ಶಿವಮೊಗ್ಗ

ಮಣಿಪಾಲ್ ಆರೋಗ್ಯ ಕಾರ್ಡ್ ರಥಯಾತ್ರೆ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ  ಟಿ  ಮೇ 21
ನಗರದ ಬಾಲರಾಜ ಅರಸ್ ರಸ್ತೆಯಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ರಥಯಾತ್ರೆಗೆ ಚಾಲನೆ ದೊರೆಯಿತು.
ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಹಳ್ಳಿಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಬೇಕಾಗಿದೆ ಎಂದರು.
ಮುಂಜಾಗೃತೆ ವಹಿಸಿ: ಆರೋಗ್ಯವೇ ಭಾಗ್ಯ. ಮನುಷ್ಯನಿಗೆ ಎಷ್ಟೇ ಹಣ ಇದ್ದರೂ ಆರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇಂದಿನ ಒತ್ತಡದ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಕಾಯಿಲೆಗಳು ಬರುವ ಮುನ್ನವೇ ಮುಂಜಾಗೃತೆ ವಹಿಸುವುದು ಅವಶ್ಯಕ ಎಂದರು.
ಮಣಿಪಾಲಿನ ಕಸ್ತೂರಬಾ ಆಸ್ಪತ್ರೆ ಆರೋಗ್ಯದ ಜಾಗೃತಿಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದು, ಮಣಿಪಾಲ್ ಆರೋಗ್ಯಕಾರ್ಡ್ ಪರಿಚಯಿಸುವ ಮೂಲಕ ಬಡವರಿಗೆ ಸುಲಭ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಾಮಾಜಿಕ ಕಳಕಳಿ: ಮಣಿಪಾಲ್ ಆರೋಗ್ಯಕಾರ್ಡ್ ಮುಖ್ಯ ಪ್ರತಿನಿಧಿ ಅ.ನಾ. ವಿಜಯೇಂದ್ರ ರಾವ್ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಎಲ್ಲರಿಗೂ ಸುಲಭ ದರದಲ್ಲಿ ಆರೋಗ್ಯ ಲಭಿಸಲಿ ಎಂದು ಮಣಿಪಾಲ ವಿಶ್ವವಿದ್ಯಾಲಯ ಮತ್ತು ಮಣಿಪಾಲ ಕಸ್ತೂಬಾ ಆಸ್ಪತ್ರೆಯ ಸಹಯೋಗದಲ್ಲಿ 2013-14ರ ಆರೋಗ್ಯ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದಾರೆ.
ಶೇ.10ರಷ್ಟು ರಿಯಾಯಿತಿ: ಆಗಸ್ಟ್ ಒಂದರಿಂದ ಒಂದು ವರ್ಷ ವಾಯಿದೆ ಇರುವ ಆರೋಗ್ಯ ಕಾರ್ಡು ಒಬ್ಬರಿಗೆ 250, ಗಂಡ, ಹೆಂಡತಿ ಮತ್ತು 21 ವರ್ಷದ ಒಳಗಿನ ಎಷ್ಟೇ ಮಕ್ಕಳಿಗೆ 500, ಇದೇ ಆರೋಗ್ಯ  ಕಾರ್ಡುಗಳಿಗೆ ಅರ್ಜಿದಾರನ ತಂದೆ ಅಥವಾ ತಾಯಿಯನ್ನು ಸೇರಿಸಿದರೆ 600, ತಂದೆ, ತಾಯಿ ಇಬ್ಬರನ್ನು ಸೇರಿಸಿದರೆ 700 ಪಾವತಿಸಬೇಕು. ಕಳೆದ ವರ್ಷ ನೋಂದಾಯಿಸಿದ ಕಾರ್ಡುದಾರರಿಗೆ ಈ ಬಾರಿ ನೋಂದಣಿ ಮಾಡಿಸುವಾಗ ಶುಲ್ಕದಲ್ಲಿ ಶೇಕಡ ಶೇ.10ರಷ್ಟು ರಿಯಾಯಿತಿ ಇರುತ್ತದೆ.
ಕಾರ್ಡು ಹೊಂದಿರುವ ಹೊರ ರೋಗಿಗಳಿಗೆ ಒಂದು ವರ್ಷಗಳ ಕಾಲ ವೈದ್ಯಕೀಯ ತಪಾಸಣೆಯಲ್ಲಿ ಶೇಕಡ 50, ಮತ್ತು ವಿವಿಧ ಪ್ರಯೋಗಾಲಯ ತಪಾಸಣಾ ಶುಲ್ಕದಲ್ಲಿ ಶೇಕಡ 20, ಹಾಗೂ ಒಳ ರೋಗಿಗಳಾಗಿ ದಾಖಲಾದವರಿಗೆ ಒಟ್ಟು ಶುಲ್ಕದಲ್ಲಿ ಶೇಕಡ 25 ರಿಯಾಯಿತಿ ಇರುತ್ತದೆ. ಮಣಿಪಾಲ ಆಸ್ಪತ್ರೆಯಲ್ಲಿ ಖರೀದಿಸಿದ ಔಷಧಿಗಳ ಒಟ್ಟು ಶುಲ್ಕದಲ್ಲಿ ಶೇಕಡ 10ರ ರಿಯಾಯಿತಿ ದೊರೆಯುತ್ತದೆ.
ಈ ರಥಯಾತ್ರೆಯು ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲೂ ಕೂಡ ಸಂಚರಿಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತದೆ ಎಂದರು. ಕಾರ್ಡು ನೋಂದಾಯಿಸಲು ಜೂ.30 ಕಡೆಯದಿನವಾಗಿದ್ದು, ಆಸಕ್ತರು ಮೊ.ಸಂ. 9448700127ಗೆ ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಅಧಿಕಾರಿ ರವಿಕಿರಣಣ್ಪೈ, ರೋಟರಿ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಜೆ. ವಿಜಯಕುಮಾರ್, ಪ್ರತಿನಿಧಿ ಯಶವಂತ ರಾಯ್ಕರ್ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.