ಪಕ್ಷವೋ, ಸಿದ್ಧಾಂತವೋ: ಗೊಂದಲದಲ್ಲಿ ಮತದಾರ
ಕ.ಪ್ರ.ವಾರ್ತೆ,ಶಿವಮೊಗ್ಗ, ಮೇ 3
ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆಯೇ ಅಭ್ಯರ್ಥಿಗಳು ಕೊನೆ ಹಂತದ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಕತ್ತಲ ರಾತ್ರಿಯಲ್ಲಿ ದೊಂದಿ ಹತ್ತಿಸಿಕೊಂಡು ಮತ ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆಯೇ ಪ್ರಬುದ್ಧ ಮತದಾರ ಕೂಡ ಉತ್ತಮ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾನೆ.
ಉತ್ತಮ ಅಭ್ಯರ್ಥಿ, ಸಂಘಟನೆ-ಸಿದ್ಧಾಂತ, ರಾಷ್ಟ್ರೀಯತೆ ಇತ್ಯಾದಿ ಆಯ್ಕೆಗಳು ಅವರ ಮುಂದಿವೆ. ಗೊಂದಲದಲ್ಲಿ ಬಿದ್ದಿರುವ ಮತದಾರ ತನ್ನ ನಿರ್ಧಾರ ಬಿಟ್ಟುಕೊಟ್ಟಿಲ್ಲವಾದರೂ, ಸಾತ್ವಿಕ ಆಕ್ರೋಶ ಯಾವ ರೀತಿಯ ನಿರ್ಧಾರವನ್ನು ಮಾಡಿಸುತ್ತದೋ ಎಂಬುದು 8ರಂದೇ ತಿಳಿಯುತ್ತದೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣ. ಇಲ್ಲಿ ಡಿಸಿಎಂ ಹಾಗೂ ಬಿಜೆಪಿಯನ್ನು ಹಲವು ವರ್ಷ ರಾಜ್ಯದಲ್ಲಿ ಮುನ್ನೆಡೆಸಿದ್ದ ಕೆ.ಎಸ್.ಈಶ್ವರಪ್ಪ ಅಭ್ಯರ್ಥಿ. ಅವರ ವಿರುದ್ಧ ಉದ್ಯಮಿ ರುದ್ರೇಗೌಡ ಹಾಗೂ ಕಾಂಗ್ರೆಸ್ನಿಂದ ನಗರಸಭಾ ಸದಸ್ಯ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ನಿಂದ್ ಎಂ. ಶ್ರೀಕಾಂತ್ ಪ್ರಮುಖ ಅಭ್ಯರ್ಥಿಗಳು. ಇವರೊಂದಿಗೆ ಪಕ್ಷೇತರರೂ ಇದ್ದಾರೆ.
ಇವರ ಪೈಕಿ ಒಳಿತು ಮಾಡಲು ಯಾರಿಂದ ಸಾಧ್ಯವಿದೆ, ಭ್ರಷ್ಟಾಚಾರ ಮುಕ್ತ ಜನಪ್ರತಿನಿಧಿ ಯಾರಾಗಬಹುದೆಂಬ ಲೆಕ್ಕಾಚಾರವೂ ಆರಂಭವಾಗಿದೆ. ಒಂದು ಕಡೆ ಜಾತಿ ಲೆಕ್ಕಾಚಾರ ನಡೆದರೆ ಇದರ ನಡುವೆಯೇ ಇದ್ದಿದ್ದರಲ್ಲಿ ಶುದ್ಧ ಹಸ್ತರ್ಯಾರು ಎಂಬ ಚರ್ಚೆಯೂ ನಡೆದಿದೆ.
ಶಿವಮೊಗ್ಗದ ನೊಗ ಹೊರಲು ಎಂತಹ ಅಭ್ಯರ್ಥಿ ಬೇಕು, ಮತದಾರದ ನಿರೀಕ್ಷೆ ಎಂತಹದ್ದು ಎಂಬ ಪ್ರಶ್ನೆಗಳನ್ನಿಟ್ಟು ಕನ್ನಡಪ್ರಭ ವಿವಿಧ ವರ್ಗದ, ವಿವಿಧ ವಯೋವಾನದವರನ್ನು ಮಾತನಾಡಿಸಿದಾಗ ಹೊಸತನ ನಿರೀಕ್ಷಿಸುವ ಉತ್ತರಗಳು ಕೇಳಿಬಂತು.
