ಷೇತ್ರ ರಾಜಾಜಿನಗರದಲ್ಲಿ ನೆಲೆ ಗಟ್ಟಿಗೊಳಿಸುವಲ್ಲೇ ಸಮಯ ಕಳೆಯುತ್ತಿದ್ದಾರೆ. ಇನ್ನು ಸಂಸದ ಬಿವೈ ರಾಘವೇಂದ್ರ ಕೆಜೆಪಿ ಸಂಘಟನೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳದ ಪರಿಣಾಮ ಪ್ರತಿ ವೇದಿಕೆ ಹತ್ತಿಳಿಯುವ ಅನಿವಾರ್ಯತೆ ಯಡಿಯೂರಪ್ಪನವರದ್ದಾಗಿದೆ.
ಪ್ರಚಾರದ ವಿಷಯ ಹಾಗಿರಲಿ, 69 ಅಭ್ಯರ್ಥಿಗಳ ಮೊದಲ ಪಟ್ಟಿ ಹೊರತಾಗಿ ಎರಡನೇ ಪಟ್ಟಿ ಪ್ರಕಟಣೆಗೂ ಸಂಕಟ ಬಂದೊಂದಗಿದೆ. ಕಾಂಗ್ರೆಸ್, ಬಿಜೆಪಿಯಿಂದ ದೂರವಾದ ಅಭ್ಯರ್ಥಿ ಆಕಾಂಕ್ಷಿಗಳು ಕೆಜೆಪಿ ಟಿಕೆಟ್ಗೆ ಮುಗಿಬಿದಿದ್ದಾರೆ. ಇವರನ್ನು ನಿಭಾಯಿಸುವುದು ಒಂದು ಸವಾಲಾಗಿದೆ.
ಉತ್ಸವ ಮೂರ್ತಿ: ಟಿಕೆಟ್ಗಾಗಿ ಒಂದು ಕಡೆ ಪೈಪೋಟಿ ಆರಂಭವಾಗಿದ್ದರೆ ಮತ್ತೊಂದು ಕಡೆ ಟಿಕೆಟ್ ಪಡೆದ ಅಭ್ಯರ್ಥಿಗಳು ಯಡಿಯೂರಪ್ಪನವರನ್ನು ಪ್ರಚಾರಕ್ಕೆ ತಮ್ಮ ಕ್ಷೇತ್ರಕ್ಕೆ ಕರೆದೊಯ್ಯಲು ಮುಗಿಬಿದ್ದಿದ್ದಾರೆ. ಯಡಿಯೂರಪ್ಪ ಎಂಬ ಉತ್ಸವ ಮೂರ್ತಿಯನ್ನು ತಮ್ಮ ಕ್ಷೇತ್ರದಲ್ಲಿ ಸುತ್ತಾಡಿಸಿದರೆ ಮಾತ್ರ ಗೆಲುವು ಖಾಯಂ ಎಂದು ನಂಬಿರುವ ಅಭ್ಯರ್ಥಿಗಳು ಅವರ ಪ್ರವಾಸ ದಿನಾಂಕಕ್ಕೆ ಹಾತೊರೆಯುವಂತಾಗಿದೆ. ಉತ್ಸವ ಮೂರ್ತಿ ಇಲ್ಲದ ರಥ ಮುಂದೆ ಹೋಗೋದು ಎಂಬ ಚಿಂತೆಯೂ ಅವರನ್ನು ಕಾಡಲಾರಂಭಿಸಿದೆ.
ಯಡಿಯೂರಪ್ಪನವರ ಈ ರೋಲ್ಗಳನ್ನು ಕಂಡ ಬಿಜೆಪಿ ನಾಯಕರೊಬ್ಬರು ಬಹಿರಂಗವಾಗಿ ಪ್ರಸ್ತಾಪಿಸಿ ಮುಸಿ ಮುಸಿ ನಕ್ಕಿದ್ದೂ ಆಗಿದೆ.
ಚುನಾವಣೆಗೆ ಉಳಿದಿರುವುದು ಇನ್ನು 36 ದಿನ ಮಾತ್ರ. ಕ್ಷೇತ್ರ ಸುತ್ತಬೇಕಾಗಿದ್ದು 224. ಇಷ್ಟು ಅವಧಿಯಲ್ಲಿ ಅದು ಸಾಧ್ಯವೇ, ಹಾಗೆಯೇ ಚಾರ್ಮ್ ಇಲ್ಲದ ನಾಯಕರನ್ನೇ ಕಟ್ಟಿಕೊಂಡು ಕಣಕ್ಕಿಳಿದಿರುವ ಬಿಎಸ್ವೈ ಎಷ್ಟು ಯಶಸ್ಸು ಕಾಣುತ್ತಾರೆಂಬುದು ಮೇ 8ರ ನಂತರವೇ ಗೊತ್ತಾಗೋದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.