ಹೊಗಳಿಕೆ, ತೆಗಳಿಕೆ ಸ್ವೀಕರಿಸುವ ಮನಸ್ಸು ಬೆಳೆಸಿಕೊಳ್ಳಿ
ಕಪ್ರ ವಾರ್ತೆ, ಹೊಸನಗರ,ಮೇ 16
ಸಮಾಜದಲ್ಲಿ ಸೇವಾಕಾರ್ಯ ಮಾಡಬೇಕೆನ್ನುವ ತುಡಿತ ಇದ್ದರೆ ಸಾಲದು ಸಮಾಜದಿಂದ ಬರುವ ಹೊಗಳಿಕೆ, ತೆಗಳಿಕೆ ಎರಡನ್ನೂ ಸ್ವೀಕರಿಸಲು ಸಿದ್ಧರಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ತಾಲೂಕಿನ ಹೊಂಬುಜ ಜೈನಮಠದ ಗುಡ್ಡದ ಬಸದಿ ಪಂಚಕಲ್ಯಾಣ ಕಾರ್ಯಕ್ರಮದ ಸಮಾರೋಪದಲ್ಲಿ ಹೊಂಬುಜ ಅನುಸಂಧಾನ ಕೃತಿ ಲೋಕಾರ್ಪಣೆಗೊಳಿಸಿ, ಉತ್ತಮ ಚಿಂತನೆಗಳು ಆ ಪ್ರದೇಶದ ಗತಿಯನ್ನೇ ಬದಲಿಸುತ್ತದೆ ಎಂದರು.
ಸಂತಸ ತಂದಿದೆ: ಮಠಕ್ಕೆ ದೇವೇಂದ್ರ ಕೀರ್ತಿ ಸ್ವಾಮೀಜಿಗಳು ಬಂದ ಅಲ್ಪಾವಧಿಯಲ್ಲೇ ಮಠವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಹಿಂದಿನ ಶ್ರೀಗಳು ಸ್ವರ್ಗಸ್ಥರಾದ ನಂತರ ಮಠದ ನಿರ್ವಹಣೆ ತಮ್ಮ ನೇತೃತ್ವದಲ್ಲಾಗಿದ್ದು, ನಂತರ ಬಂದ ಶ್ರೀಗಳು ಉತ್ತಮ ಸ್ಥಿತಿಯತ್ತ ಕೊಂಡೊಯ್ದಿರುವುದು ಸಂತಸ ತರಿಸಿದೆ ಎಂದರು.
ದೇವೇಂದ್ರಕೀರ್ತಿ ಸ್ವಾಮೀಜಿಗಳು ಆಶೀರ್ವಚನ ನೀಡಿ, ಧರ್ಮದ ತಳಹದಿಯ ಮೇಲೆ ಉತ್ತಮ ಸಂಸ್ಕೃತಿ ಭಿತ್ತಬೇಕಾಗಿದೆ. ಧರ್ಮದ ಗುರಿಯನ್ನು ತಿಳಿಸುವ ಕಾರ್ಯ ಧರ್ಮ ಕ್ಷೇತ್ರಗಳಿಂದಾಗಬೇಕು ಎಂದು ಹೇಳಿದರು.
ಹೊಂಬುಜ ಮಠ ಏಳಿಗೆಯಲ್ಲಿ ಧರ್ಮಸ್ಥಳ ಹೆಗ್ಗಡೆಯವರ ಸಲಹೆ ಸೂಚನೆ ಮಹತ್ತರ ಪಾತ್ರವಹಿಸಿದೆ. ಗುರುಪೀಠ ಖಾಲಿಯಿದ್ದ ಸಂದರ್ಭದಲ್ಲಿ ಜಗದ್ಗುರುಗಳ ಆದೇಶದಂತೆ ಹೊಂಬುಜ ಮಠದ ನಿರ್ವಹಣೆ ಮಾಡಿದ ಹೆಗ್ಗಡೆಯವರ ಸಹಕಾರ ನೆನಪಿನಲ್ಲಿರುತ್ತದೆ ಎಂದು ತಿಳಿಸಿದರು.
