ಶಿವಮೊಗ್ಗ

ಕೃಷಿ ಪ್ರವೇಶ ಓಕೆ, ಪ್ರಾಯೋಗಿಕ ಪರೀಕ್ಷೆ ಏಕೆ?

Published On :

ಕ.ಪ್ರ. ವಾರ್ತೆ ,   ಶಿವಮೊಗ್ಗ ,   ಮೇ 15-
'ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಪದವಿ ಪಡೆಯಲು ಕಾಟಾಚಾರದ ಪ್ರಾಯೋಗಿಕ ಪರೀಕ್ಷೆ ಬೇಕೇ?'
ಈ ರೀತಿಯ ಪ್ರಶ್ನೆ ಕೃಷಿ ತಜ್ಞರ ನಡುವೆ ಹಲವು ವರ್ಷಗಳಿಂದ ಚರ್ಚೆಯಾಗುತ್ತಿವೆ. ಅದೀಗ ನಿರ್ದಿಷ್ಟ ಸ್ವರೂಪ ಪಡೆಯುತ್ತಿದ್ದು, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಇಂಥ ಪ್ರಾಯೋಗಿಕ ಪರೀಕ್ಷೆ ಬೇಡವೆಂದು ರಾಜ್ಯ ಸರ್ಕಾರಕ್ಕೆ ತಿಳಿಸಲು ಮುಂದಾಗಿದ್ದು, ಉಳಿದ ವಿವಿಗಳೂ ಇದೇ ದಾರಿಯಲ್ಲಿ ನಡೆಯಲು ಚಿಂತಿಸುತ್ತಿವೆ.
ಈ ಮೊದಲೂ ರಾಜ್ಯದ ಎಲ್ಲ ಕೃಷಿ ಕಾಲೇಜುಗಳಿಗೆ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು. ಕೃಷಿಕ ಕುಟುಂಬದ ಮಕ್ಕಳಿಗೆ ಶೇ.23.8ರಷ್ಟು ಸೀಟುಗಳನ್ನು ಮೀಸಲಿಟ್ಟು, ಆಯ್ಕೆಗಾಗಿ ತಹಸೀಲ್ದಾರರಿಂದ ಕೃಷಿಕರೆಂದು ಪ್ರಮಾಣ ಪತ್ರ ಪಡೆದ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿ ಧಾನ್ಯ, ಕಾಳು, ಸಸಿ, ರಾಸುಗಳ ಫೋಟೋ ಇತ್ಯಾದಿ 50 ಮಾದರಿಗಳನ್ನಿಟ್ಟು ಅವುಗಳನ್ನು 25 ನಿಮಿಷದಲ್ಲಿ ಗುರುತಿಸಲು ಹೇಳಲಾಗುತ್ತದೆ. ಇಲ್ಲಿ ಪಡೆದ ಅಂಕ ಹಾಗೂ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಸರಾಸರಿ ಅನ್ವಯ ಪ್ರವೇಶ ನೀಡಲಾಗುತ್ತಿದೆ. ಈ ವರ್ಷದಿಂದ ಪ್ರಾಯೋಗಿಕ ಪರೀಕ್ಷೆ ಹಾಗೂ ಸಿಇಟಿ ಅಂಕಗಳ ಸರಾಸರಿಯನ್ನು ಪರಿಗಣಿಸಲಾಗುತ್ತದೆ.
ಪರೀಕ್ಷೆ ಅವೈಜ್ಞಾನಿಕ: ಈ ಬಾರಿ ರಾಯಚೂರಿನಲ್ಲಿರುವ ಕೃಷಿ ವಿವಿ ಹೊರತುಪಡಿಸಿ ಧಾರವಾಡ, ಬೆಂಗಳೂರಿನ ಕೃಷಿ ವಿವಿಗಳು, ಬೀದರ್‌ನಲ್ಲಿರುವ ಪಶುವೈದ್ಯ ವಿವಿ, ಬಾಗಲಕೋಟೆಯ ತೋಟಗಾರಿಕೆ ವಿವಿ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿ ಇದೇ ರೀತಿಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿವೆ.
