ಶಿವಮೊಗ್ಗ

ಎಲ್ಲ ಮಕ್ಕಳಿಗೂ 'ಪ್ರೇರಣೆ'

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಮೇ 6
ತಂದೆ ಪಿಗ್ಮಿ ಸಂಗ್ರಾಹಕರು. ತಾಯಿ ಅಡಕೆ ಮಂಡಿಯಲ್ಲಿ ರೈಟರ್. ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ದ್ವಿತೀಯ!
ನಗರದ ಆದಿಚುಂಚನಗಿರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರೇರಣಾ ಎಂ.ಆರ್. ಸಾಧನೆ ಇದು. 625 ಅಂಕಕ್ಕೆ 621 ಅಂಕ ಪಡೆದಿರುವ ಪ್ರೇರಣಾ ಈಗ ಜಿಲ್ಲೆಯ ಉಳಿದ ವಿದ್ಯಾರ್ಥಿಗಳಿಗೂ ಪ್ರೇರಣೆ.
ಶಿವಮೊಗ್ಗದವರೇ ಆದ ರವೀಂದ್ರನಾಥ್, ವನಮಾಲ ದಂಪತಿ ಪುತ್ರಿಯಾದ ಪ್ರೇರಣಾ ಪ್ರತಿ ವರ್ಷ ತರಗತಿಯಲ್ಲಿ ಪ್ರಥಮ ಸ್ಥಾನದಲ್ಲೇ ಇರುತ್ತಿದ್ದಳು. ಈ ಬಾರಿ ಆಕೆಯ ಗುರಿ 100ಕ್ಕೆ 100 ಅಂಕ ಪಡೆಯುವುದಾಗಿತ್ತು. ಪರೀಕ್ಷೆ ಮುಗಿದ ನಂತರ ಆಕೆ ನನಗಿನ್ನು ಸಿಗುವುದು 615 ಅಂಕಗಳಷ್ಟೇ ಎಂದುಕೊಂಡಿದ್ದಳು. ಆದರೆ, 621 ಅಂಕದೊಂದಿಗೆ ರಾಜ್ಯಕ್ಕೇ ದ್ವಿತೀಯ ಸ್ಥಾನ ಗಳಿಸಿದ್ದಾಳೆ.
ಬೆಂಗಳೂರಿನಲ್ಲಿರುವ ಆಕೆಗೆ ತಂದೆ ರವೀಂದ್ರನಾಥ್ ಸೋಮವಾರ ಬೆಳಗ್ಗೆ ದೂರವಾಣಿ ಮೂಲಕ ಈ ವಿಷಯ ತಿಳಿಸಿದಾಗ ಪ್ರೇರಣಾ ನಂಬಲೇ ಇಲ್ಲ. ಟೀವಿ ಹಾಕಿ ಸುದ್ದಿವಾಹಿನಿಯನ್ನು ನೋಡಿದಾಗ ಅದರಲ್ಲೂ ಅದೇ ವಿಷಯ ಬರುತ್ತಿದ್ದುದನ್ನು ಕಂಡು ಸಂತಸಗೊಂಡಿದ್ದಳು.
ದಿನಕ್ಕೆ 4 ಗಂಟೆ ಓದು: ಪ್ರೇರಣಾ ದಿನಕ್ಕೆ 4 ಗಂಟೆ ಓದುತ್ತಿದ್ದಳು. ಸಂಜೆ 3 ಗಂಟೆ ಓದಿದರೆ, ಬೆಳಿಗ್ಗೆ ವಿಶೇಷ ತರಗತಿಗೆ ಹೋಗುವ ಮೊದಲು 1 ಗಂಟೆ ಓದುತ್ತಿದ್ದಳು. ಸತತ ಪರಿಶ್ರಮ ಫಲ ನೀಡಿದೆ ಎನ್ನುತ್ತಾರೆ ತಂದೆ ರವೀಂದ್ರನಾಥ್.
