ಶಿವಮೊಗ್ಗ

ದೇವಾಲಯದಿಂದ ಯಕ್ಷಗಾನ ರಕ್ಷಣೆ

Published On :

ಕ.ಪ್ರ.ವಾರ್ತ, ಶಿವಮೊಗ್ಗ, ಮೇ 12
ಇಂದು ಯಕ್ಷಗಾನ ಈ ಮಣ್ಣಿನಲ್ಲಿ ಗಟ್ಟಿಯಾಗಿ ಬೇರೂರಲು ಅದಕ್ಕೆ ದೊರೆತಿರುವ ಪೋಷಣೆಯೇ ಪ್ರಮುಖ ಕಾರಣ. ಮುಖ್ಯವಾಗಿ ನಾಡಿನ ಬಹುತೇಕ ದೇವಾಲಯಗಳು ಯಕ್ಷಗಾನ ಕಲೆಯನ್ನು ಸಮರ್ಥವಾಗಿ ಪೋಷಿಸುತ್ತಿವೆ ಎಂದು ಗಾಯಕ ಗರ್ತಿಕೆರೆ ರಾಘಣ್ಣ ಹೇಳಿದರು.
ಶಿವಮೊಗ್ಗದ ಸಹ್ಯಾದ್ರಿ ರಂಗತರಂಗ, ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಕಮಲಾ ನೆಹರೂ ಕಾಲೇಜಿನಲ್ಲಿ ಆಯೋಜಿಸಿದ್ದ 2 ದಿನಗಳ ರಂಗ ಗೀತೆಗಳ ಕಲಿಕಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಶ್ರಯದಲ್ಲಿ 5 ಯಕ್ಷ ಮೇಳಗಳಿವೆ. ಇದರಲ್ಲಿ ನೂರಾರು ಮಂದಿ ಕಲಾವಿದರು ವರ್ಷದ 6 ತಿಂಗಳ ಕಾಲ ತಮ್ಮ ಜೀವನ  ಪೋಷಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.ೆ
ಪ್ರೋತ್ಸಾಹ: ಇದು ಮಾತ್ರವಲ್ಲದೇ ಧರ್ಮಸ್ಥಳ, ಹಾಲಾಡಿ, ಸಾಲಿಗ್ರಾಮ, ಮಂದರ್ತಿ, ಕಮಲಶಿಲೆ, ಕೊಲ್ಲೂರು  ಹೀಗೆ ಹಲವು ದೇವಾಲಯಗಳು ಯಕ್ಷ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಆದರೆ ರಂಗಭೂಮಿಯ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಕಡಿಮೆಯಾಗಿದೆ. ಹೀಗಾಗಿ ರಂಗ ಕಲೆ ನಿರ್ಜೀವವಾಗಿದೆಯೇನೋ ಎಂಬ ಭಾವನೆ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯಕ್ಷಗಾನಕ್ಕೆ ಸಿಗುತ್ತಿರುವಷ್ಟು ಪ್ರಾಮುಖ್ಯತೆ ರಂಗಭೂಮಿಗೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ರಂಗಭೂಮಿಯ ಎಲ್ಲಾ ಪ್ರಾಕಾರಗಳನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಿರುವುದು ಮರಾಠಿ ರಂಗಭೂಮಿಯ ಸಂಪರ್ಕದಿಂದ. ಮರಾಠಿ ರಂಗಭೂಮಿಯ ಪ್ರಭಾವ ಧಾರವಾಡ- ಹುಬ್ಬಳ್ಳಿಯ ರಂಗ ಕಲಾವಿದರ ಮೇಲೆ ಸಾಕಷ್ಟಿದೆ. ಹೀಗೆ ಧಾರವಾಡ-ಹುಬ್ಬಳಿ ಹಾಗೂ ಶಿವಮೊಗ್ಗದ ನಂಟು ಇರುವುದರಿಂದ ಇಲ್ಲಿಯೂ ರಂಗಭೂಮಿ ತಕ್ಕಮಟ್ಟಿಗೆ ಅಸ್ತಿತ್ವ ಉಳಿಸಿಕೊಂಡಿದೆ ಎಂದರು.
ಸೆಳೆಯುವ ಶಕ್ತಿ: ರಂಗಗೀತೆಗಳಿಗೆ ಎಲ್ಲರನ್ನೂ ಸೆಳೆಯುವ ಶಕ್ತಿ ಇದೆ. ರಾಮಲಿಂಗಾಚಾರ್ ರಂಗಗೀತೆಗಳಿಗೆ ನೀಡಿದ ಕೊಡುಗೆ ಅನನ್ಯ. ಅವರು ಯಾವುದಾದರೂ ಕಾರ್ಯಕ್ರಮದಲ್ಲಿ ರಂಗಗೀತೆ ಹಾಡಿದರೆಂದರೆ ಕಾರ್ಯಕ್ರಮದ ಕೇಂದ್ರ ಬಿಂದು ಅವರೇ ಆಗಿ ಬಿಡುತ್ತಿದ್ದರು. ಅಷ್ಟರ ಮಟ್ಟಿಗೆ ರಾಮಲಿಂಗಾಚಾರ್ ರಂಗಗೀತೆಯ ಮೇಲೆ ಹಿಡಿತ ಸಾಧಿಸಿದ್ದರು ಎಂದರು.
2 ದಿನಗಳ ರಂಗಗೀತೆ ಶಿಬಿರದಲ್ಲಿ ಹಿಂದೂಸ್ತಾನಿ ಗಾಯಕ ಬಸವಲಿಂಗಯ್ಯ ಹಿರೇಮಠ್, ನವಿಲೇಶ್, ಗಾಯಕ ಯುವರಾಜ್ ಶಿಬಿರಾರ್ಥಿಯಾಗಿ ಭಾಗವಹಿಸಿದ್ದರು. ಎನ್‌ಇಎಸ್ ಕಾರ್ಯದರ್ಶಿ  ತಿಮ್ಮಯ್ಯ, ಸಹ್ಯಾದ್ರಿ ರಂಗ ತರಂಗದ ಕಾಂತೇಶ್ ಕದರಮಂಡಲಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.