ಕಾಂಗ್ರೆಸ್ಸಿಗರೇ ಬೀಗಬೇಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 9
ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ಮೂರು ಶಾಸಕರನ್ನು ವಿಧಾನಸಭೆಗೆ ಕಳಿಸಿ ಭಾರಿ ಸಾಧನೆ ಮಾಡಿದ್ದೇವೆಂದು ಬೀಗುವಂತಿಲ್ಲ. ಏಕೆಂದರೆ ಮತದಾರರ ಒಲವು ಹಿಂದೆಂದಿಗಿಂತಲೂ ಈ ಬಾರಿ ಕಡಿಮೆಯಾಗಿದೆ. 2008 ಹಾಗೂ ಈ ಸಲದ ಚುನಾವಣೆಯ ಲೆಕ್ಕಾಚಾರವು ಈ ಕತೆಯನ್ನೇ ಹೇಳುತ್ತಿವೆ. ಈ ವಾದವನ್ನು ಪುಷ್ಟೀಕರಿಸುವ ಈ ಕೆಳಗಿನ ಅಂಶವನ್ನು ಗಮನಿಸಿ.
- 2008ರ ಚುನಾವಣೆಗಿಂತ ಈ ಬಾರಿ ಕಾಂಗ್ರೆಸ್ನ ಶೇಕಡವಾರು ಮತಪ್ರಮಾಣ ಕಡಿಮೆಯಾಗಿದೆ.
- 2013ರ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷಕ್ಕಿಂತ ಕಡಿಮೆ ಮತಗಳನ್ನು ಈ ಪಕ್ಷ ಪಡೆದಿದೆ.
ಭಾರಿ ಸಂಭ್ರಮದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರ ಒಲವು ಕಡಿಮೆಯಾಗುತ್ತಿರುವುದನ್ನು ಎಚ್ಚರಿಕೆ ಗಂಟೆಯಾಗಿದೆ.
ಬೀಗಬೇಡಿ: 2008ರ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ಕಾಂಗ್ರೆಸ್ ಪಕ್ಷವು ಶೇಕಡ 30.09ರಷ್ಟು ಮತ ಪಡೆದಿತ್ತು. ಶಿಕಾರಿಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಸಾರೇಕೊಪ್ಪ ಬಂಗಾರಪ್ಪ ಅವರನ್ನು ಬೆಂಬಲಿಸಿತ್ತು. ಬಂಗಾರಪ್ಪ ಅವರು ಪಡೆದಿದ್ದ ಶೇಕಡ 4.38ರಷ್ಟು ಮತಗಳನ್ನೂ ಕಾಂಗ್ರೆಸ್ ಪಕ್ಕಕ್ಕೆ ಸೇರಿಸಿದರೆ ಇನ್ನೂ ಹೆಚ್ಚಾಗುತ್ತದೆ.
ಆದರೆ, 2008ರ ಚುನಾವಣೆಗಿಂತ ವಾಸ್ತವವಾಗಿ ಗಳಿಸಿದ ಮತಗಳಿಗಿಂತ ಈ ಬಾರಿ ಶೇ 1ರಷ್ಟು ಕಡಿಮೆ ಮತಗಳನ್ನು ಕಾಂಗ್ರೆಸ್ ಪಡೆದಿದೆ.
ಕೆಜೆಪಿಗೆ ಬಲ: 2008ರ ಚುನಾವಣೆ ಚಿತ್ರಣದಲ್ಲಿಯೇ ಇರದ ಕರ್ನಾಟಕ ಜನತಾ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಗಿಂತ ಶೇಕಡಾವಾರು ಹೆಚ್ಚು ಮತಗಳನ್ನು ಪಡೆದಿದೆ. ಅವರ ಪ್ರಭಾವ ಜಿಲ್ಲೆಯ ಮೇಲೆ ಇನ್ನೂ ಇದೆ ಎಂಬುದನ್ನು ಈ ಅಂಶ ಹೇಳುತ್ತಿದೆ. ಈ ಪಕ್ಷದಿಂದ ಗೆದ್ದಿರುವುದು ಯಡಿಯೂರಪ್ಪ ಮಾತ್ರ. ಉಳಿದ ಎಲ್ಲೆಡೆ ಎರಡನೇ ಸ್ಥಾನ ಪಡೆದಿತ್ತು. ಮತಗಳಿಕೆಯಲ್ಲಿ ಮಾತ್ರ ಪ್ರಥಮ ಸ್ಥಾನದಲ್ಲಿದೆ. ಕಾಂಗ್ರೆಸ್ಗಿಂತ ಹೆಚ್ಚು ಮತದಾರರ ಒಲವು ಕೆಜೆಪಿಯತ್ತ ಇದೆ.
