ಶಿವಮೊಗ್ಗ

ಕಾರು ತಯಾರಿಸಿದ ವಿದ್ಯಾರ್ಥಿಗಳು

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಮೇ 14
ನಗರದ ಜವಾಹರಲಾಲ್ ನೆಹರೂ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ವಿಭಿನ್ನ ಶೈಲಿಯ ಕಾರುಗಳನ್ನು ಸಿದ್ಧಪಡಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಕಾಲೇಜಿನ ಅನನ್ಯ ಮಂಟಪದ ಅಂಗಳದಲ್ಲಿ ವಿದ್ಯಾರ್ಥಿಗಳ ತಂಡ ತಾವು ರೂಪಿಸಿದ ಕಾರುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಪ್ರಾಂಶುಪಾಲ ಪ್ರೊ. ಶ್ರೀನಿವಾಸ ರಾವ್ ಕಂಠೆಯವರು ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿವಿಧ ಮಾದರಿಯ ಕಾರುಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕಾಲೇಜಿನ ವಿದ್ಯಾರ್ಥಿಗಳು ವಾರ್ಷಿಕ ಪ್ರಾಜೆಕ್ಟ್ ಅಡಿಯಲ್ಲಿ ಮೋಟೊ ಕ್ಲಬ್ ರಚಿಸಿಕೊಂಡು ಬಗೆ ಬಗೆಯ ಶೈಲಿಯ ಕಾರುಗಳನ್ನು ಸಿದ್ಧಪಡಿಸಿದ್ದಾರೆ.
6 ತಂಡ: ಈ ಕ್ಲಬ್‌ನಲ್ಲಿ 72 ವಿದ್ಯಾರ್ಥಿಗಳಿದ್ದು ತಲಾ 12 ಜನರಂತೆ ಆರು ತಂಡ ರಚಿಸಿಕೊಂಡಿದ್ದರು. ಈ ತಂಡಗಳಿಗೆ ಮ್ಯಾಕ್ ಬ್ರೆ ಗೇಡ್, ರೋಲ್ ಕೇಜ್, ಹೊಯ್ಸಳ ಮೆಕ್-03,  ಟಾರ್ಕ್ ಎಫ್-12, ದಿ ಅನಿಮ್‌ಪೆಡರ್ಸ್, ಪ್ಯಾಂಥರ್ಸ್, ಮೆಕ್ ಒನ್ ಬ್ರಿಡ್ಜ್ ಸ್ಲೇವ್ ತ್ರಿಚಕ್ರ ಎಂಬ ಹೆಸರಿಸಲಾಗಿತ್ತು.
 ಅಕ್ಷತ್, ಮಾಲತೇಶ್, ಸುಮುಖ ಭಟ್, ಶ್ರೇಯಸ್, ಗುಜ್ಜರ್, ಶ್ರೀಶ ಶೆಣೈ ಈ ತಂಡಗಳ ನೇತೃತ್ವ ವಹಿಸಿದ್ದರು. ಆಯಾ ತಂಡಗಳು ತಯಾರಿಸಿದ ಕಾರಿಗೆ ತಮ್ಮ ತಂಡದ ಹೆಸರಿನ್ನಿಟ್ಟಿದ್ದರು.  
ಪ್ರತಿ ಕಾರಿನ ತಯಾರಿಕೆಗೆ ಸರಿ ಸುಮಾರು ರು. 40ರಿಂದ 50 ಸಾವಿರ ವೆಚ್ಚ ತಗುಲಿದೆ. ಸ್ಲೇವ್ಸ್ ತಂಡದಿಂದ ನಿರ್ಮಾಣವಾದ ಮೂರು ಚಕ್ರದ ರಿವರ್ಸ್ ಟ್ರೈಟ್ ಕಾರು ಗಮನ ಸೆಳೆಯುತ್ತಿದೆ. ಮುಂಭಾಗ ಎರಡು 2 ಹಾಗೂ ಹಿಂಬದಿಯಲ್ಲಿ ಒಂದು ಚಕ್ರ ಹೊಂದಿರುವ ಈ ಕಾರು ಗಂಟೆಗೆ 50 ಕಿಮೀ ವೇಗದಲ್ಲಿ ಚಲಿಸುತ್ತದೆ. ಅಧಿಕ ಭಾರ ಹೊರಬಲ್ಲ ಈ ಕಾರನ್ನು ಗೇರ್ ಇಲ್ಲದೆ ಚಲಾಯಿಸುವುದು ವಿಶೇಷ.
ಉಳಿದ ಕಾರುಗಳು 4 ಚಕ್ರದಾಗಿದ್ದು, ಕಡಿಮೆ ಎತ್ತರ, ಅಧಿಕ ಸಾಮರ್ಥ, ಇಂಧನ ಉಳಿತಾಯದ ಕ್ಷಮತೆ ಹೊಂದಿದೆ. ವಿದ್ಯಾರ್ಥಿಗಳು ತಮ್ಮದೇ ಆದ ಆಟೋ ತಂತ್ರಜ್ಞಾನ ಬಳಸಿ ಈ ವಿಶಿಷ್ಟ ಕಾರನ್ನು ರೂಪಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿರುವ ಕಾಲೇಜು ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.