ಅಧಿಕಾರಿಗಳು ಪ್ರಾಮಾಣಿಕ ಸೇವೆ ಸಲ್ಲಿಸಿ
ಸಾಗರ: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ತಳಮಟ್ಟದ ವ್ಯಕ್ತಿಗಳಿಗೂ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವಾರು ಯೋಜನೆಗಳ ಸಮರ್ಪಕ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಫಲಾನುಭವಿಗಳ ಪಟ್ಟಿ: ರಾಜೀವಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ ತಾಲೂಕಿನಲ್ಲಿ 4,500 ಫಲಾನುಭವಿಗಳು ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ಕಳೆದ ಆರು ತಿಂಗಳಿಂದ ಕಾಯುತ್ತಿದ್ದು ಅವರೆಲ್ಲರಿಗೂ ಸಂಪರ್ಕ ಕಲ್ಪಿಸುವ ಕೆಲಸ ತಕ್ಷಣ ಆಗಬೇಕು. ಇನ್ನೂ ಆರು ಪಂಚಾಯ್ತಿಗಳು ಫಲಾನುಭವಿಗಳ ಪಟ್ಟಿ ಸಲ್ಲಿಸದಿರುವ ಕುರಿತು ಆಕ್ಷೇಪಿಸಿದ ಅವರು ಒಂದು ವಾರದೊಳಗಾಗಿ ಪಟ್ಟಿ ಸಿದ್ಧಪಡಿಸಲು ಸೂಚಿಸಿದರು.
ಸೂರು ಒದಗಿಸಲಾಗುವುದು: ಒಂದು ತಿಂಗಳಿನೊಳಗೆ ಆಶ್ರಯ ಸಮಿತಿ ರಚನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಅರಣ್ಯಭೂಮಿ, ಕಂದಾಯ ಭೂಮಿ ಹಾಗೂ ಗ್ರಾಮಠಾಣಾ ಹೊರತುಪಡಿಸಿ ಉಳಿದ ಭಾಗಗಳಲ್ಲಿ ನಿವೇಶನರಹಿತರಿಗೆ ಸೂರು ಒದಗಿಸಲಾಗುವುದು. ತಕ್ಷಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನರಹಿತರ ಪಟ್ಟಿ ತಯಾರಿಸುವಂತೆ ಆದೇಶ ನೀಡಿದರು.
ಕಾಯ್ದೆ ಜಾರಿ: ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಮನೆ ನಿರ್ಮಾಣ, ಶಾಲೆ ಹಾಗೂ ಕೆರೆಗಳ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬಹುದು. ಅದನ್ನು ಪಿಡಿಓಗಳು ಹಾಗೂ ಕಾರ್ಯದರ್ಶಿಗಳು ಪರಿಗಣನೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳಿ ಎಂದ ಅವರು, ಸರ್ಕಾರ ಎಲ್ಲರಿಗೂ ಸೂರು ಒದಗಿಸುವ ಸಂಕಲ್ಪ ಮಾಡಿದ್ದು 94ಸಿ ಕಾಯ್ದೆಗೆ ಶೀಘ್ರದಲ್ಲಿಯೆ ತಿದ್ದುಪಡಿ ತರಲಿದೆ. ಕಾಯ್ದೆ ಜಾರಿಯಾದ ತಕ್ಷಣ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಪಿಡಿಓ ಹಾಗೂ ಕಾರ್ಯದರ್ಶಿಗಳು ಗ್ರಾಮನಕ್ಷೆಗಳಲ್ಲಿ ಮನೆಗಳನ್ನು ನಮೂದಿಸಿ ಹಕ್ಕುಪತ್ರ ಪಡೆದ ಮತ್ತು ಪಡೆಯದ ಮನೆಗಳನ್ನು ಗುರುತಿಸಿ ಪಟ್ಟಿಯನ್ನು ತಯಾರಿಸಬೇಕು. ಇದರ ಆಧಾರದಲ್ಲಿಯೇ ಹಕ್ಕುಪತ್ರ ನೀಡುವ ಕೆಲಸ ಪ್ರಾರಂಭಿಸಬೇಕಿದೆ ಎಂದರು.
ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಉಪಾಧ್ಯಕ್ಷೆ ಗೌರಮ್ಮ ರಾಮಪ್ಪ, ತಹಸೀಲ್ದಾರ್ ಆರ್. ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ ಡಾ. ಸದಾಶಿವ ಹಾಗೂ ತಾಪಂ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

