ಶಿವಮೊಗ್ಗ

ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಅಧಿಕೃತ ಆಹ್ವಾನ

Published On :

ಶಿಕಾರಿಪುರ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತ್ಯ ಅಕಾಡೆಮಿಯ ಹಲವು ಪ್ರಶಸ್ತಿಗೆ ಬಾಜನರಾಗಿರುವ ಸ. ಉಷಾರನ್ನು ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಅಧಿಕೃತವಾಗಿ ಕಸಾಪದಿಂದ ಆಹ್ವಾನಿಸುವ ಮೂಲಕ ಸಾಹಿತ್ಯ ಸಮ್ಮೇಳನದ ಚಟುವಟಿಕೆಗೆ ಚಾಲನೆ ನೀಡಲಾಯಿತು.
 ಶರಣರ ಮೂಲ ನೆಲೆ ಎಂದು ಪ್ರಸಿದ್ಧವಾದ ಶಿಕಾರಿಪುರ ತಾಲೂಕಿನ ಸಾಹಿತ್ಯ ಸಮ್ಮೇಳನಕ್ಕೆ ಇದೇ ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಕಸಾಪ ಸ್ಥಳೀಯ ಘಟಕದಿಂದ ಅಧ್ಯಕ್ಷ ಸುದರ್ಶನ್ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷೆ ಸ. ಉಷಾರಿಗೆ ಪುಷ್ಪಗುಚ್ಚ ನೀಡುವ ಮೂಲಕ ಸಾಂಪ್ರದಾಯಿಕ ಸ್ವಾಗತವನ್ನು ಕೋರಲಾಯಿತು. ಕನ್ನಡದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿರುವ ತಾಲೂಕಿನ ಸೊಸೆ ಈ ಬಾರಿಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ಸಂತಸವಾಗಿದೆ ಎಂದು ತಾ. ಕಸಾಪ ಅಧ್ಯಕ್ಷ ಸುದರ್ಶನ್ ತಿಳಿಸಿದ್ದಾರೆ.
 ಆಹ್ವಾನ ಮನ್ನಿಸಿ ಮಾತನಾಡಿದ ಸ. ಉಷಾ, ಶಿವಶರಣರು, ಅಕ್ಕಮಹಾದೇವಿ ಜನ್ಮಸ್ಥಳದ ಕಸಾಪ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಸಂತಸವಾಗಿದೆ. ಸಮ್ಮೇಳನ ಕೇವಲ ಸಾಂಪ್ರದಾಯಿಕವಾಗಿರದೆ ಸ್ಥಳೀಯರ ಜನಜೀವನ, ಬಾಷೆ, ಸಂಸ್ಕೃತಿ, ಜನಪದ ಇತಿಹಾಸದ ಬಗ್ಗೆ ಸಮಗ್ರ ಚರ್ಚೆಗೆ ವೇದಿಕೆಯಾಗಬೇಕಾಗಿದೆ ಎಂದು ತಮ್ಮ ಕಾಳಜಿ ವ್ಯಕ್ತಪಡಿಸಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ರತ್ನಯ್ಯ, ಸ್ಥಳೀಯ ಘಟಕದ ಪದಾಧಿಕಾರಿ ಹುಚ್ರಾಯಪ್ಪ, ಸತ್ಯನಾರಾಯಣ,ನರಸಿಂಹಸ್ವಾಮಿ ಇದ್ದರು.
ಸಮ್ಮೇಳನಾಧ್ಯಕ್ಷರ ಕಿರುಪರಿಚಯ: ಶಿಕಾರಿಪುರ ತಾ. ಕಸಾಪ ನಾಲ್ಕನೇ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸ. ಉಷಾರವರು ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಯಾಗಿದ್ದ ತಾಲೂಕಿನ ಹಿತ್ತಲ ಗ್ರಾಮದಲ್ಲಿ ವೈ. ಮಂಜಪ್ಪರ ಜತೆ ವಿವಾಹವಾಗುವ ಮೂಲಕ ತಾಲೂಕಿನ ಸೊಸೆಯಾದರು. 1973 ರಲ್ಲಿ ಬಂಗಾರದ ಪದಕ ಪಡೆದು ಸ್ನಾತಕೋತ್ತಕರ ಪದವಿ ಪೂರೈಸಿದ ಅವರು 2007 ರವರೆಗೆ ಸಿರಿಗೆರೆ, ಹೊಳಲ್ಕೆರೆ, ಅರಸೀಕೆರೆ ಮತ್ತಿತರ ಕಡೆ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯ ಜೀವನದಲ್ಲಿದ್ದಾರೆ.
 ವಿದ್ಯಾರ್ಥಿ ಜೀವನದಿಂದಲೂ ಸಾಹಿತ್ಯದ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದ ಅವರು, 1981 ರಲ್ಲಿ ತೊಗಲು ಗೊಂಬೆಯ ಆತ್ಮಕತೆ, 1990 ರಲ್ಲಿ ಈ ನೆಲದ ಹಾಡು, 2005 ರಲ್ಲಿ ಹವಳ ಹಾರಿದ ಹೊತ್ತು, 2007 ರಲ್ಲಿ ಕಸೂತಿ ಎಂಬ ಕವನ ಸಂಕಲವನ್ನು ರಚಿಸಿ ಬಿಡುಗಡೆಗೊಳಿಸಿದ್ದಾರೆ. 2012 ರಲ್ಲಿ ವೈದೇಹಿ ಪುಸ್ತಕದ ವಾಚಿಕೆ-ಸಹೃದಯ ವಿಮರ್ಶೆ ಪ್ರಕಟವಾಗಿದೆ. ತೊಗಲು ಗೊಂಬೆ ಆತ್ಮಕತೆ ಕೃತಿಗೆ ವರ್ದಮಾನ ಉದಯೋನ್ಮುಖ ಪ್ರಶಸ್ತಿ, ಈ ನೆಲದ ಹಾಡು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.