ದುರ್ಬಲ ಬಿಜೆಪಿ: ವಚನ ಭ್ರಷ್ಟತೆಯ ಅಸ್ತ್ರವನ್ನು ಇಟ್ಟುಕೊಂಡು 2008ರ ಚುನಾವಣೆ ಎದುರಿಸಿದ್ದ ಬಿಜೆಪಿಯು ಐವರು ಶಾಸಕರನ್ನು ಜಿಲ್ಲೆಯಿಂದ ವಿಧಾನಸಭೆಗೆ ಕಳುಹಿಸಿತ್ತು. ಭಾರಿ ಜನಬೆಂಬಲವನ್ನೂ ಪಡೆದಿತ್ತು. ಈ ಬಾರಿ ಬಿಜೆಪಿಯದ್ದು ಹೀನಾಯ ಸಾಧನೆ. ಶೇ. 34ರಷ್ಟು ಕಡಿಮೆ ಮತಗಳನ್ನು ಪಡೆದಿದೆ.
ವಾದಕ್ಕಾಗಿ ಈ ಬಾರಿ ಕೆಜೆಪಿ ಹಾಗೂ ಬಿಜೆಪಿ ನಡುವೆ ಮತ ವಿಭಜನೆಯಾಗಿದೆ ಎಂದಿಟ್ಟುಕೊಂಡರೂ 2013ರ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟು ಗಳಿಸಿದ ಮತಗಳು 2008ರ ಚುನಾವಣೆಗಿಂತ ಈ ಬಾರಿ ಶೇ.4ರಷ್ಟು ಕಡಿಮೆಯೇ.
ಜೆಡಿಎಸ್ಗೆ ಬಲ: ಈ ಬಾರಿಯ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ತೋರಿಸಿರುವುದು ಜಾತ್ಯತೀತ ಜನತಾದಳ. 2008ರಲ್ಲಿ ಪಡೆದ ಮತಗಳು ಈ ಬಾರಿ ಎರಡು ಪಟ್ಟಿಗಿಂತ ಹೆಚ್ಚಾಗಿವೆ. ಆದರೆ, ಮೂವರು ಶಾಸಕರನ್ನು ಕಳಿಸಿದ ಸ್ವಲ್ಪ ಕಾಂಗ್ರೆಸ್ಗಿಂತ ಶೇ.2ರಷ್ಟು ಕಡಿಮೆ. ಜನತಾ ಪರಿವಾರದ ವೈಭವದ ದಿನಗಳತ್ತ ಜೆಡಿಎಸ್ ಸಾಗುತ್ತಿರುವುದನ್ನು ಈ ಲೆಕ್ಕಾಚಾರ ತೋರಿಸುತ್ತಿದೆ.
20ರಿಂದ ಮಕ್ಕಳಿಗೆ ಬೇಸಿಗೆ ಶಿಬಿರ
ಶಿವಮೊಗ್ಗ: ಶಿಶು ಅಭಿವೃದ್ಧಿ ಯೋಜನೆ ಹಾಗೂ ತಾಲೂಕು ಬಾಲಭವನ ಸೊಸೈಟಿ ವತಿಯಿಂದ 5 ರಿಂದ 16 ವರ್ಷದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. 6, 7, ಹಾಗೂ 8ನೇ ತರಗತಿಯಲ್ಲಿ ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಮೇ 20ರಿಂದ 29ರವರೆಗೆ 10 ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಸಿಎಂ ಹಾಸ್ಟೆಲ್ ಪಕ್ಕ, ಆಯನೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದ ಮಕ್ಕಳಿಗೆ ಯೋಗ, ಧ್ಯಾನ, ಸಾಮೂಹಿಕ ಗೀತೆ, ಚಿತ್ರಕಲೆ, ಕರಕುಶಲ ಕಲೆಗಳು, ಸಮೂಹ ನೃತ್ಯಗಳಲ್ಲಿ ಆಸಕ್ತಿ ಇರುವ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ರಾಧಮ್ಮ, ಅಂಗನವಾಡಿ ಕಾರ್ಯಕರ್ತೆ, ಸಂತೆ ಮೈದಾನ, ಆಯನೂರು (ಮೊ-8105978541) ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೂರ್ತಿ ಪ್ಯಾರಡೈಸ್, 2ನೇ ಮಹಡಿ, 60 ಅಡಿ ರಸ್ತೆ, ವಿನೋಬನಗರ, ಶಿವಮೊಗ್ಗ ಇಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಿದೆ. ದೂ.ಸಂ.- 255139.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