ತಾಯಿ ವನಮಾಲ ಹೇಳುವಂತೆ, ಪ್ರೇರಣಾಗೆ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ. ಅದನ್ನು ಶಿಕ್ಷಕರೂ ಮೆಚ್ಚಿಕೊಂಡಿದ್ದಾರೆ. ಅಲ್ಲದೇ ನೃತ್ಯ, ಸಂಗೀತದಲ್ಲಿಯೂ ಆಸಕ್ತಿ ಇದೆ. ಶಾಲೆಯ ಸಾಂಸ್ಕೃತಿಕ ಚಟುವಟಿಕೆಯಲ್ಲೂ ನಿರಂತರ ಭಾಗವಹಿಸುತ್ತಿದ್ದಳು.
ಅಂದಹಾಗೆ ಪ್ರೇರಣಾಗೆ ಕನ್ನಡ ಹಾಗೂ ಸಮಾಜ ಶಾಸ್ತ್ರದಲ್ಲಿ ತಲಾ 1 ಅಂಕ ಹಾಗೂ ವಿಜ್ಞಾನದಲ್ಲಿ 2 ಅಂಕ ಮಾತ್ರ ಕಡಿಮೆ ಬಂದಿದೆ. ಉಳಿದಂತೆ ಸಂಸ್ಕೃತ, ಇಂಗ್ಲೀಷ್ ಬಾಹೂ ಗಣಿತ ಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಬಂದಿದೆ. ಹಾಗಾಗಿಯೇ ಪ್ರೇರಣಾ ವಿಜ್ಞಾನ ಪ್ರಶ್ನೆ ಪತ್ರಿಕೆ ಕಷ್ಟ ಇತ್ತು. ಪ್ರಶ್ನೆಗಳನ್ನು ಟ್ವಿಸ್ಟ್ ಮಾಡಿ ಕೇಳಿದ್ದರು. ಹಾಗಾಗಿ ಕಡಿಮೆ ಅಂಕ ಬಂದಿವೆ ಎನ್ನುತ್ತಾಳೆ.
ಶಾಲೆಯ ಶಿಕ್ಷಕರು, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಶಾಲೆಯ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಶ್ರೀ ಪ್ರಸನ್ನನಾಥ ಸ್ವಾಮೀಜಿ, ನಮ್ಮ ಶಾಲೆಯ ಮಕ್ಕಳು ಎಲ್ಲಿಯೂ ಟ್ಯೂಷನ್‌ಗೆ ಹೋಗಬಾರದು ಎಂಬುದು ನಮ್ಮ ಉದ್ದೇಶ. ಹಾಗಾಗಿಯೇ ನಾವು ಶಾಲೆಯಲ್ಲಿಯೇ ವಿಶೇಷ ತರಗತಿ ನಡೆಸುತ್ತೇವೆ. ಒಂದೇ ಪಾಠವನ್ನು ಎರಡು ಸಾರಿ ಕೇಳುವ ಬದಲು ಒಂದೇ ಬಾರಿ ಪಾಠ ಕೇಳಿ, ನಂತರ ಉಂಟಾಗುವ ಅನುಮಾನಗಳ ಪರಿಹಾರಕ್ಕೆ ಇನ್ನೊಂದು ತರಗತಿ ಮಾಡಿದರೆ ಸಾಕು ಎಂಬುದು ನಮ್ಮ ಇಂಗಿತ ಎನ್ನುತ್ತಾರೆ.
ಶಾಲೆಯ ಶಿಕ್ಷಕರು, ಪ್ರತಿ ಭಾನುವಾರ ಶಾಲೆಯಲ್ಲಿ ಒಂದೊಂದು ವಿಷಯದ ಬಗ್ಗೆ ಪರೀಕ್ಷೆ ನಡೆಸುತ್ತೇವೆ. ಹಾಗಾಗಿ ಮಕ್ಕಳಿಗೆ ಪರೀಕ್ಷೆ ಭಯ ಕಡಿಮೆ. ಅವರು ಉತ್ಸಾಹದಿಂದ ಭಾಗವಹಿಸುತ್ತಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.