ಭಿಕ್ಷುಕರೂ ಮತ 'ದಾನ' ಮಾಡಿದರು
ಕ.ಪ್ರ. ವಾರ್ತೆ ಶಿವಮೊಗ್ಗ ಮೇ 5
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಬೇಕು. ಅದಕ್ಕಾಗಿ ಕಡ್ಡಾಯವಾಗಿ ಮತ ಹಾಕಬೇಕು. ಈ ಹಿಂದೆ ಭಿಕ್ಷುಕರು ಎಂದು ನಮ್ಮನ್ನೆಲ್ಲಾ ಕಡೆಗಣಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ನಮಗೂ ಮತದಾನ ಮಾಡಲು ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ...
ಇದು ತ್ಯಾವರೆಕೊಪ್ಪದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯಿಸಿರುವ ಭಿಕ್ಷುಕ ಕುಲಕರ್ಣಿ ಅವರ ಮನದಾಳದ ಮಾತು.
ಸಮಾಜ ಕಲ್ಯಾಣ ಸಮಿತಿ ನಡೆಸುತ್ತಿರುವ ಪುನರ್ವಸತಿ ಕೇಂದ್ರದಲ್ಲಿರುವ ಭಿಕ್ಷುಕರಿಗೆ ಮತದಾನದ ಹಕ್ಕು ದೊರಕಿಸಲು ಅಪ್ನಾದೇಶ್ ಅಸೋಸಿಯೇಷನ್ ಸಂಸ್ಥೆ ಪ್ರಯತ್ನಿಸಿತ್ತು. ಈಗ ಈ ಕೇಂದ್ರದಲ್ಲಿರುವ 84 ನಿರಾಶ್ರಿತರ ಪೈಕಿ 81 ಭಿಕ್ಷುಕರಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಉಳಿದ ಮೂವರ ಮೂಲ ದಾಖಲೆಗಳು ಹಾಗೂ ಅವರ ಪೋಷಕರ ಮಾಹಿತಿ ಲಭ್ಯ ಇಲ್ಲದಿದ್ದರಿಂದ ಅವರನ್ನು ತಿರಸ್ಕರಿಸಿದ್ದಾರೆ.
ಇದೇ ಮೊದಲು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗದ 81 ಭಿಕ್ಷುಕರಿಗೆ ಮತದಾನದ ಹಕ್ಕು ಸಿಕ್ಕಿದ್ದು, ಭಾನುವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ವಿರುಪಿನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ ಸಂಖ್ಯೆ-145ರಲ್ಲಿ ಹಕ್ಕು ಚಲಾಯಿಸುವ ಮೂಲಕ ಸಂಭ್ರಮಿಸಿದರು.
ಕಳೆದ ಆರು ತಿಂಗಳಿಂದ ಕೇಂದ್ರದಲ್ಲಿ ವಾಸಿಸುತ್ತಿರುವ ಭಿಕ್ಷುಕರಿಗೆ ಮತದಾನದ ಹಕ್ಕು ಕೊಡಿಸಬೇಕು ಎಂದು ಪಣ ತೊಟ್ಟಿದ್ದ ಅಪ್ನಾದೇಶ್ ಅಸೋಸಿಯೇಷನ್ ಅಂದಿನಿಂದಲೇ ಪ್ರಯತ್ನಿಸಿತ್ತು. ಜೊತೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕ್ರೋಡೀಕರಿಸಿ, ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಭಿಕ್ಷುಕರಿಗೆ ಮತದಾನ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿತ್ತು.
ಡಿಸಿ ಸಹಕಾರ: ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಅಧಿಕಾರಿಗಳಿಗೆ ಭಿಕ್ಷುಕರ ಮೂಲ ದಾಖಲೆಗಳನ್ನು ಪರಿಶೀಲಿಸಿ ಮತದಾನ ಮಾಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಚುನಾವಣಾ ಆಯೋಗ ಮತಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಆಹ್ವಾನಿಸುತ್ತಿದ್ದಂತೆಯೇ, ಈ ಭಿಕ್ಷುಕರ ಅರ್ಜಿಗಳನ್ನು ಸ್ವೀಕರಿಸಿ, ಭಿಕ್ಷುಕರ ಬಗ್ಗೆ ನೀಡಿದ ಎಲ್ಲಾ ದಾಖಲೆಗಳು ಸರಿಯಾಗಿದ್ದರಿಂದಾಗಿ ಅವರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಈವರೆಗೂ ಯಾವುದೇ ದಾಖಲೆಗಳೂ ಇಲ್ಲದಿದ್ದ ಭಿಕ್ಷುಕರಿಗೆ ಈ ಮೂಲಕ ಭಾವಚಿತ್ರ ಸಹಿತ ಚುನಾವಣಾ ಗುರುತು ಚೀಟಿ ವಿತರಿಸಿದ್ದಾರೆ.
ಈ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅಪ್ನಾದೇಶ್ ಅಸೋಸಿಯೇಷನ್ ಸಂಚಾಲಕ ಸಿ.ಎಂ. ರಮೇಶ್, ಈಗ ಭಿಕ್ಷುಕರಿಗೆ ಮತದಾನದ ಹಕ್ಕು ಕೊಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಕೊಡಿಸುವ ಗುರಿ ಹೊಂದಲಾಗಿದೆ. ಜೊತೆಗೆ ಅವರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಸ್ವತಂತ್ರ ಜೀವನ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದರು.
- ಮೋಹನ್ ಕುಮಾರ್ ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