ಆದರೆ, ಈ ರೀತಿಯ ಪ್ರಾಯೋಗಿಕ ಪರೀಕ್ಷೆ ಎಷ್ಟು ವೈಜ್ಞಾನಿಕ? ಕೃಷಿ ಪದವಿಗೆ ಆಯ್ಕೆ ಮಾಡಲು ಇದಕ್ಕಿಂತ ಪರ್ಯಾಯ ಮಾರ್ಗ ಇಲ್ಲವೇ? ಎಂಬ ಗೊಂದಲಕ್ಕೆ ಪೂರಕವಾಗಿ ಈಗ ಎಲ್ಲ ಕೃಷಿ ವಿವಿಗಳು ತಮ್ಮ ನಿಲವನ್ನು ಸರ್ಕಾರಕ್ಕೆ ತಿಳಿಸಲು ಮುಂದಾಗಿವೆ.
ಸಮಸ್ಯೆ ಇದು: ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿರುವ ರೀತಿ ಹಲವು ವರ್ಷಗಳಿಂದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಟ ಪ್ರಾಯೋಗಿಕ ಪರೀಕ್ಷೆ ಸಂದರ್ಭದಲ್ಲಿ ಇಡಲಾಗುವ ಮಾದರಿಗಳನ್ನು ಸಹಜವಾಗಿ ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿ ಕನಿಷ್ಠ 10 ವರ್ಷಗಳು ಕೃಷಿಯಲ್ಲಿ ತೊಡಗಿರಬೇಕು. ಅಂದರೆ ಆತ ಶಾಲೆ-ಕಾಲೇಜಿಗೆ ಹೋಗಿ ಓದಿರಬಾರದು. ಸರ್ಕಾರದ ಉದ್ದೇಶದ ರೈತರ ಮಕ್ಕಳು ಓದಬಾರದು ಎಂದೇ?
ಟ ಮಲೆನಾಡಿನ ವಿದ್ಯಾರ್ಥಿಗಳಿಗೆ ಅಡಕೆಯ ಮಾದರಿಗಳಾದ ಸರಕು-ಬೆಟ್ಟೆ ಗೊತ್ತು. ಉತ್ತರ ಕರ್ನಾಟಕದ ಹುಡುಗರಿಗೆ ನವಣೆ-ಸಜ್ಜೆ ಗೊತ್ತು. ಆದರೆ ಅವರ ಕೃಷಿ ಇವರಿಗೆ, ಇವರ ಕೃಷಿ ಅವರಿಗೆ ಗೊತ್ತಿಲ್ಲ. ತಮ್ಮೂರಲ್ಲಿ ಇಲ್ಲದ ಬೆಳೆಯನ್ನು ಅವರು 16 ವರ್ಷದ ಜೀವನಾನುಭವದಲ್ಲಿ ನೋಡಿರುವುದಕ್ಕೂ ಸಾಧ್ಯವಿಲ್ಲ. ಗುರುತಿಸುವುದಾದರೂ ಹೇಗೆ?
ಟ ನಗರ ಪ್ರದೇಶದ ವಿದ್ಯಾರ್ಥಿಗಳು ಪೇಟೆಯಲ್ಲಿ, ಕೃಷಿ ಕಾಲೇಜುಗಳಲ್ಲಿ ಸುತ್ತಾಡಿ ವಿವಿಧ ಮಾದರಿಗಳ ಪರಿಚಯ ಮಾಡಿಕೊಂಡು, ಕಂಠಪಾಠ ಮಾಡಿ ಪ್ರಾಯೋಗಿಕ ಪರೀಕ್ಷೆಗೆ ಬರುತ್ತಾರೆ. ಆದರೆ ಹಳ್ಳಿಯಲ್ಲಿರುವ ವಿದ್ಯಾರ್ಥಿ ನೇರವಾಗಿ ಪರೀಕ್ಷೆಗೆ ಬರುತ್ತಾನೆ. ಅವನಿಗೆ ಈ ಪರೀಕ್ಷೆಯಿಂದ ನ್ಯಾಯ ಸಿಗುತ್ತದೆಯೇ?
