ಶಿವಮೊಗ್ಗ

ಇಂದಿನಿಂದ ಮಧು ಕುಟುಂಬ ಪ್ರಚಾರ

Published On :

ಸೊರಬ: ಜೆಡಿಎಸ್ ಪ್ರಚಾರ ತೀವ್ರಗೊಂಡಿದ್ದು, ಇಂದಿನಿಂದ ಮಧು ಬಂಗಾರಪ್ಪ ತಾಯಿ ಶಕುಂತಲಾ ಬಂಗಾರಪ್ಪ, ಸಹೋದರಿಯರಾದ ಗೀತಾ, ಸುಜಾತ, ಅನಿತ ಅವರು ಮಧು ಪರ ಹೋಬಳಿ ಮಟ್ಟದಲ್ಲಿ ಮತಯಾಚಿಸಲಿದ್ದಾರೆ ಎಂದು ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ ತಿಳಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುರುವಾರ ಬೆಳಿಗ್ಗೆ 9ಕ್ಕೆ ಜಡೆ, 11ಕ್ಕೆ ಚಂದ್ರಗುತ್ತಿ, ಮಧ್ಯಾಹ್ನ 1ಕ್ಕೆ ತಾಳಗುಪ್ಪ, 2.30ಕ್ಕೆ ಉಳವಿ, 4 ಗಂಟೆಗೆ ಕುಪ್ಪಗಡ್ಡೆ,  ಅಂತಿಮವಾಗಿ ಸಂಜೆ 5-30ಕ್ಕೆ ಆನವಟ್ಟಿಯಲ್ಲಿ ರೋಡ್ ಶೋ ಮತ್ತು ಸಭೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಮಧು ಬಂಗಾರಪ್ಪ ಕುರಿತು ಹಾಲಪ್ಪ ತೇಜೋವಧೆ ಮಾಡುತ್ತಿದ್ದು, ಅವರಿಗಾಗಲಿ, ಕುಮಾರ್ ಬಂಗಾರಪ್ಪ ಅವರಿಗಾಗಲಿ ಮಧು ಬಂಗಾರಪ್ಪ ಕುಟುಂಬದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು. ಎಂ.ಡಿ. ಶೇಖರ್, ಎನ್. ಕುಮಾರ್, ಎಂ.ಜಿ. ಶೇಠ್, ಫಯಾಜ್ ಅಹ್ಮದ್ ಇದ್ದರು.

ಅಭಿವೃದ್ಧಿ ಗುರ್ತಿಸಿ ಮತ ನೀಡಲಿದ್ದಾರೆ
ಶಿವಮೊಗ್ಗ: ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಗುರುತಿಸಿ ಹೆಚ್ಚು ಮತಗಳಿಂದ ಗೆಲ್ಲಿಸುವರು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿ. ಭಗವಾನ್ ವಿಶ್ವಾಸ ವ್ಯಕ್ತಪಡಿಸಿದರು.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಬೆಂಬಲಿಗರೊಂದಿಗೆ ಈಗಾಗಲೇ ಕ್ಷೇತ್ರದ ಎಲ್ಲಾ ಭಾಗಗಳಲ್ಲಿಯೂ ಒಂದು ಸುತ್ತಿನ ಪ್ರಚಾರ ಮುಗಿಸಿದ್ದು, ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನನ್ನ ಪ್ರಚಾರದ ಅಬ್ಬರ ರಾಷ್ಟ್ರೀಯ ಪಕ್ಷದ ಮುಖಂಡರಿಗೆ ನುಂಗಲಾರದ ತುಪ್ಪವಾಗಿದೆ ಎಂದರು.
ಅಭಿವೃದ್ಧಿ ಆಗಿಲ್ಲ: ಕಳೆದ 40 ವರ್ಷಗಳಿಂದ ಈ ಕ್ಷೇತ್ರದಿಂದ ಆಯ್ಕೆಯಾದವರು ಸಚಿವರಾಗಿ, ವಿವಿಧ ನಿಗಮಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಈ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಸರಿಯಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌ವ್ಯವಸ್ಥೆ ಇಲ್ಲ. ಈ ಭಾಗದಿಂದ ಆಯ್ಕೆಯಾದ ಕರಿಯಣ್ಣ ಮತ್ತು ಬಸವಣ್ಯಪ್ಪ ಈವರೆಗೂ ಒಂದು ಬಸ್ಸು ನಿಲ್ದಾಣ ಮಾಡಿಲ್ಲ ಎಂದು ಆರೋಪಿಸಿದರು.
ಮತದಾರರಿಗೆ ಆಮಿಷ: ರಾಷ್ಟ್ರೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇಲ್ಲಿನ ಮತದಾರರಿಗೆ ಹಣ, ಹೆಂಡ ಹಂಚುವ ಮೂಲಕ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಆದರೆ, ಚುನಾವಣಾ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಪ್ರಾಮಾಣಿಕವಾಗಿ ಪ್ರಚಾರ ಮಾಡುವ ನಮ್ಮ ಮೇಲೆ ದೂರುಗಳನ್ನು ದಾಖಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಆಸ್ಪತ್ರೆ ನಿರ್ಮಾಣ: ಈ ಬಾರಿಯ ಚುನಾವಣೆಯಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಸ್ತ್ರೀಶಕ್ತಿ ಸಂಘಗಳನ್ನು ಬಳಸಿಕೊಳ್ಳುತ್ತಿರುವುದು ದುರಂತ. ಅಲ್ಲದೇ, ಸಂಘಗಳಿಗೆ ಹಣದ ಆಮಿಷ ಒಡ್ಡಿದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದ ಭಗವಾನ್, ನಾನು ಗೆದ್ದರೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಯೋಜನೆ, ಗ್ರಾಮಾಂತರ ಸ್ಥಳಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ  ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ಮೇ 2ರಂದು ಬೆಳಿಗ್ಗೆ 9ಗಂಟೆಯಿಂದ ಸೂಳೆಬೈಲು, ಹರಿಗೆ, ಮಲವಗೊಪ್ಪ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಎಲ್ಲಾ ಬೂತ್‌ಗಳಲ್ಲಿ ರ್ಯಾಲಿ ಮೂಲಕ ಮತಯಾಚಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಭಗವಾನ್ ಅವರ ಬೆಂಬಲಿಗರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.