ಸಾಮಾಜಿಕ, ದೇಶದ ಬಗ್ಗೆ ಕಾಳಜಿ ಇರುವ ಪಕ್ಷವನ್ನು ಬೆಂಬಲಿಸುವುದು ಉತ್ತಮ. ಮೌಲ್ಯಾಧಾರಿತ ಸರ್ಕಾರಗಳು ಬರಬೇಕೆಂದರೆ ಸಮಾಜದ ಮತ್ತು ದೇಶದ ಅಭಿವೃದ್ಧಿಗಳ ಬಗ್ಗೆ ಶ್ರಮಿಸುವ ಪಕ್ಷದ ಅಭ್ಯರ್ಥಿಗಳನ್ನು ಕಡ್ಡಾಯ ಮತದಾನದ ಮೂಲಕ ಆಯ್ಕೆ ಮಾಡುವುದು ಸೂಕ್ತ.
-ಎನ್.ಬಿ. ರವೀಶ್, ನ್ಯಾಯವಾದಿ, ಆಡಿಟರ್
ಅಭಿವೃದ್ಧಿ ಬಗ್ಗೆ ಪ್ರಾಮಾಣಿಕ ನಿಲುವು ಹೊಂದಿರುವಂತಹ ಅಭ್ಯರ್ಥಿ, ಜೊತೆಗೆ ಆ ಅಭ್ಯರ್ಥಿಯ ಪಕ್ಷ ಸ್ವತಂತ್ರವಾಗಿ ಸ್ಥಿರ ಸರ್ಕಾರ ರಚಿಸುವ ಸಾಮರ್ಥ್ಯವನ್ನು ಹೊಂದುವ ಪಕ್ಷವನ್ನು ಪ್ರತಿನಿಧಿಸಬೇಕು.
-ಕೆ.ವಿ. ವಸಂತ ಕುಮಾರ್, ಸಾಮಾಜಿಕ ಹೋರಾಟಗಾರ, ನಾಗರಿಕ ಹಿತರಕ್ಷಣಾ ವೇದಿಕೆ
ಶಿವಮೊಗ್ಗವನ್ನು ಸ್ವರ್ಗ ಮಾಡದಿದ್ದರೂ ಪರವಾಗಿಲ್ಲ ನರಕವಾಗದಂತೆ ನೋಡಿಕೊಳ್ಳಬೇಕು. ದೇಶದ ಭದ್ರತೆ ಹಿನ್ನೆಲೆ ಮುಖ್ಯವಾಗಿರಬೇಕು. ಅಭಿವೃದ್ಧಿಯೆಂದರೆ ಸರ್ಕಾರಿ ಕಚೇರಿ, ಕೈಗಾರಿಕ ಘಟಕ, ವಿದ್ಯಾಸಂಸ್ಥೆ ಸ್ಥಾಪನೆಯಲ್ಲ,ಹಸಿರು ಕ್ರಾಂತಿ, ಜಲಕ್ರಾಂತಿ ಮಾಡುವಂತಹ ಧೀಮಂತರು ಶಾಸಕರಾಗಬೇಕು.
-ಅ.ನಾ.ವಿಜಯೇಂದ್ರ ರಾವ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ
ಶಿವಮೊಗ್ಗವನ್ನು ಮುನ್ನೆಡೆಸಲು ಹೊಸ ಚಿಂತನೆಗಳು ಬೇಕು. ಯಾವ ಪಕ್ಷವಾದರೂ ಆಗಲಿ, ಅವಕಾಶ ಕೊಡುವುದು ಮುಖ್ಯ. ಹೊಸ ಹೊಸ ಚಿಂತನೆಗೆ ಅವಕಾಶ ಕೊಟ್ಟಂತಾಗುತ್ತದೆ. ಇಲ್ಲವಾದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ದ್ವಿಗುಣವಾಗುತ್ತದೆ ಅಷ್ಟೆ.
-ಶ್ಯಾಂ, ವಿದ್ಯಾರ್ಥಿ
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