ಟ ಈ ಹಿಂದೆ ಕೆಲವು ವಿವಿಗಳಲ್ಲಿ ವಿದ್ಯಾರ್ಥಿಗೆ ಉತ್ತಲು ಬರುತ್ತದೆಯೇ? ಎಡೆಕುಂಟೆ ಹೊಡೆಯಲು ಬರುತ್ತದೆಯೇ ಎಂದು ಪರೀಕ್ಷಿಸುತ್ತಿದ್ದರು. ವಿದ್ಯಾರ್ಥಿಯು ಹಿಂದಿನ 12 ವರ್ಷ ಅವಧಿಯಲ್ಲಿ ಶಾಲಾಕಾಲೇಜಿಗೆ ಹೋಗಬೇಕಿತ್ತೋ, ಹೊಲಗದ್ದೆಯಲ್ಲಿ ಗೇಯಬೇಕಿತ್ತೋ?
ಹಾಗಾಗಿ ಕೃಷಿ ಹಾಗೂ ಸಂಬಂಧಿತ ಪದವಿಗಳ ಪ್ರವೇಶಕ್ಕೆ ಕೃಷಿಕ ಕುಟುಂಬದ ವಿದ್ಯಾರ್ಥಿಗಳ ಆಯ್ಕೆಗಾಗಿ ನಡೆಸುತ್ತಿದ್ದ ಪ್ರಾಯೋಗಿಕ ಪರೀಕ್ಷೆಯೇ ಅವೈಜ್ಞಾನಿಕ ಎಂಬ ಚರ್ಚೆಗಳು ಪದೇಪದೇ ಬರುತ್ತಲೇ ಇದ್ದವು.
ಪದ್ಧತಿ ಬಂದಿದ್ದೇಕೆ?: ಪ್ರಾಯೋಗಿಕ ಪರೀಕ್ಷೆ ಎಂಬ ಪದ್ಧತಿ ಬಂದಿದ್ದೇ ಅಧಿಕಾರಶಾಹಿಗಳನ್ನು ಓಲೈಸಲು ಎಂಬುದೇ ವಿಚಿತ್ರ. ಯಾರೋ ತಮಗೆ ಬೇಕಾದವರೊಬ್ಬರಿಗೆ ಕೃಷಿ ಕಾಲೇಜಿನಲ್ಲಿ ಸೀಟು ಕೊಡಿಸಬೇಕೆಂದಾಗ ಅವರಿಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ನೀಡಿ ಒಳಗೆ ಕರೆದುಕೊಳ್ಳಲಾಗುತ್ತಿತ್ತು. ಬಹುವರ್ಷಗಳ ಕಾಲ ನಡೆದಿದ್ದು ಹೀಗೆಯೇ.
ಆದರೆ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯು ಪಾರದರ್ಶಕವಾಗಿರುವುದರಿಂದ ಈ ರೀತಿಯ ಲಾಬಿ ನಡೆಸುವುದು ಕಷ್ಟಸಾಧ್ಯ.
ಪರ್ಯಾಯವೇನು?: ಯಾವುದೇ ಒಬ್ಬ ವಿದ್ಯಾರ್ಥಿ ತಾನು ಕೃಷಿಕನ ಕುಟುಂಬದನು ಎಂದು ಪ್ರಮಾಣಪತ್ರ ತಂದರೆ ಸಾಕು. ಅದನ್ನೇ ಆಧಾರವಾಗಿಟ್ಟುಕೊಂಡು ಸಿಇಟಿ ರ್ಯಾಂಕ್ ಆದರಿಸಿ ಸೀಟು ಹಂಚುವುದು ಅತ್ಯಂತ ಸೂಕ್ತ. ಹಲವು ಕೃಷಿ ತಜ್ಞರು ಇದೇ ಅಭಿಪ್ರಾಯ ಪಡುತ್ತಾರೆ.
ಈ ರೀತಿಯ ಅವೈಜ್ಞಾನಿಕ ಪ್ರಾಯೋಗಿಕ ಪರೀಕ್ಷೆ ನಡೆಸಿ, ನಿಜವಾದ ಹಳ್ಳಿಯ ಮಕ್ಕಳಿಗೆ ಅನ್ಯಾಯ ಮಾಡುವುದಕ್ಕಿಂತ ಕೃಷಿಕ ಪ್ರಮಾಣ ಪತ್ರ ಆಧರಿಸಿ ಪ್ರವೇಶ ನೀಡಿದರೆ ಒಳ್ಳೆಯದು ಎಂಬುದು ಈ ಬಾರಿ ನಡೆದ ಪರೀಕ್ಷೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಬಹಳಷ್ಟು ಪೋಷಕರು ಅಭಿಪ್ರಾಯವೂ ಆಗಿದೆ.

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.