ಹೆಗ್ಗಡೆಗೆ ಗೌರವ: ಹೊಂಬುಜ ಮಠದ ಏಳಿಗೆಗೆ ಹೆಚ್ಚಿನ ಸಹಕಾರ ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ದೇವೇಂದ್ರಕೀರ್ತಿ ಸ್ವಾಮೀಜಿಗಳು ಸನ್ಮಾನಿಸಿ ಗೌರವ ಸಮರ್ಪಿಸಿದರು. ಹಂಪ ನಾಗರಾಜಯ್ಯ ರಚಿಸಿದ ಈ ಸಾಂತರಸಿರಿ ಮತ್ತು ಹೊಂಬುಜ ಇತಿಹಾಸದ ಕನ್ನಡ, ಹಿಂದಿ, ಇಂಗ್ಲಿಷ್ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಕಮಲಾ ಹಂಪನಾಗೆ ಪ್ರಶಸ್ತಿ: ಕಾರ್ಯಕ್ರಮದಲ್ಲಿ ಹಂಪನಾ ದಂಪತಿಗಳಿಗೆ ಗೌರವಿಸಲಾಯಿತು. ನಾಡೋಜ ಕಮಲಾ ಹಂಪನಾರಿಗೆ ಸಿದ್ಧಾರ್ಥಕೀರ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕಮಲಾ ಹಂಪನಾ ಪ್ರಶಸ್ತಿ ಇಡೀ ಮಹಿಳಾ ಸಮಾಜಕ್ಕೆ ಸಂದಿದೆ. ಅತ್ಯಾಚಾರ, ಶೋಷಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಪ್ರಶಸ್ತಿ ನೀಡಿರುವುದು ಶ್ರೀಗಳಿಗೆ ಮಹಿಳೆಯರ ಬಗ್ಗೆ ಇರುವ ಗೌರವವನ್ನು ಪ್ರಚುರ ಪಡಿಸುತ್ತದೆ. ಇದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದರು.
ನಾಡೋಜ ಹಂಪ ನಾಗರಾಜಯ್ಯ, ಜೈನಮಠಕ್ಕೆ ಇತಿಹಾಸದಲ್ಲಿ ತನ್ನದೆ ಮಹತ್ವವನ್ನು ಲೋಕಕ್ಕೆ ಸಾರಿದ್ದು, ಇಂದು ಕೂಡ ಅದೇ ದಾರಿಯಲ್ಲಿ ಮುನ್ನಡೆಯುತ್ತಿದೆ. 12ನೇ ಶತಮಾನದ ಸಾಕಷ್ಟು ಶಿಲ್ಪಕಲಾಕೃತಿಗಳಿದ್ದು, ಅವುಗಳಿಗಾಗಿ ಇಲ್ಲೊಂದು ವಸ್ತು ಸಂಗ್ರಹಾಲಯ ತೆರೆಯುವಂತೆ ಮನವಿ ಮಾಡಿದರು.
ಧಾರ್ಮಿಕ ಸಭೆಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾ. ಅಜಿತ ಗುಂಜಾಳ್, ಪಂಚಕಲ್ಯಾಣ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಿ. ಸುರೇಂದ್ರಕುಮಾರ್, ಜೈನಗೆಜೆಟ್ ಸಂಪಾದಕ ಭರತ್ಕುಮಾರ್ ಕಾಲಾಜಿ, ನಿರ್ಮಲಕುಮಾರ ಶೇಠಿ, ಜೈನ ಸಮುದಾಯದ ಪ್ರಮುಖರು, ದಿಗಂಬರ ಮುನಿಗಳು, ಸಾಧ್ವಿ ಮಾತಾಜಿಯರು ಉಪಸ್ಥಿತರಿದ್ದರು.
ದಿವ್ಯ ಪುರೋಹಿತ್ ಪ್ರಾರ್ಥಿಸಿದರು. ಸತೀಶ್ ಜೈನ್ ಸ್ವಾಗತಿಸಿದರು, ಶ್ರೀಧರ ಪಿ.ಡಿ. ನಿರೂಪಿಸಿದರು. ಜೈನ ಮಹಿಳಾ ಸಮಾಜದ ಮಕ್ಕಳಿಂದ ನೃತ್ಯ ವೈಭವ ಮೂಡಿ ಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

